ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಾಯದ ನೆಪದಲ್ಲಿ ಹಲವರಿಗೆ ವಂಚನೆ: 32 ಎಟಿಎಂ ಕಾರ್ಡ್‌ ಹೊಂದಿದ್ದ ಆರೋಪಿ!

Published 6 ಆಗಸ್ಟ್ 2024, 15:48 IST
Last Updated 6 ಆಗಸ್ಟ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಎಟಿಎಂ ಯಂತ್ರಗಳಲ್ಲಿ ಹಣ ಡ್ರಾ ಮಾಡಲು ಬರುವವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಾಗರ್‌ ಅಲಿಯಾಸ್‌ ದಿಲೀಪ್‌(32) ಬಂಧಿತ ಆರೋಪಿ.‌

‘ಬಂಧಿತನಿಂದ 32 ಎಟಿಎಂ ಕಾರ್ಡ್‌ ಹಾಗೂ ₹4 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಾಲೂರಿನ ಭಂಟನಹಳ್ಳಿಯ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಜುಲೈ 31ರಂದು ಬೇಗೂರು ಮುಖ್ಯ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ದೂರು ನೀಡಿದ್ದ ವ್ಯಕ್ತಿ ಹಣ ಡ್ರಾ ಮಾಡಲು ತೆರಳುತ್ತಿದ್ದರು. ಆಗ ಅವರಿಗೆ ಹಣ ಮಾಡಲು ಸಾಧ್ಯವಾಗಿರಲಿಲ್ಲ. ಎಟಿಎಂ ಎದುರೇ ಕಾದಿದ್ದ ಆರೋಪಿ ಸಹಾಯ ಮಾಡುವುದಾಗಿ ಹೇಳಿದ್ದ. ಅದನ್ನೇ ನಂಬಿದ ಅವರು ಆರೋಪಿಗೆ ಕಾರ್ಡ್‌ ನೀಡಿ ಪಿನ್‌ನ ಮಾಹಿತಿ ಕೊಟ್ಟಿದ್ದರು. ಅವರಿಗೆ ತಿಳಿಯದಂತೆ ಆರೋಪಿ ಕಾರ್ಡ್‌ ಬದಲಾವಣೆ ಮಾಡಿದ್ದ. ಹಣ ಡ್ರಾ ಮಾಡಲು ಸಾಧ್ಯವಿಲ್ಲ ಹೇಳಿ ತನ್ನ ಬಳಿಯಿದ್ದ ಮತ್ತೊಂದು ಕಾರ್ಡ್‌ ನೀಡಿದ್ದ. ಅವರು ಅಲ್ಲಿಂದ ತೆರಳಿದ ಮೇಲೆ ₹61,500 ಡ್ರಾ ಮಾಡಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಪ್ಯಾಂಟ್, ಶರ್ಟ್‌ ಜೇಬಿನಲ್ಲಿ ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳನ್ನು ಇಟ್ಟುಕೊಳ್ಳುತ್ತಿದ್ದ. ಬೇರೆ ಬೇರೆ ಬ್ಯಾಂಕ್‌ನ ಶಾಖೆಗಳ ಎಟಿಎಂ ಕೇಂದ್ರ ಬಳಿ ಕಾದು ನಿಲ್ಲುತ್ತಿದ್ದ. ಅಲ್ಲಿಗೆ ಬಂದವರಿಗೆ ಸಹಾಯ ಮಾಡುವುದಾಗಿ ಹೇಳಿ, ಕಾರ್ಡ್‌ ಹಾಗೂ ಪಿನ್‌ ಪಡೆದುಕೊಳ್ಳುತ್ತಿದ್ದ. ತನ್ನ ಜೇಬಿನಲ್ಲಿದ್ದ ಅದೇ ಬ್ಯಾಂಕ್‌ನ ಕಾರ್ಡ್‌ ಅನ್ನು ಕ್ಷಣಾರ್ಧದಲ್ಲಿ ಬದಲಾವಣೆ ಮಾಡುತ್ತಿದ್ದ. ಅವರ ಎದುರೇ ಹಣ ಡ್ರಾ ಮಾಡುವಂತೆ ನಟನೆ ಮಾಡಿ, ಹಣ ಬರುತ್ತಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದ. ಖಾತೆದಾರರು ಅಲ್ಲಿಂದ ತೆರಳಿದ ಮೇಲೆ ಅಸಲಿ ಕಾರ್ಡ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಪರಾರಿ ಆಗುತ್ತಿದ್ದ’ ಎಂದು ವಿವರ ನೀಡಿದರು.

‘ಆರೋಪಿಯ ವಿರುದ್ಧ ಚಂದ್ರಾಲೇಔಟ್ ಹಾಗೂ ಉಪ್ಪಾರಪೇಟೆ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಆರೋಪಿಯಿಂದ ನಿಷ್ಕ್ರಿಯಗೊಂಡ ಎಟಿಎಂ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT