ಗುರುವಾರ , ನವೆಂಬರ್ 26, 2020
22 °C
ಜ್ಞಾನಭಾರತಿ ಆವರಣದ ಸಾಮೂಹಿಕ ಅತ್ಯಾಚಾರ ಪ್ರಕರಣ

ಏಳು ಮಂದಿಗೆ ಜೀವಾವಧಿ ಶಿಕ್ಷೆ ಕಾಯಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ 2012ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಆರೋಪಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್‌ ಕಾಯಂಗೊಳಿಸಿದೆ.

‘ಅತ್ಯಾಚಾರವು ಸಂತ್ರಸ್ತ ಯುವತಿ ವಿರುದ್ಧದ ಅಪರಾಧ ಪ್ರಕರಣ ಮಾತ್ರವಲ್ಲ, ಇಡೀ ಸಮಾಜಕ್ಕೇ ವಿರುದ್ಧವಾದ ಅಪರಾಧ’ ಎಂದು ತಿಳಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ಧ ವಿಭಾಗೀಯ ಪೀಠ, ಶಿಕ್ಷೆ ರದ್ದುಗೊಳಿಸಲು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.

2012ರ ಅ.13ರಂದು ರಾತ್ರಿ 9.30ರ ಸುಮಾರಿನಲ್ಲಿ ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಸುತ್ತುವರಿದ 7 ಮಂದಿ ಮಾರಕಾಸ್ತ್ರಗಳನ್ನು ತೋರಿಸಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

ಅಪರಾಧಿಗಳಾದ ರಾಮು, ಶಿವಣ್ಣ, ಮದ್ದೂರ, ಎಲೆಯಯ್ಯ, ಈರಯ್ಯ, ರಾಜ ಮತ್ತು ದೊಡ್ಡ ಈರಯ್ಯ ಏಳು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ‘ನಮ್ಮ ವಿರುದ್ಧ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದನ್ನು ಪರಿಗಣಿಸಿ ಮೃದು ಧೋರಣೆ ತೋರಿಸಬೇಕು’ ಎಂದು ಅಪರಾಧಿಗಳು ಕೋರಿದ್ದರು.

‘ಆಪಾದಿತರು ಕೃತ್ಯ ನಡೆಸಿದ ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕರವಸ್ತ್ರವೇ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಪ್ರಮುಖ ಸಾಕ್ಷ್ಯವಾಗಿದೆ. ಕರವಸ್ತ್ರ ಸಂತ್ರಸ್ತೆಯ ಪಾಲಿಗೆ ‘ಸುದರ್ಶನ ಚಕ್ರ’ ಆಯಿತು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಮನುಸ್ಮೃತಿ ಉಲ್ಲೇಖ

160 ಪುಟಗಳ ಆದೇಶದಲ್ಲಿ ಹಲವು ಕಡೆ ಮನುಸ್ಮೃತಿ ಮತ್ತು ವೇದದಲ್ಲಿನ ಶ್ಲೋಕಗಳನ್ನು ಪೀಠ ದಾಖಲಿಸಿದೆ.

‘ಮಹಿಳೆಯರನ್ನು ಗೌರವಿಸದಿದ್ದಲ್ಲಿ ಎಲ್ಲಾ ಆಚರಣೆಗಳೂ ವ್ಯರ್ಥವಾಗುತ್ತವೆ. ಮಹಿಳೆ ಸಂತಸದಿಂದ ಇರದ ಕುಟುಂಬ ಬಹುಬೇಗ ನಾಶವಾಗುತ್ತದೆ. ಮಹಿಳೆ ಸಂತಸದಿಂದ ಇರುವ ಕುಟುಂಬ ಸದಾ ಏಳಿಗೆ ಕಾಣುತ್ತದೆ’ ಎಂಬ ಮನುಸ್ಮೃತಿಯ ಸಾಲುಗಳನ್ನು ಪೀಠ ಉಲ್ಲೇಖಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು