ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ: ಗುತ್ತಿಗೆ ನಂತರವೂ 11 ವಾರ್ಡ್‌ಗಳಲ್ಲಿ ಕಾಣದ ಸುಧಾರಣೆ

27 ವಾರ್ಡ್‌ಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೇ 39ರವರೆಗೆ ಹೆಚ್ಚಳ
Last Updated 26 ಡಿಸೆಂಬರ್ 2020, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಗುತ್ತಿಗೆ ಜಾರಿಗೊಳಿಸಲಾದ ವಾರ್ಡ್‌ಗಳ ಪೈಕಿ 27 ವಾರ್ಡ್‌ಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಪ್ರಮಾಣದಲ್ಲಿ ಶೇ 1ರಿಂದ ಶೇ 39ರಷ್ಟು ಹೆಚ್ಚಳ ಕಂಡು ಬಂದಿದೆ. ಆದರೆ 11 ವಾರ್ಡ್‌ಗಳಲ್ಲಿ ಗುತ್ತಿಗೆ ಜಾರಿಯಾದ ಬಳಿಕವೂ ಯಾವುದೇ ಸುಧಾರಣೆ ಕಾಣಿಸಿಲ್ಲ. ಈ ಪೈಕಿ ಎಂಟು ವಾರ್ಡ್‌ಗಳಲ್ಲಿ ಗುತ್ತಿಗೆ ಜಾರಿಯ ಮೊದಲಿಗಿಂತಲೂ ಕಳಪೆ ಸಾಧನೆ ಕಂಡುಬಂದಿದೆ.

ಹಸಿ ಕಸ, ಒಣ ಕಸ ಹಾಗೂ ನೈರ್ಮಲ್ಯ ಕಸಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಸ ಟೆಂಡರ್‌ಗಳನ್ನು ಬಿಬಿಎಂಪಿ ನಗರದ 38 ವಾರ್ಡ್‌ಗಳಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಜಾರಿಗೊಳಿಸಿತ್ತು. ಈ ವಾರ್ಡ್‌ಗಳಲ್ಲಿ ಮೂರು ತಿಂಗಳುಗಳ ಒಳಗೆ ಕಸ ವಿಂಗಡಣೆ ಪ್ರಮಾಣ ಶೇ 100ರಷ್ಟು ತಲುಪಬೇಕು ಎಂದು ಪಾಲಿಕೆ ಗುರಿ ನಿಗದಿಪಡಿಸಿತ್ತು.

ಕಸ ವಿಲೇವಾರಿಗೆ ಗುತ್ತಿಗೆ ಜಾರಿಗೊಳಿಸಿದ ಬಳಿಕ ಅಲ್ಲಿನ ವ್ಯವಸ್ಥೆ ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ ಎಂಬ ಬಗ್ಗೆ ಬಿಬಿಎಂಪಿಯೇ ಮಾಹಿತಿ ಕಲೆ ಹಾಕಿ ವಿಶ್ಲೇಷಣೆಗೆ ಒಳಪಡಿಸಿದೆ. ಗುತ್ತಿಗೆ ಜಾರಿಯಾಗುವ ಮುನ್ನ (ಜುಲೈ ತಿಂಗಳು) ಹಾಗೂ ನಂತರ ಪ್ರತಿ ತಿಂಗಳು ಪ್ರತಿ ವಾರ್ಡ್‌ನಲ್ಲಿ ಎಷ್ಟು ಪ್ರಗತಿ ಆಗಿದೆ ಎಂಬುದನ್ನು ಹಸಿ, ಒಣ ಕಸಗಳ ವಿಂಗಡಣೆ ಆಧಾರದಲ್ಲಿ ತುಲನೆ ಮಾಡಲಾಗಿದೆ.

ಹೆಚ್ಚು ಸುಧಾರಣೆ ಕಂಡಿರುವ ವಾರ್ಡ್‌ಗಳಲ್ಲಿ ಬೊಮ್ಮನಹಳ್ಳಿ ವಲಯದ ಬೆಂಗಳೂರು ದಕ್ಷಿಣ ವಿಭಾಗದ ಸಿಂಗಸಂದ್ರ ವಾರ್ಡ್‌ ಅಗ್ರಸ್ಥಾನದಲ್ಲಿದೆ. ಇಲ್ಲಿ ಜುಲೈ ತಿಂಗಳಿನಲ್ಲಿ ಕಸ ವಿಂಗಡಣೆ ಪ್ರಮಾಣ ಶೇ 33ರಷ್ಟಿತ್ತು. ಅದೀಗ ಶೇ 72ಕ್ಕೆ ಹೆಚ್ಚಳವಾಗಿದೆ. ಪಶ್ಚಿಮ ವಲಯದ ಚಾಮರಾಜಪೇಟೆ ವಿಭಾಗದ ರಾಯಪುರ ವಾರ್ಡ್‌ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಜುಲೈಗೆ ಮುನ್ನ ಕಸ ವಿಂಗಡಣೆ ಸಮರ್ಪಕವಾಗಿ ಆಗುತ್ತಿರಲಿಲ್ಲ. ಆದರೆ ಈಗ ಶೇ 31ರಷ್ಟು ಕಸ ವಿಂಗಡಣೆ ಆಗುತ್ತಿದೆ. ಪಶ್ಚಿಮ ವಲಯದ ಗೋವಿಂದರಾಜನಗರ ವಿಭಾಗದ ನಾಯಂಡಹಳ್ಳಿ ವಾರ್ಡ್‌ ಕಸ ವಿಂಗಡಣೆಯಲ್ಲಿ ಶೇ 21ರಷ್ಟು ಪ್ರಗತಿ ಸಾಧಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಗುತ್ತಿಗೆ ಜಾರಿಗೆ ಮುನ್ನ ಶೇ 22ರಷ್ಟು ಕಸ ವಿಂಗಡಣೆಯಾಗುತ್ತಿದ್ದರೆ, ಈಗ ಶೇಕಡಾ 43ರಷ್ಟು ವಿಂಗಡಣೆಯಾಗುತ್ತಿದೆ.

ಒಟ್ಟಾರೆ ಕಸ ವಿಂಗಡಣೆಯಲ್ಲಿ ಬೊಮ್ಮನಹಳ್ಳಿ ವಿಭಾಗದ ಮಂಗಮ್ಮನಪಾಳ್ಯ ವಾರ್ಡ್‌ ಮುಂಚೂಣಿಯಲ್ಲಿದೆ. ಗುತ್ತಿಗೆ ಜಾರಿಯಾಗಿರುವ ವಾರ್ಡ್‌ಗಳಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ (ಶೇ 74ರಷ್ಟು) ಕಸ ವಿಂಗಡಣೆ ಆಗುತ್ತಿರುವುದು ಈ ವಾರ್ಡ್‌ನಲ್ಲಿ. ಇಲ್ಲಿ ಗುತ್ತಿಗೆ ಜಾರಿಗೂ ಮುನ್ನವೇ ಶೇ 54ರಷ್ಟು ಕಸ ವಿಂಗಡಣೆ ಆಗುತ್ತಿತ್ತು.

‘ಕಸ ವಿಲೇವಾರಿ ಗುತ್ತಿಗೆ ಜಾರಿ ಆದ ಬಳಿಕ ಹೆಚ್ಚಿನ ವಾರ್ಡ್‌ಗಳಲ್ಲಿ ವಿಂಗಡಣೆ ಪ್ರಮಾಣ ಸಾಕಷ್ಟು ಹೆಚ್ಚಳ ಕಂಡಿದೆ. ಸ್ವಚ್ಛತೆ ಕಾಪಾಡುವುದಕ್ಕೆ ಸಂಬಂಧಿಸಿ ಪ್ರತಿ ವಾರ್ಡ್‌ಗೂ ಗುರಿ ನಿಗದಿ ಪಡಿಸಿದ್ದೇವೆ. ಅದನ್ನು ಈಡೇರಿಸಲು ಪೌರಕಾರ್ಮಿಕರು, ಮನೆ ಮನೆಯಿಂದ ಕಸ ಸಾಗಿಸುವ ವಾಹನಗಳ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಎಂಟು ವಾರ್ಡ್‌ಗಳಲ್ಲಿ ಕಳಪೆ ಸಾಧನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಹಿನ್ನಡೆಗೆ ಕಾರಣ ಏನು ಎಂಬ ಬಗ್ಗೆ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇಲ್ಲಿನ ವ್ಯವಸ್ಥೆಗಳಲ್ಲಿ ಏನಾದರೂ ಲೋಪವಿದ್ದರೆ, ತಕ್ಷಣವೇ ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಕಸ ವಿಂಗಡಣೆ: ಈ ವಾರ್ಡ್‌ಗಳಲ್ಲಿ ಸಾಧನೆ ಶೂನ್ಯ
ವಿಭಾಗ:ವಾರ್ಡ್

ಯಲಹಂಕ; ಅಟ್ಟೂರು
ಶಿವಾಜಿನಗರ; ಭಾರತೀನಗರ
ಶಿವಾಜಿನಗರ; ಶಿವಾಜಿನಗರ
ಪದ್ಮನಾಭನಗರ; ಹೊಸಕೆರೆಹಳ್ಳಿ

ಕಸ ವಿಂಗಡಣೆ–ಹಿಂದಿಗಿಂತಲೂ ಕುಸಿತ ಕಂಡ ವಾರ್ಡ್‌ಗಳು

*** ವಿಭಾಗ ಜುಲೈ ತಿಂಗಳಲ್ಲಿ (%) ಅಕ್ಟೋಬರ್‌ನಲ್ಲಿ (%)

ಕುಸಿತದ ಪ್ರಮಾಣ (%)

ದಾಸರಹಳ್ಳಿ ಟಿ–ದಾಸರಹಳ್ಳಿ 29 28 –1
ಬೊಮ್ಮನಹಳ್ಳಿ ಬೊಮ್ಮನಹಳ್ಳಿ 55 53 –2
ಯಲಹಂಕ ಚೌಡೇಶ್ವರಿ 29 27 –2
ಬೆಂ.ದಕ್ಷಿಣ ವಸಂತಪುರ 30 26 –4
ಗೋವಿಂದರಾಜನಗರ ಮೂಡಲಪಾಳ್ಯ 41 35 –6
ಗೋವಿಂದರಾಜನಗರ ನಾಗರಬಾವಿ 29 20 –9
ಚಿಕ್ಕಪೇಟೆ ಸಿದ್ದಾಪುರ 13 0 –13

ಶೇ 50ಕ್ಕೂ ಹೆಚ್ಚು ಕಸ ವಿಂಗಡಣೆಯಾಗುವ ವಾರ್ಡ್‌ಗಳು
ವಿಭಾಗ: ವಾರ್ಡ್ (ಶೇ. ಪ್ರಮಾಣ)
ಬೊಮ್ಮನಹಳ್ಳಿ:ಮಂಗಮ್ಮನಪಾಳ್ಯ (ಶೇ.74)
ಬೆಂ.ದಕ್ಷಿಣ: ಸಿಂಗಸಂದ್ರ (ಶೇ.72)
ಬೊಮ್ಮನಹಳ್ಳಿ: ಬೊಮ್ಮನಹಳ್ಳಿ (ಶೇ.53)
ಯಲಹಂಕ: ಕೆಂಪೇಗೌಡ (ಶೇ.52)
ಚಾಮರಾಜಪೇಟೆ: ಛಲವಾದಿಪಾಳ್ಯ (ಶೇ.50)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT