ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೂ ನಾಗರಿಕಹಕ್ಕು–‘ಸುಪ್ರೀಂ’: ಇವರಿಗೂ ಸ್ವಾತಂತ್ರ್ಯ ಬಂತು

Last Updated 6 ಸೆಪ್ಟೆಂಬರ್ 2018, 11:18 IST
ಅಕ್ಷರ ಗಾತ್ರ

ಗುರುವಾರ ಬೆಳಿಗ್ಗೆ ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪು ನೀಡಿತು. ‘ಇಡೀ ಸಮಾಜವೇ ನಿಮ್ಮಲ್ಲಿ ಕ್ಷಮೆ ಕೋರಬೇಕು’ ಎಂದು ಮನಮಿಡಿಯುವ ಮಾತನ್ನೂ ಹೇಳಿತು. ಲಿಂಗತ್ವ ಅಲ್ಪಸಂಖ್ಯಾತರಿಗೂ ಎಲ್ಲಾ ನಾಗರಿಕ ಹಕ್ಕುಗಳನ್ನು ನೀಡುವ ಮಹತ್ವದ ತೀರ್ಪು ಕೊನೆಗೂ ಹೊರಬಿದ್ದಿದೆ.

ಸೀರೆ ಉಟ್ಟರೂ ಬದಲಾಯಿಸಲಾಗದ ಪುರುಷನ ಲಕ್ಷಣಗಳು, ಲುಂಗಿ ಮತ್ತು ಶರ್ಟು ಧರಿಸಿದರೂ ಎದ್ದುಕಾಣುವ ಸ್ತನಗಳು... ಹೆಜ್ಜೆ ಹೆಜ್ಜೆಗೆ ಎದುರಾಗುತ್ತಿದ್ದ ಹೇವರಿಕೆಯ ನೋಟ, ಅಸಹ್ಯ ಅಸಭ್ಯ ಕೀಟಲೆಯ ಮಾತುಗಳು... ಸಿಗ್ನಲ್‌ನಲ್ಲಿ ಭಿಕ್ಷೆ ಹಾಕಿದವರನ್ನೇ ಪ್ರಶ್ನಾರ್ಥವಾಗಿ ನೋಡುವ ಕಣ್ಣುಗಳು, ಮಗಳು ಮಗಳಲ್ಲ ಮಗ ಎಂದು ಗೊತ್ತಾಗುತ್ತಲೇ ಹೆತ್ತವರೇ ಒದ್ದು ಹೊರಹಾಕಿದ ಘಟನೆಗಳು .... ಅಬ್ಬಾ! ಅವರ ಕಷ್ಟ ಒಂದೇ ಎರಡೇ?

ಇವತ್ತು ಪ್ರಕಟಿಸಲಾಗಿರುವ ತೀರ್ಪು ಅವರಿಗೆ ಎಷ್ಟು ಮಹತ್ವದ್ದು? ಸಮಾಜದಿಂದ ಅವರು ನಿರೀಕ್ಷಿಸುವುದೇನು ಎಂದು ಅವರೇ ಹೇಳಿಕೊಂಡಿದ್ದಾರೆ...

‘ಮಂಥನ್‌ ಲಾ’ ಎಂಬ ಸಂಘಟನೆಯ ಕಾರ್ಯಕರ್ತೆ ಮತ್ತು ವಕೀಲರಾಗಿರುವ ಮೈತ್ರೇಯಿ ಕೃಷ್ಣನ್‌ ಅವರು ಈ ದಿನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರಂತೆ.

‘ದೆಹಲಿ ಹೈಕೋರ್ಟ್‌ ಈ ಹಿಂದೆ ತೀರ್ಪು ನೀಡಿದ ಬೆನ್ನಲ್ಲೇ ಈ ತೀರ್ಪು ಬರಬೇಕಿತ್ತು. ಇಷ್ಟು ದಿನಗಳ ಹೋರಾಟಕ್ಕೆ ನಿಜಕ್ಕೂ ಗೆಲುವು ಸಿಕ್ಕಿದೆ. ನಮಗೂಮೂಲಭೂತ ಹಕ್ಕುಗಳು ಸಿಕ್ಕಿದಂತಾಗಿದೆ. ಸಂವಿಧಾನ ರಚನೆಯಾಗಿ ಇಷ್ಟು ದಶಕಗಳ ತನಕವೂ ನಮ್ಮ ಮೂಲಭೂತ ಹಕ್ಕುಗಳನ್ನು ಸಮಾಜ ತಡೆಹಿಡಿದಿತ್ತು. ಈಗ ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ’ ಎಂದು ಮೈತ್ರೇಯಿ ಹೇಳುತ್ತಾರೆ.

‘ಬೀದಿಗಳಿಂದ ರಾಷ್ಟ್ರೀಯ ಮಟ್ಟದ ಹೋರಾಟಗಳು ನಡೆದಿದ್ದರೂ ನಮ್ಮನ್ನು ಮನುಷ್ಯರಂತೆ ಸಮಾಜ ನೋಡಿಲ್ಲ. ಪೊಲೀಸರು ನಮಗೆ ಕಿರುಕುಳ ನೀಡುವುದೂ ನಡೆದೇ ಇದೆ. ಈಗ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದರೂ ಎಲ್ಲವೂ ಒಂದೇ ಸಲಕ್ಕೆ ಬದಲಾಗುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮೇಲೆ, ಸಂಘಟಕರು ಮತ್ತು ಹೋರಾಟಗಾರರ ಮೇಲೆ ಹೊಸ ಜವಾಬ್ದಾರಿ ಈಗ ಬಂದಿದೆ. ಈ ತೀರ್ಪು ನೀಡಿರುವ ಸಮಾನತೆಯ ಹಕ್ಕನ್ನು ಅರ್ಥ ಮಾಡಿಕೊಂಡು ನಾವು ಮುನ್ನಡೆಯಬೇಕು. ಸಮಾಜ ಇದನ್ನು ಸ್ವೀಕರಿಸಿ ನಮಗೂ ಸಮಾನತೆಯ ಅವಕಾಶ ನೀಡಬೇಕು. ಇನ್ನು ಯಾರೂ ನಮ್ಮನ್ನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಗೇಲಿ ಮಾಡುವಂತಿಲ್ಲ. ಮಾಡಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ’ ಎಂದು ಮೈತ್ರೇಯಿ ವಿವರಿಸುತ್ತಾರೆ.

ರೂಮಿ ಹರೀಶ್‌ ಹೇಳುತ್ತಾರೆ...

ಹೆಸರಾಂತ ಹಿಂದೂಸ್ತಾನಿ ಗಾಯಕರಾದ ಸುಮತಿ ಮೂರ್ತಿ, ತಾವು ಪುರುಷ ಎಂದು ಅಫಿಡವಿಟ್‌ ಕೂಡಾ ಮಾಡಿಸಿಕೊಂಡು, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸಿದವರು. ಈಗ ಅವರ ಹೆಸರು ‘ರೂಮಿ ಹರೀಶ್‌’.

‘ಸುಪ್ರೀಂ ಕೋರ್ಟು ತೀರ್ಪು ನೀಡಿದ ತಕ್ಷಣ ಸಮಾಜ ಬದಲಾಗುತ್ತದೆ ಎಂಬ ನಿರೀಕ್ಷೆಯೇ ನಮಗಿಲ್ಲ. ನಮ್ಮ ಹಕ್ಕನ್ನು ನಾವೇ ಚಲಾಯಿಸಬೇಕು. ಬಾಬಾ ಸಾಹೇಬ್‌ ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ಭಾರತದಂತಹ ದೇಶದಲ್ಲಿ ಇಂತಹ ತೀರ್ಪಿನ ಬಗ್ಗೆ ಕನಸು ಕಾಣುವುದೂ ಸಾಧ್ಯವಾಗುತ್ತಿರಲಿಲ್ಲ. ನಾವು, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಅಂಬೇಡ್ಕರ್‌ ವಾದಗಳನ್ನೇ ಪಾಲಿಸುವವರು. ಇನ್ನು ಮುಂದೆ ನಾವು ನಮ್ಮ ಕುಟುಂಬ, ಸ್ನೇಹಿತರ ವಲಯ ಮತ್ತು ಸಾಮಾಜಿಕವಾಗಿಯೂ ನಮ್ಮ ಲಿಂಗತ್ವದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಬಹುದು. ಎಷ್ಟೋ ಮಂದಿ ಕುಟುಂಬದಿಂದ ದೂರವಾದವರಿದ್ದಾರೆ.

‘ಸಮಾಜ ಬದಲಾಗಲೇಬೇಕಾಗಿದೆ. ನಮ್ಮ ಸಮುದಾಯದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ‍ಪೊಲೀಸರಿಗೆ ಆಪ್ತ ಸಮಾಲೋಚನೆ ತರಬೇತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿರುವುದು ಬಹಳ ಮಹತ್ವದ ಅಂಶ. ನಮ್ಮ ಸಮುದಾಯದವರು ವಿಚಿತ್ರವಾಗಿ ವರ್ತಿಸುತ್ತಾರೆ, ಒರಟಾಗಿ ನಡೆದುಕೊಳ್ಳುತ್ತಾರೆ, ಕಳ್ಳತನ ಮಾಡುತ್ತಾರೆ ಎಂಬ ಆರೋಪವಿದೆ. ಮೊದಲು ಸಮಾಜ ಬದಲಾಗಲಿ. ಆಮೇಲೆ ನಮ್ಮ ಸಮುದಾಯ ಬದಲಾಗುತ್ತದೆ’ ಎಂಬುದು ರೂಮಿ ಖಡಕ್‌ ಮಾತು.

‘ನಾನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ ನಾನು ಹೆಣ್ಣಲ್ಲ, ಗಂಡು ಎಂದು ಹೇಳಿಕೊಳ್ಳಲು ಹೆದರುತ್ತಿದ್ದೆ. ಈಗ ಮೂರು ವರ್ಷಗಳ ಹಿಂದೆ ದೃಢ ನಿರ್ಧಾರ ಮಾಡಿ ‘ನಾನು ಗಂಡು’ ಎಂದು ಮುಕ್ತವಾಗಿ ಹೇಳಿಕೊಳ್ಳಲಾರಂಭಿಸಿದೆ. ಈಗ ನಾನು ‘ರೂಮಿ ಹರೀಶ್‌’ ಎಂದು ಅಫಿಡವಿಟ್‌ ಮಾಡಿಕೊಂಡಿದ್ದರೂ ‘ಮೇಡಂ’ ಎಂದೇ ಕರೆಯುವವರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೂಮಿ.

‘ಆಲ್ಟರ್ನೆಟಿವ್‌ ಲಾ ಫೋರಂ’ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಪ್ರಮುಖ ಸಂಘಟನೆಗಳಲ್ಲೊಂದು. ದೀಪ್ತಾ ಅದರ ಸಕ್ರಿಯ ಕಾರ್ಯಕರ್ತೆ. ‘ಇವತ್ತು ತೀರ್ಪು ಪ್ರಕಟಿಸುವ ವೇಳೆ ಇಂದು ಮಲ್ಹೋತ್ರಾ ಹೇಳಿದ ಮಾತು ಅತ್ಯಂತ ಮಹತ್ವದ್ದು. ‘ಇಷ್ಟು ದಿನ ನಿಮ್ಮ ಹಕ್ಕುಗಳಿಗಾಗಿ ನೀವು ಕಾಯುವಂತೆ ಮಾಡಿದ್ದಕ್ಕಾಗಿಇಡೀ ದೇಶವೇ ನಿಮ್ಮ ಕ್ಷಮೆ ಕೋರಬೇಕು’ ಎಂದರು ಅವರು. ಈ ತೀರ್ಪಿನಿಂದಾಗಿ ನಮಗೂ ಕೌಟುಂಬಿಕ ಹಕ್ಕುಗಳು ಸಿಗಲಿವೆ. ಮದುವೆ, ಕುಟುಂಬ, ಆಸ್ತಿಯ ಹಕ್ಕು ಸಿಗಲಿದೆ. ಇಷ್ಟು ದಿನ ವಂಚಿತರಾಗಿದ್ದ ಎಲ್ಲ ನಾಗರಿಕ ಹಕ್ಕುಗಳನ್ನು ನಾವೂ ಇನ್ನು ಅನುಭವಿಸಬಹುದು’ ಎಂದು ದೀಪ್ತಾ ಹೇಳುತ್ತಾರೆ.

ಒಟ್ಟಿನಲ್ಲಿ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲಾ ಹಕ್ಕುಗಳಿಂದ ವಂಚಿತವಾಗಿದ್ದ ಸಮುದಾಯಕ್ಕೆ ಸೆಪ್ಟೆಂಬರ್‌ 6, 2018ರ ಈ ದಿನವೇ ಸ್ವಾತಂತ್ರ್ಯೋತ್ಸವ ದಿನ ಎನ್ನಲು ಅಡ್ಡಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT