ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಬಹಿಷ್ಕಾರಕ್ಕೆ ಗಂಟಿಗಾನಹಳ್ಳಿ ಗ್ರಾಮಪಂಚಾಯಿತಿಯ ಸದಸ್ಯರ ನಿರ್ಧಾರ

ಶಿವರಾಮ ಕಾರಂತ ಬಡಾವಣೆಗಾಗಿ ರೈತರ ಭೂಮಿ: ಅನಿರ್ದಿಷ್ಟಾವಧಿ ಧರಣಿ
Last Updated 6 ಡಿಸೆಂಬರ್ 2021, 21:32 IST
ಅಕ್ಷರ ಗಾತ್ರ

ಯಲಹಂಕ: ಶಿವರಾಮಕಾರಂತ ಬಡಾವಣೆಗಾಗಿ ರೈತರ ಭೂಮಿಯನ್ನು ವಶಪಡಿಸಿಕೊಂಡಿರುವ ಬಿಡಿಎ ಕ್ರಮವನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ) ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರಿದಿದೆ.

ಹೋರಾಟದ ಭಾಗವಾಗಿ ಗಂಟಿಗಾನಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರೂ ಸೇರಿದಂತೆ ಎಂಟು ಸದಸ್ಯರು, ಡಿ.10ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಕೆ. ರಂಗನಾಥ್ ಮತ್ತು ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಅವರು, ರಾಮಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ನಿರ್ಧಾರ ವಾಪಸ್ ಪಡೆಯುವಂತೆ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು.

ಈ ವೇಳೆ ಮಾತನಾಡಿದ ಸಮಿತಿಯ ಬೆಂಗಳೂರು ನಗರ ಜಿಲ್ಲಾ ಸಂಯೋಜಕ ಎಂ.ರಮೇಶ್, ’ಉದ್ದೇಶಿತ ಬಡಾವಣೆಗಾಗಿ 17 ಗ್ರಾಮಗಳ 3500 ಎಕರೆ ಭೂಮಿಯನ್ನು ವಶಪಡಿಸಿಕೊಂಡಿರುವ ಬಿಡಿಎ, ಸಂತ್ರಸ್ತರಿಗೆ ಪರಿಹಾರ ನೀಡದೆ ಸತಾಯಿಸುತ್ತಿದೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ, ನಾಲ್ಕು ತಿಂಗಳಿನಿಂದ ಹೋರಾಟ ನಡೆಸಲಾಗುತ್ತಿದೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಡಿ. 10ರ ಒಳಗಾಗಿ ರೈತ ಮುಖಂಡರು ಹಾಗೂ ಗ್ರಾಮಸ್ಥರನ್ನು ಮುಖ್ಯಮಂತ್ರಿ ಜತೆ ಮಾತನಾಡಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೆ ಮಾತ್ರ ನಿರ್ಧಾರ ಪುನರ್ ಪರಿಶೀಲಿಸಲಾಗುವುದು’ ಎಂದರು.

‘ಬಡಾವಣೆಗಾಗಿ ಬಿಡಿಎ ಜಮೀನು ವಶಪಡಿಸಿಕೊಂಡಿರುವುದರಿಂದ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಚುನಾವಣೆ ಬಹಿಷ್ಕರಿಸುವ ಮೂಲಕ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ’ ಎಂದು ಗ್ರಾಮಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಚಂದನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT