ಶುಕ್ರವಾರ, ಜನವರಿ 24, 2020
18 °C
ನೀಲಿ ನಕ್ಷೆ ಸಿದ್ಧಪಡಿಸಿದ ಡಲ್ಟ್‌; ಸ್ಥಳ ಪರಿಶೀಲನೆ ನಡೆಸಿದ ಬಿಬಿಎಂಪಿ

ಪಾದಚಾರಿಗಳ ನೆಚ್ಚಿನ ತಾಣವಾಗಲಿದೆ ಗಾಂಧಿ ಬಜಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಗಾಂಧಿ ಬಜಾರ್‌ ಅನ್ನು ಪಾದಚಾರಿಗಳ ನೆಚ್ಚಿನ ತಾಣವನ್ನಾಗಿ ರೂಪಿಸಲು ರೂಪುರೇಷೆ ಸಜ್ಜಾಗಿದೆ. ಟ್ಯಾಗೋರ್‌ ಪಾರ್ಕ್‌ನಿಂದ ರಾಮಕೃಷ್ಣ ಆಶ್ರಮದವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿ ಕೇವಲ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಬಳಸುವ ಬಗ್ಗೆ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಯೋಜನೆ ಸಿದ್ಧಪಡಿಸಿದೆ.

ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. 

‘ಗಾಂಧಿ ಬಜಾರ್‌ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚು ಇದೆ. ಇದೊಂದು ಸದಾ ಚಟುವಟಿಕೆಯ ತಾಣ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಈ ರಸ್ತೆಯನ್ನು ಪಾದಚಾರಿ ಸ್ನೇಹಿಯನ್ನಾಗಿ ರೂಪಿಸುವ  ಪ್ರಯತ್ನ ನಡೆದಿದೆ’ ಎಂದು ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಲ್ಟ್‌ ಸಿದ್ಧಪಡಿರುವ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ. ಗಾಂಧಿ ಬಜಾರ್‌ ಮಾರ್ಗವನ್ನು ಪಾದಚಾರಿ ಸ್ನೇಹಿಯನ್ನಾಗಿ ರೂಪಿಸಲು ನಮ್ಮ ಮುಂದೆ ಮೂರು ಆಯ್ಕೆಗಳಿವೆ. ಸಂಚಾರ ತಜ್ಞರು ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿ, ಇಲ್ಲಿನ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಸಮಗ್ರವಾಗಿ ಮಾಹಿತಿ ಕಲೆ ಹಾಕಿ ಈ ಯೋಜನೆಗೆ ಅಂತಿಮ ರೂಪ ನೀಡಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. 

‘ಈ ರಸ್ತೆಯನ್ನು ಬಳಸುವ ವಾಹನಗಳೆಷ್ಟು, ಅವುಗಳಲ್ಲಿ ಸ್ಥಳೀಯ ನಿವಾಸಿಗಳ ವಾಹನಗಳೆಷ್ಟು, ಯಾವ ಕಡೆಗೆ ಹೆಚ್ಚು ವಾಹನಗಳು ಸಂಚರಿಸುತ್ತವೆ ಎಂಬ ಅಂಕಿ ಅಂಶ ಕಲೆ ಹಾಕಬೇಕಾಗುತ್ತದೆ. ಬಳಿಕ ಸಂಚಾರ ಪೊಲೀಸರ ಜೊತೆಗೆ ಚರ್ಚಿಸಿ ವಾಹನ ಸಂಚಾರದ ಸಮಗ್ರ ನಿರ್ವಹಣೆ ವ್ಯವಸ್ಥೆ ರೂಪಿಸಲಾಗುತ್ತದೆ’ ಎಂದು ವಿವರಿಸಿದರು. 

ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ, ವಾಹನ ಸವಾರರು ಅಕ್ಕಪಕ್ಕದ ರಸ್ತೆಗಳನ್ನು ಬಳಸುತ್ತಾರೆ. ಇದರಿಂದ ಸ್ಥಳೀಯರಿಗೆ ಅನನುಕೂಲವಾಗುವ ಸಾಧ್ಯತೆಯೂ ಇದೆ.

‘ಹೊಸ ವ್ಯವಸ್ಥೆ ಜಾರಿಗೆ ಮುನ್ನ ಕೆಲವು ರಸ್ತೆಗಳಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕಾಗುತ್ತದೆ. ಈ ಬಗ್ಗೆ ಸಂಚಾರ ಪೊಲೀಸರೇ ಅಧ್ಯಯನ ನಡೆಸಿ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಬಳಿಕ ಡಲ್ಟ್‌ನವರ ಜೊತೆ ಮತ್ತೊಮ್ಮೆ ಸಭೆ ನಡೆಸಿ ಈ ಯೋಜನೆ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರುತ್ತೇವೆ’ ಎಂದರು.

‘ಈ ಯೋಜನೆ ಜಾರಿಗೆ ಮುನ್ನ ಕೆಲವು ಕಡೆ ಪಾದಚಾರಿ ಮಾರ್ಗಗಳನ್ನು ಸುಂದರಗೊಳಿಸಬೇಕಾಗುತ್ತದೆ. ಕೆಲವು ಕಡೆ ಅಗತ್ಯ ಮೂಲಸೌಕರ್ಯ ಕೊಳವೆಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಅದು ಬಿಟ್ಟರೆ ಈ ಯೋಜನೆಗೆ ಹೆಚ್ಚಿನ ವೆಚ್ಚವೇನೂ ಆಗದು’ ಎಂದರು.

ಸ್ಥಳ ಪರಿಶೀಲನೆ ವೇಳೆ ಶಾಸಕ ಉದಯ್‌ ಗರುಡಾಚಾರ್‌, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಕೆ.ಎ.ಜಗದೀಶ್‌, ಪಾಲಿಕೆ ಸದಸ್ಯ ಡಿ.ಎನ್‌.ರಮೇಶ್‌ ಹಾಜರಿದ್ದರು.   

ಪಾಲಿಕೆ ಮುಂದಿರುವ ಮೂರು ಆಯ್ಕೆಗಳು

* ಗಾಂಧಿ ಬಜಾರ್‌ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸುವುದು

* ಮಾರ್ಗದ ಮುಕ್ಕಾಲು ಭಾಗವನ್ನು ಮಾತ್ರ ಪಾದಚಾರಿಗಳಿಗೆ ಸೀಮಿತಗೊಳಿಸುವುದು

* ಟ್ಯಾಗೋರ್‌ ರಸ್ತೆ ಕಡೆಯಿಂದ ರಾಮಕೃಷ್ಣ ಆಶ್ರಮದ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವುದು

‘ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿ’

ಗಾಂಧಿಬಜಾರ್‌ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸುವುದಾದರೆ, ಸಮೀಪದಲ್ಲಿ ಎಲ್ಲಾದರೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಇಲ್ಲಿನ ವ್ಯಾಪಾರಿಗಳು ಪಾಲಿಕೆಯನ್ನು ಒತ್ತಾಯಿಸಿದ್ದಾರೆ.

‘ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಸಮೀಪದಲ್ಲಿ ಎಲ್ಲೂ ವಾಹನ ನಿಲುಗಡೆಗೆ ‍ವ್ಯವಸ್ಥೆ ಕಲ್ಪಿಸದೇ ಇದ್ದರೆ, ವ್ಯಾಪಾರ ಆಗುವುದಿಲ್ಲ. ಇದರಿಂದ ನಮಗೆ ನಷ್ಟವೇ ಹೆಚ್ಚು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

‘ಸುಮಾರು 300 ಕಾರುಗಳನ್ನು ನಿಲ್ಲಿಸುವಷ್ಟು ಸಾಮರ್ಥ್ಯದ ಬಹುಮಹಡಿ ಕಾರು ನಿಲುಗಡೆ (ಎಂಎಲ್‌ಸಿಪಿ) ವ್ಯವಸ್ಥೆ ಕಲ್ಪಿಸಲಿದ್ದೇವೆ. ಇದಕ್ಕೆ ಜಾಗ ಗುರುತಿಸಿದ್ದೇವೆ. ವಾಹನ ನಿಲುಗಡೆ ತಾಣಕ್ಕೆ ಯಾವ ಕಡೆ ಪ್ರವೇಶ ನೀಡಬೇಕು. ವಾಹನಗಳು ಮರಳಿ ರಸ್ತೆಯನ್ನು ಸೇರಲು ಎಲ್ಲಿ ಅವಕಾಶ ಕಲ್ಪಿಸುವುದು ಸೂಕ್ತ ಎಂಬ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು