ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ: ಸಿದ್ದರಾಜು ಬಂಧನ

Last Updated 11 ಆಗಸ್ಟ್ 2022, 4:26 IST
ಅಕ್ಷರ ಗಾತ್ರ

ಬೆಂಗಳೂರು: ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹ 59.50 ಲಕ್ಷ ಹಣ ಪಡೆದಿದ್ದ ಆರೋಪಿ ಸಿದ್ದರಾಜು ಕಟ್ಟಿಮನಿ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಈತ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಹೆಸರು ಬಳಸಿಕೊಂಡು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ.

ಕಲಬುರಗಿ ಜಿಲ್ಲೆಯ ಅಫಜಲಪುರದ ಯುವತಿ ಸವಿತಾ ಶಾಂತಪ್ಪ ಎಂಬುವರಿಗೆ ತಹಶೀಲ್ದಾರ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ, ಹಣ ಪಡೆದಿದ್ದ. ಬೆಂಗಳೂರಿನ ವಿಜಯನಗರದ ಪಿ.ಜಿಯಲ್ಲಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಯಲ್ಲಿದ್ದಾಗ ಯುವತಿಗೆ ಆರೋಪಿ ಪರಿಚಯವಾಗಿದ್ದ. ಕೆಲಸ ಹಾಗೂ ಹಣ ಎರಡೂ ಸಿಗದಿರುವಾಗ ವಂಚನೆಗೆ ಒಳಗಾದ ಯುವತಿ ಆಗಸ್ಟ್‌ 6ರಂದು ಪೊಲೀಸರಿಗೆ ದೂರು ನೀಡಿದ್ದರು.

‘ಹಂತ ಹಂತವಾಗಿ ಹಣ ಪಡೆದುಕೊಂಡಿದ್ದ. ಮೊದಲ ಕಂತಿನಲ್ಲಿ ₹ 15 ಲಕ್ಷ ಪಡೆದಿದ್ದ. ಬಳಿಕ ಉಳಿಕೆ ಹಣ ಪಡೆದಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆದರಿಕೆ ಹಾಕಿದ್ದ ಆರೋಪಿ: ‘ಹಣ ವಾಪಸ್‌ ನೀಡುವಂತೆ ಯುವತಿ ಹಾಗೂ ಆಕೆಯ ತಂದೆ ಕೇಳಿದಾಗ ಮನೆಯಲ್ಲಿ ಯಾರನ್ನೂ ಜೀವಂತವಾಗಿ ಉಳಿಸುವುದಿಲ್ಲ. ಹಣ ಸಹ ವಾಪಸ್‌ ನೀಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದ. ವಾಮಮಾರ್ಗದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಿದ್ದ ಯುವತಿಗೆ ತಂದೆ ಸಾಲ ಮಾಡಿ ಹಣ ನೀಡಿದ್ದರು. ಆರೋಪಿ ಸಿದ್ದರಾಜು ಸಹ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ. ಅದರಲ್ಲಿ ಯಶಸ್ಸು ಕಂಡಿರಲಿಲ್ಲ. ಪರೀಕ್ಷೆಗೆ ಸಾಕಷ್ಟು ಹಣವನ್ನೂ ಕಳೆದುಕೊಂಡಿದ್ದ. ಬಳಿಕ ವಂಚನೆಗೆ ಮುಂದಾಗಿದ್ದ. ಈತ ಮತ್ತಷ್ಟು ಉದ್ಯೋಗ ಆಕಾಂಕ್ಷಿಗಳಿಂದ ಹಣ ಪಡೆದಿರುವ ಅನುಮಾನವಿದೆ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

*
ಆರೋಪಿಯ ಮೊಬೈಲ್‌ನಲ್ಲಿ ಕೆಲವು ಡಿ.ಸಿ ಹಾಗೂ ಎಸ್‌ಪಿಗಳ ಮೊಬೈಲ್‌ ಸಂಖ್ಯೆ ಹಾಗೂ ಹೆಸರುಗಳಿವೆ. ಅವರ ಪರಿಚಯವಿದೆ ಎಂದು ನಂಬಿಸಿ ವಂಚಿಸಿದ್ದ.
– ಲಕ್ಷ್ಮಣ ನಿಂಬರಗಿ, ಡಿಸಿಪಿ, ಪಶ್ಚಿಮ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT