ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ: ಪದೇ ಪದೇ ಕಾಣಿಸಿಕೊಳ್ಳುತ್ತಿದೆ ಬೆಂಕಿ

ಕಿಚ್ಚು ಹಬ್ಬದಂತೆ ಅರಣ್ಯ ಇಲಾಖೆ ಕ್ರಮ
Last Updated 29 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಾಗೂ ಅದರ ಆಸುಪಾಸಿನಲ್ಲಿರುವ ಗೋಮಾಳ ಜಮೀನುಗಳಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದು ಅನೇಕ ಜೀವಜಂತುಗಳ ಸಾವಿಗೆ ಕಾರಣವಾಗುತ್ತಿರುವ ಬಗ್ಗೆ ಪರಿಸರ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿರುವ ಶಿವನಹಳ್ಳಿ ಗ್ರಾಮದ ಸಮೀಪದ ಜಯಪುರ ದೊಡ್ಡಿ ಪರಿಸರದಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ ಮಾಹಿತಿ ನೀಡಿದರು.

‘ಈ ಪರಿಸರದಲ್ಲಿ ಕಳೆದ ಒಂದು ವಾರದಲ್ಲಿ ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದೆ. ಎರಡು ಬಾರಿ ನಾವೇ ಬೆಂಕಿ ಆರಿಸಿದ್ದೇವೆ. ಜಾನುವಾರುಗಳನ್ನು ಮೇಯಿಸುವವರು ಬೇಕೆಂದೇ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮಳೆ ಬಂದ ಬಳಿಕ ಹುಲುಸಾಗಿ ಹುಲ್ಲು ಬೆಳೆಯುತ್ತದೆ. ಈ ಸಣ್ಣ ಪ್ರಮಾಣದ ಬೆಂಕಿಯೂ ಹಾವು, ಸಣ್ಣ ಪುಟ್ಟ ಪಕ್ಷಿಗಳು ಸೇರಿದಂತೆ ಅನೇಕ ಜೀವಜಂತುಗಳ ಪ್ರಾಣಕ್ಕೆ ಕುತ್ತು ತರುತ್ತದೆ. ನಿಯಂತ್ರಣ ತಪ್ಪಿದರೆ ಸಣ್ಣ ಬೆಂಕಿಯೇ ಕಾಡ್ಗಿಚ್ಚಾಗಿ ಹಬ್ಬುವ ಅಪಾಯವೂ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸ್ಥಳೀಯರೊಬ್ಬರು ಕಳವಳ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಗುಳ್ಳಹಟ್ಟಿ ಕಾವಲ್‌ ಪರಿಸರದಲ್ಲಿಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು ನಿಜ. ಈ ಪರಿಸರವೂ ಶಿವನಹಳ್ಳಿ ಸಮೀಪದಲ್ಲೇ ಇದೆ. ಅದನ್ನು ನಮ್ಮ ಇಲಾಖೆ ಸಿಬ್ಬಂದಿಯೇ ತಹಬಂದಿಗೆ ತಂದಿದ್ದಾರೆ’ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಪ್ರಶಾಂತ್‌ ಹೇಳಿದರು.

ಗುಳ್ಳಹಟ್ಟಿ ಕಾವಲ್‌ ಪ್ರದೇಶವು ಒಟ್ಟು 4779 ಎಕರೆಗಳಷ್ಟಿದೆ. ಇದರಲ್ಲಿ 3779 ಎಕರೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯೊಳಗೆ ಬರುತ್ತದೆ.

‘ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಜಾನುವಾರು ಮೇಯಿಸುವವರೇ ಬೆಂಕಿ ಹಚ್ಚಿರುವ ಸಾಧ್ಯತೆಯೂ ಇದೆ. ಆದರೆ ಅಂತಹವರನ್ನು ಪತ್ತೆ ಹಚ್ಚುವುದು ಕಷ್ಟ. ಕಾಡಿಗೆ ಬೆಂಕಿ ಬೀಳದಂತೆ ನಮ್ಮ ಅರಣ್ಯ ವೀಕ್ಷಕರು ಎಚ್ಚರವಹಿಸುತ್ತಾರೆ’ ಎಂದು ಡಿಸಿಎಫ್‌ ತಿಳಿಸಿದರು.

‘ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದರೆ ಅವರನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ಅವರು ಎಚ್ಚರಿಸಿದರು.

350 ಕಿ.ಮೀ ಬೆಂಕಿ ರೇಖೆ

‘ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ಹಬ್ಬುವುದನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆಯು 350 ಕಿ.ಮೀ ಬೆಂಕಿ ರೇಖೆಗಳ ನಿರ್ವಹಿಸುತ್ತಿದೆ. ಬೇಸಿಗೆಯಲ್ಲಿ ಬೆಂಕಿ ಬೀಳದಂತೆ ನಿಗಾ ಇಡುವುದಕ್ಕಾಗಿ ಹಾಗೂ ಆಕಸ್ಮಾತ್‌ ಬೆಂಕಿ ಕಾಣಿಸಿಕೊಂಡರೆ ನಂದಿಸುವುದಕ್ಕಾಗಿ ಕಾಯಂ ಅರಣ್ಯ ವೀಕ್ಷಕರ ಜೊತೆಗೆ ಹೆಚ್ಚುವರಿ ವೀಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಬೆಂಕಿ ನಿಯಂತ್ರಣಕ್ಕಾಗಿ ಪ್ರತಿ ವಲಯದಲ್ಲೂ ತಲಾ ಒಂದು ಬಾಡಿಗೆ ವಾಹನವನ್ನು ಸನ್ನದ್ಧವಾಗಿ ಇಟ್ಟುಕೊಂಡಿರುತ್ತೇವೆ’ ಎಂದು ಡಿಸಿಎಫ್‌ ಮಾಹಿತಿ ನೀಡಿದರು.

***

ಕಾಡಿಗೆ ಬೆಂಕಿ ಬೀಳುವುದನ್ನು ತಡೆಯಲು ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬೆಂಕಿ ಪ್ರಕರಣಗಳು ಕಡಿಮೆ

– ಪ್ರಶಾಂತ್‌, ಡಿಸಿಎಫ್‌, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT