ಶನಿವಾರ, ಸೆಪ್ಟೆಂಬರ್ 18, 2021
24 °C

ಪೌರಕಾರ್ಮಿಕರ ಪ್ರತಿಭಟನೆ– ಕಸ ವಿಲೇ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದರಿಂದ ನಗರದಲ್ಲಿ ಅನೇಕ ಕಡೆ ಕಸ ವಿಲೇವಾರಿಯಲ್ಲಿ ವ್ಯತ್ಯಯವಾಯಿತು. ‌

ಪೌರಕಾರ್ಮಿಕರು, ಮೇಲ್ವಿಚಾರಕರು, ಕಸ ಸಾಗಣೆ ವಾಹನ ಮತ್ತು ಆಟೊ ಟಿಪ್ಪರ್‌ ಚಾಲಕರು, ಲೋಡರ್‌ಗಳು ಹಾಗೂ ಸಹಾಯಕರು ಸೇರಿದಂತೆ ಎಲ್ಲ ಸ್ವಚ್ಛತಾ ಕಾರ್ಮಿಕರನ್ನು ನೇರ ಪಾವತಿ ವ್ಯವಸ್ಥೆಯಡಿ ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾಸಂಘವು ಪ್ರತಿಭಟನೆಗೆ ಕರೆ ನೀಡಿತ್ತು.

ಮನೆ ಮನೆಯಿಂದ ಕಸ ಸಂಗ್ರಹಿಸುವ ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಹಾಗಾಗಿ ಅನೇಕ ಕಡೆ ಮನೆಗಳ ಮುಂದೆಯೇ ಕಸಗಳು ಉಳಿದವು. ಸಚಿವರು ಸೇರಿದಂತೆ ಗಣ್ಯರ ಮನೆಗಳ ಮುಂದಿನ ಕಸವೂ ವಿಲೇವಾರಿ ಆಗಿರಲಿಲ್ಲ. ಪಾಲಿಕೆ ಕೇಂದ್ರ ಕಚೇರಿ ಬಳಿಯೂ ಕಸ ಹಾಗೆಯೇ ಉಳಿದಿತ್ತು.

ಪ್ರತಿಭಟನೆ ಬಗ್ಗೆ ಖಚಿತತೆ ಇಲ್ಲದ ಕಾರಣ ಬಿಬಿಎಂಪಿ ಅಧಿಕಾರಿಗಳೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತಿದ್ದಂತೆಯೇ ಅಧಿಕಾರಿಗಳು ಪೌರಕಾರ್ಮಿಕರ ಮನವೊಲಿಸಿ ಕೆಲವು ಕಡೆ ಕಸ  ತೆರವುಗೊಳಿಸಿದರು. ಪ್ರಮುಖ ಮಾರುಕಟ್ಟೆಗಳ ಬಳಿ ಕಸದ ರಾಶಿ ತೆರವುಗೊಳಿಸಲು ಕ್ರಮ ಕೈಗೊಂಡರು. 

‘ಅನೇಕ ವಲಯಗಳಲ್ಲಿ ಪೌರಕಾರ್ಮಿಕರು ದಿಢೀರ್‌ ಕೆಲಸ ಸ್ಥಗಿತಗೊಳಿಸಿದ್ದರಿಂದ ಕಸ ವಿಲೇವಾರಿ ಸಮಸ್ಯೆ ಆಗಿದ್ದು ನಿಜ. ದಕ್ಷಿಣ ವಲಯ, ಆರ್‌.ಆರ್‌.ನಗರ, ಪೂರ್ವ ವಲಯ ಹಾಗೂ ಯಲಹಂಕ ವಲಯದ ಯಲಹಂಕ ವಿಭಾಗದಲ್ಲಿ ಹೆಚ್ಚಿನ ಸಮಸ್ಯೆ ಆಗಿದೆ. ಕಸ ವಿಲೇವಾರಿ ಶೇ 30ರಷ್ಟು ವ್ಯತ್ಯಯವಾಗಿದೆ’ ಎಂದು ಬಿಬಿಎಂಪಿ ಕಸ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ತಿಳಿಸಿದರು.

‘ಮಾರುಕಟ್ಟೆಗಳ ಬಳಿ ಕಸ ವಿಲೇ ಎಂದಿನಂತೆಯೇ ನಡೆದಿದೆ. ಹಬ್ಬ ಹರಿದಿನಗಳು ಸಮೀಪಿಸುತ್ತಿರುವುದರಿಂದ ಮಾರುಕಟ್ಟೆಗಳ ಕಾರ್ಯ ನಿರ್ವಹಣೆಗೆ ಯಾವುದೇ ತೊಡಕಿಲ್ಲ’ ಎಂದರು.

‘ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ’

‘ರಾಜ್ಯದಾದ್ಯಂತ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರನ್ನು ಒಂದು ತಿಂಗಳ ಒಳಗೆ ಕಾಯಂಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಮತ್ತೆ ಪ್ರತಿಭಟನೆಗೆ ಇಳಿಯಲಿದ್ದಾರೆ’ ಎಂದು ಮಹಾಸಂಘದ ಅಧ್ಯಕ್ಷ ಮೈಸೂರು ನಾರಾಯಣ ಸ್ಪಷ್ಟಪಡಿಸಿದರು.

‘ಬಿಬಿಎಂಪಿಯ 18 ಸಾವಿರ ಪೌರಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ 38 ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬದುಕಿನ ಭದ್ರತೆ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ’ ಎಂದು ಅವರು ಟೀಕಿಸಿದರು.

‘ಸಚಿವ ಆರ್‌.ಅಶೋಕ ಅವರು ನಮ್ಮ ಜೊತೆ ಮಾತುಕತೆ ನಡೆಸಿದ್ದು, ಬೇಡಿಕೆ ಈಡೇರಿಸಲು ಎರಡು ತಿಂಗಳ ಕಾಲಾವಕಾಶ ಕೋರಿದ್ದಾರೆ. ಈ ಬಗ್ಗೆ ಸಮಿತಿಯ ಪದಾಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನವನ್ನು ತಿಳಿಸುವುದಾಗಿ ಹೇಳಿದ್ದೇನೆ’ ಎಂದರು. 

ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜು, ರಾಜ್ಯ ಸಂಚಾಲಕ ಓಬಳೇಶ್‌,  ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಮುತ್ಯಾಲಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎನ್‌.ಪಿ.ಶ್ರೀನಿವಾಸ್‌ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪೌರಕಾರ್ಮಿಕರ ಬೇಡಿಕೆಗಳೇನು?

*ಸ್ವಚ್ಛತಾ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಎಲ್ಲರ ಸೇವೆಯನ್ನೂ ಕಾಯಂಗೊಳಿಸಬೇಕು

*ನೇರ ಪಾವತಿ ವ್ಯವಸ್ಥೆಯ ಮೇಲ್ವಿಚಾರಕರ ಕನಿಷ್ಠ ವೇತನವನ್ನು ₹ 25 ಸಾವಿರಕ್ಕೆ ಹೆಚ್ಚಿಸಬೇಕು

*ಬಿಬಿಎಂಪಿ ವ್ಯಾಪ್ತಿಯ  ಸ್ವಚ್ಛತಾ ಕಾರ್ಮಿಕರನ್ನು ಕಸ ನಿರ್ವಹಣೆ ಕಂಪನಿಯ ಬದಲು ಪಾಲಿಕೆಯಲ್ಲೇ ಕಾಯಂಗೊಳಿಸಬೇಕು

*ಪೌರಕಾರ್ಮಿಕರು ನಿವೃತ್ತಿ ಸಂದರ್ಭದಲ್ಲಿ ಅವರ ಜೀವನ ಭದ್ರತೆಗಾಗಿ ₹ 10 ಲಕ್ಷ ನೀಡಬೇಕು

*ಮೇಲ್ವಿಚಾರಕರ ನೇಮಕಾತಿಯ ವಯೋಮಿತಿಯನ್ನು 45 ವರ್ಷಗಳಿಂದ 55 ವರ್ಷಗಳಿಗೆ ಹೆಚ್ಚಿಸಬೇಕು

*ಈಗಿನಂತೆ ಪ್ರತಿ 700 ಜನಸಂಖ್ಯೆಗೆ ಒಬ್ಬರ ಬದಲು ಐಪಿಡಿ ಸಾಲಪ್ಪ ಅವರ ವರದಿ ಪ್ರಕಾರ ಪ್ರತಿ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರನ್ನು ನೇಮಿಸಬೇಕು

*ಕೋವಿಡ್‌ನಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬಗಳಿಗೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ₹ 30 ಲಕ್ಷ ಪರಿಹಾರ ಒದಗಿಸಬೇಕು

*ಮಹಿಳಾ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹಗಳ ಹಾಗೂ ಶೌಚಾಲಯಗಳ ವ್ಯವಸ್ಥೆ ಹಾಗೂ ಕುಡಿಯಲು ಬಿಸಿ ನೀರು, ವಸತಿ ವ್ಯವಸ್ಥೆ ಒದಗಿಸಬೇಕು

*ಐಪಿಡಿ ಸಾಲಪ್ಪ ವರದಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು

*ಭವಿಷ್ಯನಿಧಿ ಕುರಿತ ಗೊಂದಲ ಬಗೆಹರಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು