ಗುರುವಾರ , ನವೆಂಬರ್ 26, 2020
21 °C
ಸಾಮಾಜಿಕ ಹೊಣೆಗಾರಿಕೆಯಡಿ ಗೇಲ್‌ ಸಂಸ್ಥೆ ಕೊಡುಗೆ * ವಾಹನಗಳಲ್ಲಿ ಸಿಎನ್‌ಜಿ ಇಂಧನ ಬಳಕೆ

ಒಣ ಕಸ ಸಂಗ್ರಹಕ್ಕೆ 18 ವಾಹನ ಬಿಬಿಎಂಪಿಗೆ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗುವ ಸಲುವಾಗಿ ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ (ಗೇಲ್‌) ಸಂಸ್ಥೆಯು ಸಾಮಾಜಿಕ ಹೊಣೆಗಾರಿಗೆ ನಿಧಿ ಅಡಿ 18 ವಾಹನಗಳನ್ನು ಒಣ ಕಸ ಸಂಗ್ರಹಕ್ಕಾಗಿ ಬಿಬಿಎಂಪಿಗೆ ಹಸ್ತಾಂತರಿಸಿದೆ.

ಗೇಲ್‌ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಕಾರ್ಯಕಾರಿ ನಿರ್ದೇಶಕ ಮುರುಗೇಶನ್‌ ಹಾಗೂ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿವೇಕ್‌ ವಾಥೋಡ್ಕರ್‌ ಅವರು ಈ ವಾಹನಗಳನ್ನು ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಗುರುವಾರ ಹಸ್ತಾಂತರಿಸಿದರು.  

ಈ ವಾಹನಗಳಿಗೆ ಇಂಧನವಾಗಿ ಸಂಕ್ಷೇಪಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಹಾಗೂ ಪೆಟ್ರೊಲ್‌ಗಳನ್ನು ಬಳಸಬಹುದು. ಸಿಎನ್‌ಜಿಯನ್ನು ಇಂಧನ ಬಳಸುವುದರಿಂಧ ಈ ವಾಹನಗಳು ಪರಿಸರ ಸ್ನೇಹಿಯಾಗಿವೆ. ಇವುಗಳ ನಿರ್ಹವಣೆ ಸುಲಭ ಹಾಗೂ ಸಾಂಪ್ರದಾಯಿಕ ಇಂಧನಗಳಿಗೆ ಹೋಲಿಸಿದರೆ ಸಿಎನ್‌ಜಿ ಬಳಕೆಯಿಂದ ನಿರ್ವಹಣೆ ವೆಚ್ಚವೂ ಕಡಿಮೆ. ಈ ವಾಹನಗಳ ಒಟ್ಟು ಮೌಲ್ಯ  ₹ 1 ಕೋಟಿ ಎಂದು ಗೇಲ್‌ ಸಂಸ್ಥೆ ತಿಳಿಸಿದೆ. ಈ ಸಂಸ್ಥೆಯು ನಗರದಲ್ಲಿ ಸಿಎನ್‌ಜಿ ಅನಿಲವನ್ನು ವಾಹನಗಳ ಬಳಕೆಗಾಗಿ ಹಾಗೂ ಮನೆ ಬಳಕೆಗಾಗಿ ವಿತರಿಸುತ್ತಿದೆ.

ಮಂಜುನಾಥ ಪ್ರಸಾದ್‌, ‘ಒಣ ಕಸ ವಿಲೇವಾರಿಯ ಹೊಣೆಯನ್ನು ಈ ಹಿಂದೆ ಕಸ ಆಯುವ ಕಾಯಕದಲ್ಲಿ ತೊಡಗಿದ್ದವರಿಗೆ ಹಾಗೂ ಮತ್ತು ಸ್ವ-ಸಹಾಯ ಗುಂಪುಗಳಿಗೆ ವಹಿಸಲಾಗಿವೆ. ಅವರು ವಾರದಲ್ಲಿ ಎರಡು ಬಾರಿ ಒಣಕಸ ಸಂಗ್ರಹಿಸಲಿದ್ದಾರೆ. ನಗರದಲ್ಲಿ ಸುಮಾರು 7,500 ಮಂದಿ ಕಸ ಆಯುವ ಕಾಯಕದಲ್ಲಿ ತೊಡಗಿದವರಿದ್ದಾರೆ. ಅವರು ಬದುಕು ರೂಪಿಸಿಕೊಳ್ಳಲು ಇದು ಸಹಕಾರಿ’ ಎಂದರು.

‘ಕಸ ವಿಂಗಡಣೆಯಲ್ಲಿ ಶೇ 100 ರಷ್ಟು ಸಾಧನೆ ಮಾಡುವ ಉದ್ದೇಶದಿಂದ ಹಸಿ, ಒಣ ಹಾಗೂ ನೈರ್ಮಲ್ಯ (ಸ್ಯಾನಿಟರಿ) ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಮೂಲದಲ್ಲೇ ಕಸವನ್ನು ವಿಂಗಡಣೆ ಮಾಡಿಕೊಡದವರಿಗೆ ದಂಡ ವಿಧಿಸಲಾಗುತ್ತದೆ’ ಎಂದರು.

‘ಪಾಲಿಕೆ ವ್ಯಾಪ್ತಿಯಲ್ಲಿ 167 ಒಣ ಕಸ ಸಂಗ್ರಹ ಕೇಂದ್ರಗಳಿವೆ. 198 ವಾರ್ಡ್‌ಗಳಲ್ಲೂ ಇಂತಹ ಕೇಂದ್ರ ಸ್ಥಾಪಿಸಲಾಗುತ್ತದೆ. ಈ ಕೇಂದ್ರಗಳನ್ನು ಆಡಳಿತಗಾರರು ಸೂಚನೆ ಮೇರೆಗೆ ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಒಣ ಕಸ ಸಂಗ್ರಹ ಕೇಂದ್ರಗಳು ಇಲ್ಲದ ವಾರ್ಡ್‌ಗಳಲ್ಲೂ ಇವುಗಳ ಸ್ಥಾಪನೆಗೆ ಜಾಗ ಒದಗಿಸುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಕೋರಿದ್ದೆವು. ಅವರು ಲಭ್ಯ ಇರುವ ಜಾಗಗಳ ಪಟ್ಟಿಯನ್ನು ನೀಡಿದ್ದಾರ. ಶೀಘ್ರವೇ ಈ ಸ್ಥಳಗಳಲ್ಲೂ ಒಣ ಕಸ ಸಂಗ್ರಹ ಕೇಂದ್ರಗಳನ್ನು ಆರಂಭಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಅಂಕಿ ಅಂಶ
* ನಗರದಲ್ಲಿ ನಿತ್ಯ ಬಿಬಿಎಂಪಿ ವಿಲೇ ಮಾಡುವ ಕಸ: 4,200 ಟನ್
* ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಒಣ ಕಸದ ಪ್ರಮಾಣ: 1200 ಟನ್‌
* ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ಸಗಟು ಕಸ: 1,700 ಟನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು