ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ: 'ಟೆಂಡರ್‌ ಷರತ್ತು ಕಟ್ಟುನಿಟ್ಟಾಗಿ ಜಾರಿಯಾಗಲಿ'

ಕಸ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಠಿಣ ನಿರ್ಧಾರ ಅಗತ್ಯ
Last Updated 4 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕಸ ವಿಲೇವಾರಿ ಟೆಂಡರ್‌ ಜಾರಿಯಾಗಿರುವ ವಾರ್ಡ್‌ಗಳಲ್ಲಿ ಗುತ್ತಿಗೆ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಸಿ ಕಸವನ್ನು ಪ್ರತ್ಯೇಕಿಸಿ ಕೊಡದವರ ವಿರುದ್ಧ ಮುಲಾಜಿಲ್ಲದೇ ದಂಡ ವಿಧಿಸಬೇಕು. ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಲ್ಲಿ ವಿಫಲವಾಗುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.

ಮೇಯರ್‌ ಹುದ್ದೆ ಅಲಂಕರಿಸಿದ್ದ ಕಾಂಗ್ರೆಸ್‌ನ ಜಿ.ಪದ್ಮಾವತಿ ಹಾಗೂ ಬಿಬಿಎಂಪಿಯಲ್ಲಿ ಸತತ ನಾಲ್ಕು ವರ್ಷ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದ ಪದ್ಮನಾಭ ರೆಡ್ಡಿ ಅವರ ಸ್ಪಷ್ಟೋಕ್ತಿಗಳಿವು.

ಬೆಂಗಳೂರಿನ ಕಸ ವಿಲೇವಾರಿ ವ್ಯವಸ್ಥೆಯ ಕುರಿತು ‘ಪ್ರಜಾವಾಣಿ’ ಸೋಮವಾರ ಏರ್ಪಡಿಸಿದ್ದ ‘ಬೆಂಗಳೂರಿನ ಕಸ –ಯಾರಿಗೆ ರಸ’ ಸಂವಾದದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡರು. ‘ಪ್ರಜಾವಾಣಿ’ಯ ಫೇಸ್‌ಬುಕ್‌ ಪುಟದಲ್ಲಿ ನೇರಪ್ರಸಾರಗೊಂಡ ಈ ಸಂವಾದದಲ್ಲಿ ಅವರು ಕಸ ವಿಲೇವಾರಿ ವ್ಯವಸ್ಥೆಯ ಲೋಪಗಳು, ಅವುಗಳನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು. ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರೆಲ್ಲರ ಸಹಕಾರವಿದ್ದರೆ ಮಾತ್ರ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ರೂಪಿಸಲು ಸಾಧ್ಯ ಎಂಬ ಸಂದೇಶ ಸಾರಿದರು. ಸಂವಾದದ ಪ್ರಮುಖ ಅಂಶಗಳು ಇಲ್ಲಿವೆ.

* ಸಿಲಿಕಾನ್‌ ಸಿಟಿ, ಕ್ರಿಯಾಶೀಲ ನಗರ ಎಂಬ ಶ್ರೇಯ ಪಡೆದ ಬೆಂಗಳೂರಿಗೆ ಕಸದ ವಿಚಾರದಲ್ಲಿ ಕಳಂಕ ಅಂಟಿಕೊಳ್ಳಲು ಕಾರಣವೇನು?

ಪದ್ಮಾವತಿ: ಜನರ ಅಸಹಕಾರವೂ ಇದಕ್ಕೆ ಕಾರಣ. ಇದರಲ್ಲಿ ಅಧಿಕಾರಿಗಳ ಹೊಣೆಯೂ ಇದೆ. ಕಸ ಸಂಗ್ರಹಿಸಿ ಸಾಗಿಸುವ ವ್ಯವಸ್ಥೆಯಲ್ಲೇ ಲೋಪಗಳಿವೆ. ಕಸದ ವೈಜ್ಞಾನಿಕ ವಿಲೇವಾರಿಗೆ ತಳಮಟ್ಟದ ಯೋಜನೆ ರೂಪಿಸಿದರೂ ಅದರ ಅನುಷ್ಠಾನ ಕುಂಠಿತವಾಗಿದೆ. ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಣೆ ಆಗುತ್ತಿಲ್ಲ. ಟೆಂಡರ್‌ ಕರೆದು ಕಸವನ್ನು ಸರಿಯಾದ ರೀತಿ ವಿಲೇ ಮಾಡುವುದರಲ್ಲೂ ಹಿಂದುಳಿದಿದ್ದೇವೆ. ಪೌರಕಾರ್ಮಿಕರ ಸಂಘಟನೆಗಳ ಕೆಲವು ಬೇಡಿಕೆಗಳು, ಗುತ್ತಿಗೆದಾರರ ಮಾಫಿಯಾಗಳೂ ಈ ವ್ಯವಸ್ಥೆ ಹದಗೆಡುವುದಕ್ಕೆ ಕಾರಣ.

ನಾನು ಮೇಯರ್‌ ಆಗಿದ್ದಾಗ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು, ಅಧಿಕಾರಿಗಳು ಹಾಗೂ 198 ವಾರ್ಡ್‌ಗಳ ಪಾಲಿಕೆ ಸದಸ್ಯರನ್ನು ಸೇರಿಸಿ ಸೈನ್ಯ ಕಟ್ಟಿಕೊಂಡು ‘ಕಾಂಪೋಸ್ಟ್‌ ಹಬ್ಬ’ ಹಮ್ಮಿಕೊಳ್ಳುತ್ತಿದ್ದೆ. ಪ್ರತಿ ಭಾನುವಾರ ಒಂದೊಂದು ವಾರ್ಡ್‌ನಲ್ಲಿ ಇಂತಹ ಕಾರ್ಯಕ್ರಮ ಏರ್ಪಡಿಸಿದ್ದರ ಪರಿಣಾಮ ಕಸ ವಿಂಗಡಣೆ ಪ್ರಮಾಣ ಶೇ 55ರಷ್ಟು ತಲುಪಿತ್ತು. ಎಲ್ಲವೂ ಮತ್ತೆ ಹಳಿ ತಪ್ಪಿದೆ.

ಪದ್ಮನಾಭ ರೆಡ್ಡಿ: ನಮ್ಮ ನಗರ ಮಾತ್ರವಲ್ಲ, ಜಗತ್ತಿನ ಅನೇಕ ದೊಡ್ಡ ನಗರಗಳಲ್ಲೂ ಕಸ ವಿಲೇವಾರಿ ಸಮಸ್ಯೆ ಇದೆ. ನಗರದಲ್ಲಿ ನಿತ್ಯ 4 ಸಾವಿರ ಟನ್‌ ಕಸ ಮನೆ ಮನೆಗಳಿಂದ ಉತ್ಪಾದನೆಯಾಗುತ್ತಿದೆ. 1500 ಟನ್‌ಗಳಷ್ಟುಸಗಟು ಕಸ ಉತ್ಪತ್ತಿಯಾಗುತ್ತಿದೆ. ಮೂಲದಲ್ಲೇ ಕಸ ಬೇರ್ಪಡಿಸಬೇಕು. ನಿರುಪಯುಕ್ತ ತ್ಯಾಜ್ಯವನ್ನು (ಆರ್‌ಡಿಎಫ್‌) ಮಾತ್ರ ಭೂಭರ್ತಿ ಕೇಂದ್ರ ಸೇರಬೇಕು ಎಂದು ಹಸಿರು ನ್ಯಾಯಮಂಡಳಿ ಆದೇಶ ಮಾಡಿದೆ. ಆದರೂ ಗುತ್ತಿಗೆದಾರರ ಲಾಬಿಯಿಂದಾಗಿ ಇದರ ಅನುಷ್ಠಾನಕ್ಕೆ ಹಿನ್ನಡೆ ಆಗಿದೆ. ನಗರದಲ್ಲಿ ಈಗ ಶೇ 40ರಷ್ಟು ಮಾತ್ರ ಕಸ ವಿಂಗಡಣೆಯಾಗುತ್ತಿದೆ. ಇದು ಶೇ 90ಕ್ಕೆ ತಲುಪಬೇಕು.

ರಾಜ್ಯ ಸರ್ಕಾರ ‘ಬೆಂಗಳೂರು ವಿಷನ್‌ 2022’ ಅಡಿ ಕಸಮುಕ್ತ ನಗರವನ್ನು ರೂಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಶುಭ್ರ ಬೆಂಗಳೂರು ಯೋಜನೆಗೆ ₹ 990 ಕೋಟಿ ಅನುದಾನವನ್ನೂ ಮೀಸಲಿಟ್ಟಿದೆ.

* ಕಸ ವಿಲೇವಾರಿಗೆವಾರ್ಡ್‌ವಾರು ಟೆಂಡರ್‌ ಕರೆದರೂ ಅದರ ಅನುಷ್ಠಾನಕ್ಕೆ ಎರಡೂವರೆ ವರ್ಷ ಬೇಕಾಯಿತು. ಕಸದ ಮಾಫಿಯಾದಲ್ಲಿ ಪಾಲಿಕೆ ಸದಸ್ಯರೂ ಕೈಜೋಡಿಸಿದ್ದರಿಂದಲೇ ಹೀಗಾಯಿತು ಎಂಬ ಆರೋಪವಿದೆಯಲ್ಲಾ?

ಪದ್ಮನಾಭ ರೆಡ್ಡಿ: ವಾರ್ಡ್‌ನ ಅಭಿವೃದ್ಧಿಗೆ ಪ್ರತಿಯೊಬ್ಬ ಪಾಲಿಕೆ ಸದಸ್ಯರೂ ಕೆಲಸ ಮಾಡುತ್ತಾರೆ. ವ್ಯವಸ್ಥೆಯೇ ಏರುಪೇರಾದಾಗ ಅವರೂ ಏನೂ ಮಾಡಲಾಗದು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ಸರಿಯಾಗಿ ಕಡತ ವಿಲೇವಾರಿ ಮಾಡದ ಕಾರಣ, ಈ ಕಳಂಕವನ್ನು ಎಲ್ಲ ಪಾಲಿಕೆ ಸದಸ್ಯರೂ ಹೊರಬೇಕಾಗಿ ಬಂದಿದೆ.

ಪದ್ಮಾವತಿ: ಕೆಲವು ಗುತ್ತಿಗೆದಾರರು, ಪೌರಕಾರ್ಮಿಕರ ಸಂಘಟನೆಗಳು ನ್ಯಾಯಾಲಯಕ್ಕೆ ಹೋದವು. ಟೆಂಡರ್‌ ಕುರಿತ ದಾಖಲೆಗಳ ಸಲ್ಲಿಕೆ ವಿಳಂಬವಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಿಂದಾಗಿಯೂ ವಿಳಂಬವಾಯಿತು. ಈಗಾಗಲೇ 38 ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಟೆಂಡರ್‌ ಜಾರಿಯಾಗಿದೆ. ಉಳಿದ ವಾರ್ಡ್‌ಗಳಲ್ಲೂ ಜಾರಿ ಮಾಡಲಿ.

* ಪಾಲಿಕೆ ಸದಸ್ಯರು ಸರಿಯಾಗಿ ಕೆಲ ಮಾಡಿಲ್ಲ ಎಂಬ ಕಾರಣಕ್ಕೆ ಕಸ ಸಂಸ್ಕರಣೆಯ ನಿರ್ವಹಣೆಗಾಗಿ ಪ್ರತ್ಯೇಕ ಮಂಡಳಿಯನ್ನು ರಚಿಸಲು ಸರ್ಕಾರ ಹೊರಟಿದೆಯಲ್ಲಾ?

ಪದ್ಮನಾಭ ರೆಡ್ಡಿ: ಕಸ ವಿಲೇವಾರಿಯ ಲೋಪಕ್ಕೆ ಪಾಲಿಕೆ ಸದಸ್ರನ್ನು ದೂಷಿಸುವವರು ಒಂದು ವಿಚಾರ ಗಮನಿಸಬೇಕು. ಬಿಬಿಎಂಪಿಯಲ್ಲಿ ಈಗ ಆಡಳಿತಾಧಿಕಾರಿ ಇದ್ದಾರೆ.ಈಗ ಪಾಲಿಕೆ ಸದಸ್ಯರೇ ಇಲ್ಲ. ಟೆಂಡರ್‌ ಕರೆದು 68 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಕಾರ್ಯಾದೇಶ ನೀಡಿದ್ದರೂ ಕೇವಲ 26 ವಾರ್ಡ್‌ಗಳಲ್ಲಿ ಮಾತ್ರ ಇದು ಜಾರಿಯಾಗಿದೆ. ಇದರಿಂದ ಕಸದ ಮಾಫಿಯಾವೇ ಈ ವಿಚಾರದಲ್ಲಿ ಅಡ್ಡಿಪಡಿಸುತ್ತಿದೆ ಎಂಬುದು ಸ್ಪಷ್ಟ.

ಕಸ ಸಂಸ್ಕರಣಾ ಘಟಕಗಳ ಅಭಿವೃದ್ಧಿಗೆಸರ್ಕಾರ ಮಂಜೂರು ಮಾಡಿದ ₹ 540 ಕೋಟಿ ಹಣ ಆ ಉದ್ದೇಶಕ್ಕೆ ಬಳಕೆ ಆಗಿಲ್ಲ. ಅದರ ಬದಲು ಭೂಭರ್ತಿ ಕೇಂದ್ರಗಳ ಆಸುಪಾಸಿನ ಪ್ರದೇಶಗಳ ಅಭಿವೃದ್ಧಿಗೆ ಅದನ್ನು ದುರುಪಯೋಗ ಪಡಿಸಿಕೊಳ್ಳಲಾಯಿತು. ಯಶವಂತಪುರ ಕ್ಷೇತ್ರಕ್ಕೆ ₹ 123 ಕೋಟಿ, ಬೊಮ್ಮನಹಳ್ಳಿ ಕ್ಷೇತ್ರಕ್ಕೆ ₹ 100 ಕೋಟಿ, ಆನೆಕಲ್‌ಗೆ ₹ 33ಕೋಟಿ, ಬ್ಯಾಟರಾಯನಪುರಕ್ಕೆ ₹ 35 ಕೋಟಿ, ಮಿಟ್ಟಗಾನಹಳ್ಳಿ ಸುತ್ತಮುತ್ತಲ ಪ್ರದೇಶ ಅಭಿವೃದ್ಧೀಗೆ ₹ 65 ಕೋಟಿ, ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ₹ 10 ಕೋಟಿ ಹಾಗೂ ಯಲಹಂಕ ಕ್ಷೇತ್ರಕ್ಕೆ ₹ 110 ಕೋಟಿ ಖರ್ಚು ಮಾಡಿದರು. ಮೇಯರ್‌ಗಳು ಈ ದುರ್ಬಳಕೆಗೆ ಕಡಿವಾಣ ಹಾಕುವ ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಈಗ ನಾಲ್ಕು ಕಸ ಸಂಸ್ಕರಣಾ ಘಟಕಗಳೂ ಮುಚ್ಚಿ ಹೋಗಿವೆ. ಕಸದ ಸಮಸ್ಯೆ ಮಾತ್ರ ಬಿಗಡಾಯಿಸುತ್ತಲೇ ಇದೆ.

ಪದ್ಮಾವತಿ: ಕಸ ಸಂಸ್ಕರಣಾ ಘಟಕಗಳ ಹಣ ಬೇರೆ ಉದ್ದೇಶಕ್ಕೆ ಬಳಕೆ ಆಗಿದ್ದರ ಹಿಂದೆ ಎಲ್ಲ ಪಕ್ಷಗಳ ಪಾತ್ರವೂ ಇದೆ. ಇದರಲ್ಲಿ ಕಾಂಗ್ರೆಸ್‌–ಬಿಜೆಪಿ ಎಂಬ ಬೇಧವಿಲ್ಲ.

ಕಸ ವಿಲೇವಾರಿಗೆ ಪ್ರತ್ಯೇಕ ಮಂಡಳಿ ರಚಿಸುವ ಪ್ರಸ್ತಾಪಕ್ಕೆ ನಮ್ಮ ಸ್ಪಷ್ಟ ವಿರೋಧ ಇದೆ. ಮೂಲಸೌಕರ್ಯ ಕಲ್ಪಿಸುವುದು ಪಾಲಿಕೆ ಸದಸ್ಯರ ಕರ್ತವ್ಯ. ಯಾರೋ ಮಾಡಿದ ತಪ್ಪಿಗೆ ಕಸ ವಿಲೇವಾರಿ ವ್ಯವಸ್ಥೆಯನ್ನು ಪಾಲಿಕೆಯಿಂದ ಕಿತ್ತುಕೊಳ್ಳುವುದು ಸರಿಯಲ್ಲ. ಇದರಿಂದ ಪಾಲಿಕೆಯ ಗೌರವವೂ ಕಡಿಮೆ ಆಗಲಿದೆ. ಈಗಲೂ ಕಾಲ ಮಿಂಚಿಲ್ಲ. 198 ವಾರ್ಡ್‌ಗಳಲ್ಲೂ ಟೆಂಡರ್‌ ಕರೆದೇ ಕಸ ವಿಲೇವಾರಿ ಮಾಡಲಿ. ಆಗ ಇನ್ನು ಹೆಚ್ಚಿನ ಪ್ರಗತಿ ನಿರೀಕ್ಷೆ ಮಾಡಬಹುದು.

ಕಸ ವಿಲೇವಾರಿಗೆ ಬಿಬಿಎಂಪಿ 1 ಸಾವಿರ ಎಕರೆ ಜಾಗ ಕಾಯ್ದರಿಸಬೇಕು ಎಂದು ಮೂವತ್ತು ವರ್ಷಗಳ ಹಿಂದೆಯೇ ಕೌನ್ಸಿಲ್‌ನಲ್ಲಿ ಚರ್ಚೆ ನಡೆದಿತ್ತು. ಆದರೆ, ಅನೇಕ ಸರ್ಕಾರಗಳು ಬದಲಾದರೂ ಇಂತಹ ದಿಟ್ಟ ಹೆಜ್ಜೆ ಇಡಲಿಲ್ಲ. ಕಾಂಗ್ರೆಸ್‌ ಸರ್ಕಾರವಿದ್ದಾಗ ಎಂಟು ಕಡೆ ಕಸ ಸಂಸ್ಕರಣಾ ಘಟಕ ಆರಂಭಿಸಿದೆವು. ಒಂದೇ ಜಾಗಕ್ಕೆ ಇಡೀ ನಗರದ ಕಸ ಹೋದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಅಲ್ಲಿನ ಜನರ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.

* ಕಸವನ್ನು ಬೇರೆ ಕಡೆಗೆ ಸಾಗಿಸಿ ವಿಲೇ ಮಾಡುವ ಬಗ್ಗೆ ತೋರಿಸುವಷ್ಟು ಆಸಕ್ತಿಯನ್ನು ಮನೆಯಲ್ಲೇ ಕಸದಿಂದ ಗೊಬ್ಬರ ತಯಾರಿಸುವ ಬಗ್ಗೆ, ಕಸವನ್ನು ಆಯಾ ವಾರ್ಡ್‌ನಲ್ಲೇ ವಿಲೇ ಮಾಡುವ ಬಗ್ಗೆ ಏಕೆ ತೋರಿಸುತ್ತಿಲ್ಲ?

ಪದ್ಮನಾಭ ರೆಡ್ಡಿ: ಕಸವನ್ನು ಆದಷ್ಟು ಸ್ಥಳೀಯ ಮಟ್ಟದಲ್ಲೇ ವಿಲಾವಾರಿ ಮಾಡುವುದು ಉತ್ತಮ. ಆದರೆ, ಕೆಲವು ವಾರ್ಡ್‌ಗಳಲ್ಲಿ ಇದಕ್ಕಾಗಿ 10x10 ಅಡಿಗಳಷ್ಟೂ ಜಾಗವೂ ಇಲ್ಲ. ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ ಹೊರ ವಲಯದಲ್ಲಿ ವಾರ್ಡ್‌ಗಳಲ್ಲಾದರೂ ಇಂತಹ ವ್ಯವಸ್ಥೆ ಜಾರಿಗೆ ಪ್ರಯತ್ನಸಬಹುದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಂಸ್ಕರಣಾ ಘಟಕ ಆರಂಭಿಸಬಹುದು.

ಈಗ ರಾಜ್ಯ ಸರ್ಕಾರ ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗಳನ್ನು ಅನುಷ್ಠಾನ ಮಾಡಲು ಹೊರಟಿದೆ. ಮೂರು– ನಾಲ್ಕು ತಿಂಗಳುಗಳಲ್ಲಿ ಕಸದ ಸಮಸ್ಯೆ ಖಂಡಿತಾ ನಿವಾರಣೆ ಆಗುತ್ತದೆ.

ಪದ್ಮಾವತಿ: ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಚಾಲನೆ ನೀಡಲಾಗಿತ್ತು. ಈ ಬಗ್ಗೆ ಪೂರ್ವ ತಯಾರಿಯೂ ನಡೆದಿತ್ತು. ಅದನ್ನೂ ಈಗ ಅನುಷ್ಠಾನಗೊಳಿಸಲಾಗುತ್ತಿದೆ. ಈಗಿನ ಸರ್ಕಾರ ಕಸ ವಿಲೇವಾರಿಗಾಗಿ ಪ್ರತಿ ಮನೆಯಿಂದ ₹ 200 ಶುಲ್ಕ ವಿಧಿಸಲು ಹೊರಟಿದೆ. ನಮ್ಮ ಪಕ್ಷದವರು ಹೋರಾಟ ಮಾಡಿದ್ದರಿಂದ ಇದನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಮತ್ತೆ ಯಾವಾಗ ಮುಂದುರಿಸುತ್ತಾರೋ ಗೊತ್ತಿಲ್ಲ. ಕಸದಲ್ಲಿ ಪಕ್ಷಾತೀತವಾಗಿ ವಿಶ್ವವೇ ಬೆಂಗಳೂರು ಆಧುನಿಕ ಭಾರತದ ಮುಖ ಇದ್ದ ಹಾಗೆ. ಕಸ ಬಂದಾಗ ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಎಲ್ಲ ಸರ್ಕಾರಗಲೂ ಈ ಸಮಸ್ಯೆ ನಿವಾರಣೆಗೆ ಕೊಡುಗೆ ನೀಡಿವೆ.

ಪದ್ಮನಾಭ ರೆಡ್ಡಿ: ಇವರು ವಿರೋಧ ಪಕ್ಷದಲ್ಲಿದ್ದೇವೆ ಎಂಬ ಕಾರಣಕ್ಕೆ ವಿರೋಧ ಮಾಡುವುದು ಸರಿಯಲ್ಲ. ಕಸ ವಿಲೇವಾರಿಗೆ ಬಳಕೆದಾರರ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ಬೈಲಾ ರೂಪುಗೊಂಡಿದ್ದೇ ಪಾಲಿಕೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಆಡಳಿತದ ಕಾಲದಲ್ಲಿ. ನಮ್ಮ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಅಷ್ಟೆ. ಈಗ ಕಸ ವಿಲೇವಾರಿ ಸೆಸ್‌ನಿಂದ ವಾರ್ಷಿಕ ವಾಗಿ ಕೇವಲ ₹ 43 ಕೋಟಿ ಸಂಗ್ರಹವಾಗುತ್ತಿದೆ. ಕಸ ವಿಲೇವಾರಿ ₹ 1 ಸಾವಿರ ಕೋಟಿಗೂ ಹೆಚ್ಚು ಹಣ ಬೇಕು. ಪಾಲಿಯ ವಾರ್ಷಿಕ ವರಮಾನ ಇರುವುದು ಕೇವಲ ₹ 3,500 ಕೋಟಿ. ಇನ್ನು ಅಭಿವೃದ್ಧಿಗೆ, ಅಧಿಕಾರಿಗಳ ಸಂಬಳಕ್ಕೆ ಹಾಗೂ ಕಸ ವಿಲೇವಾರಿಗೆ ಹಣ ಹೊಂದಿಸುವುದು ಹೇಗೆ? ಜನರು ದುಡ್ಡು ಕೊಡಲು ಹಿಂದೇಟು ಹಾಕುವುದಿಲ್ಲ. ಆದರೆ ವಿದೇಶಗಳಲ್ಲಿರುವ ನಗರಗಳಿಗಿಂತಲೂ ಉತ್ತಮ ವ್ಯವಸ್ಥೆ ನಮ್ಮಲ್ಲಿ ರೂಪುಗೊಳ್ಳಲಿ ಎಂದು ಬಯಸುತ್ತಾರೆ ಅಷ್ಟೆ.

* ಅನೇಕ ದೇಶಗಳಲ್ಲಿ ಕಸವನ್ನು ವ್ಯರ್ಥ ಎಂದು ಪರಿಗಣಿಸುವುದಿಲ್ಲ. ಅದನ್ನೂ ಉತ್ಪನ್ನವಾಗಿ ಪರಿಗಣಿಸಿ ಅದರಿಂದಲೂ ಆದಾಯ ಗಳಿಸುತ್ತಾರೆ. ನಮ್ಮಲ್ಲಿ ಇದೇಕೆ ಸಾಧ್ಯವಿಲ್ಲ?

ಪದ್ಮಾವತಿ: ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ಜೊತೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ಇದು ಸಾಧ್ಯ. ಈ ವಿಚರದಲ್ಲಿ ಜನಪ್ರತಿನಿಧಿಗಳ ಜವಾಬ್ದಾರಿ ಹೆಚ್ಚು ಇದೆ.

* ಟೆಂಡರ್ ಜಾರಿಯಾದ ಬಳಿಕವೂ ಕಸ ವಿಂಗಡಣೆಯಲ್ಲಿ ನಿರೀಕ್ಷಿತ ಪ್ರಗತಿ ಆಗುತ್ತಿಲ್ಲವಲ್ಲ?

ಪದ್ಮನಾಭ ರೆಡ್ಡಿ: ಆಟೊ ಟಿಪ್ಪರ್‌ಗಳಲ್ಲಿ ಮೆನೆ ಮನೆಯಿಂದ ಕಸ ಸಂಗ್ರಹಿಸುವವರು ಹಸಿ ಕಸ ಮಾತ್ರ ಪಡೆಯಬೇಕು.10 ದಿನ ವಿಂಗಡಣೆ ಮಾಡಿದ ಕಸ ತೆಗೋತಾರೆ. 11ನೇ ದಿನ ಮತ್ತೆ ಮಿಶ್ರ ಕಸ ಸಂಗ್ರಹಿಸುತ್ತಾರೆ. ಷರತ್ತು ಪಾಲಿಸದ ಗುತ್ತಿಗೆದಾರರನ್ನು ಪಾಲಿಕೆ ಕಪ್ಪು ಪಟ್ಟಿಗೆ ಸೇರಿಸಲಿ. ಮೂಲದಲ್ಲೇ ಕಸವನ್ನು ವಿಂಗಡಿಸಿ ನೀಡದವರಿಗೂ ದಂಡ ಹಾಕಲಿ.

ಪಾಲಿಕ ಸದಸ್ಯರರಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಈಗಿನ ವ್ಯವಸ್ಥೆಯಲ್ಲಿ ಪಾಲಿಕೆ ಸದಸ್ಯರು ಅಥವಾ ಮೇಯರ್‌ ಅಕ್ರಮವನ್ನು ಆಯುಕ್ತರ ಗಮನಕ್ಕೆ ತರಬಹುದು ಅಷ್ಟೇ. ಕ್ರಮ ತಗೆದುಕೊಳ್ಳಲು ಅವರಿಗೆ ಅಧಿಕಾರ ಇಲ್ಲ. ಮುಖ್ಯಮಂತ್ರಿ ತರಹ ಎಲ್ಲ ರೀತಿಯ ಆಡಳಿತಾತ್ಮಕ ಅಧಿಕಾರ ನೀಡಬೇಕಿಲ್ಲ. ಹಣಕಾಸಿನ ಅಧಿಕಾರವೂ ಬೇಕಾಗಿಲ್ಲ. ಅಕ್ರಮ ತಡೆಯಲು ಕ್ರಮ ತೆಗೆದುಕೊಳ್ಳುವ ಆಯಕ್ತರಿಗೆ ಸೂಚನೆ ನೀಡುವ ಅಧಿಕಾರವನ್ನಾದರೂ ನೀಡಲಿ. ಹೊಸ ಬಿಬಿಎಂಪಿ ಕಾಯ್ದೆಯಲ್ಲಿ ವಾರ್ಡ್‌ ಸಮಿತಿಗೆ ಸ್ವಲ್ಪ ಮಟ್ಟಿನ ಅಧಿಕಾರಿ ನೀಡಲಾಗಿದೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಬಲವಾಆದ ನಿಯಮ ರೂಪಿಸಬೇಕು.

ಪದ್ಮಾವತಿ: ನಮ್ಮ ರಸ್ತೆ, ನಮ್ಮೂರು ಸ್ವಚ್ಛವಾಗಿರಬೇಕು ಹೊಣೆ ಸಾರ್ವಜನಿಕರ ಮನಸ್ಸಿನಲ್ಲಿ ಬರಬೇಕು. ಆದರೆ, ನಮ್ಮಲ್ಲಿ ದಂಡ ಪ್ರಯೋಗಿಸದೇ ಕಸ ವಿಲೇವಾರಿ ವ್ಯವಸ್ಥೆ ಸರಿದಾರಿಗೆ ತರುವುದು ಕಷ್ಟ. ನಮ್ಮ ವಾರ್ಡ್‌ನ ಪಕ್ಕದ ವಾರ್ಡ್‌ನಲ್ಲಿ ವಾಣಿಜ್ಯ ಚಟುವಟಿಕೆ ಜಾಸ್ತಿ. ಅಲ್ಲಿನ ಕೆಲವು ವ್ಯಾಪಾರಿಗಳು ಬಟ್ಟೆ ಚೂರುಗಳನ್ನು ನಮ್ಮ ವಾರ್ಡ್‌ ಪಕ್ಕದ ರಾಜಕಾಲುವೆ ಸುರಿಯುತ್ತಾರೆ. ಮಾರ್ಷಲ್‌ಗಳು ರಾತ್ರಿ ಗಸ್ತನ್ನು ಸರಿಯಾಗಿ ನಿರ್ವಹಿಸಬೇಕು. ಬೆಳಿಗ್ಗೆ 8ಕ್ಕೆ ಮುಂಚೆ ಕಸ ಒಯ್ಯಲು ಮನೆಗೆ ಹೋದರೆ ಇದು ತುಂಬಾ ಬೇಗ ಎನ್ನುತ್ತಾರೆ. ಬೆಳಿಗ್ಗೆ 10 ಗಂಟೆ ನಂತರ ಹೋದರೆ ತಡವಾಯಿತು ಎನ್ನುತ್ತಾರೆ. ರಾತ್ರೋರಾತ್ರಿ ಕಸವನ್ನು ಬೀದಿ ಬದಿ ಬಿಸಾಡುವ ಚಾಳಿ ನಿಲ್ಲುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡ ಹಾಕಬೇಕು.

‘ಬೆಂಗಳೂರಿನಲ್ಲೂ ಪಾಲಿಕೆ ಕಸ ಮಾರಾಟ ಮಾಡುತ್ತಿತ್ತು’

‘ಬೆಂಗಳೂರಿನಲ್ಲೂ 45 ರ್ಷಗಳ ಹಿಂದೆ ಪಾಲಿಕೆ ಕಸವನ್ನು ಮಾರಾಟ ಮಾಡುತ್ತಿತ್ತು. ಇದಕ್ಕಾಗಿ ಟೆಂಡರ್‌ ಕರೆಯಲಾಗುತ್ತಿತ್ತು. ಶ್ರೀಮಂತ ರೈತರು ದುಡ್ಡುಕೊಟ್ಟು ಕಸವನ್ನು ಖರೀದಿಸುತ್ತಿದ್ದರು. ಕೆಲವು ಪ್ರದೇಶಗಳ ಕಸದ ತೊಟ್ಟಿಗಳನ್ನು ಅವರು ದುಡ್ಡು ಕೊಟ್ಟು ವಹಿಸಿಕೊಳ್ಳುತ್ತಿದ್ದರು. ತೊಟ್ಟಿಯನ್ನು ಗುತ್ತಿಗೆಗೆ ಪಡೆದ ರೈತರ ಮನೆ ಮುಂದೆ ಸಣ್ಣ ಪುಟ್ಟ ರೈತರು ಕಸ ಪಡೆಯಲು ಕಾದು ಕುಳಿತುಕೊಳ್ಳುತ್ತಿದ್ದರು. ಗುತ್ತಿಗೆದಾರರು ಒಂದೊಂದು ತೊಟ್ಟಿಯನ್ನು ಮಾರಾಟ ಮಾಡುತ್ತಿದ್ದರು. ನಮ್ಮೂರ ಬಳಿ ರೈತರು ಕಸ ರಾಶಿ ಹಾಕುತ್ತಿದ್ದರು. ಮಳೆಗಾಲದಲ್ಲಿ ಅದನ್ನು ಕೊಂಡೊಯ್ಯುತ್ತಿದ್ದರು.’ ಎಂದು ಪದ್ಮನಾಭ ರೆಡ್ಡಿ ಮೆಲುಕು ಹಾಕಿದರು.

‘ಕಸದ ಜೊತೆ ಪ್ಲಾಸ್ಟಿಕ್‌ ಬೆರೆತ ಬಳಿಕ ಎಲ್ಲವೂ ಬದಲಾಯಿತು. ಈಗ ಪ್ರಪಂಚವೇ ಪ್ಲಾಸ್ಟಿಕ್‌ಮಯವಾಗಿದೆ. ಜನರೂ ಪ್ಲಾಸ್ಟಿಕ್‌ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಸರ್ಕಾರ ಪ್ಲಾಸ್ಟಿಕ್‌ ನಿಷೇಧ ಮಾಡಿದರೂ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಮರುಬಳಕೆ ಸಾಧ್ಯವಿಲ್ಲದ ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾದರೆ ಕಸದ ಸಮಸ್ಯೆ ಅರ್ಧದಷ್ಟು ಬಗೆಹರಿಯಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

‘ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಪದ್ಮಾವತಿ ಅವರು ಆಗ್ರಹಿಸಿದರು.

‘ಕಸ–ಕಾದಿದೆ ಗಂಭೀರ ಸಮಸ್ಯೆ’

‘ಭೂಭರ್ತಿ ಕೇಂದ್ರಕ್ಕೆ ಕಸ ಹಾಕುವ ವಿಚಾರ ವೈಫಲ್ಯ ಕಾಣುತ್ತಲೇ ಇದೆ. ಮಂಡೂರು, ಮಾವಳ್ಳಿಪುರ, ಬಿಂಗಿಪುರ, ಲಕ್ಷ್ಮೀಪುರ, ಬೆಳ್ಳಹಳ್ಳಿ ಜಕ್ವಾರಿಗಳನ್ನೆಲ್ಲ ಮುಚ್ಚಲಾಗಿದೆ. ಟೆರ್ರಾಫಾರ್ಮ್‌ಗೆ ಕಸ ಸಾಗಿಸುವುದನ್ನು ನಿಲ್ಲಿಸಲಾಗಿದೆ. ಮಿಟ್ಟಗಾನಹಳ್ಳಿಯ ಮೊದಲ ಕ್ವಾರಿ ಭರ್ತಿಯಾಗಿದೆ. ಈಗ ನಗರದಲ್ಲಿ ಉತ್ಪಾದನೆಯಾಗುವ ಸುಮಾರು 3 ಸಾವಿರ ಟನ್‌ ಕಸವನ್ನು ಮಿಟ್ಟಗಾನಹಳ್ಳಿ ಕ್ವಾರಿಯೊಂದರಲ್ಲೇ ವಿಲೇ ಮಾಡಲಾಗುತ್ತಿದೆ. ಇನ್ನು ನಾಲ್ಕೈದು ತಿಂಗಳಲ್ಲಿ ಈ ಕ್ವಾರಿಯೂ ಭರ್ತಿ ಆಗಲಿದೆ. ಬಳಿಕ ಕಸ ವಿಲೇವಾರಿ ಗಂಭೀರ ಸಮಸ್ಯೆ ಕಾದಿದೆ. ಟೂರಿಂಗ್‌ ಟ್ಯಾಕೀಸ್‌ ತರಹ ಇನ್ನೊಂದು ಜಾಗ ಹುಡುಕು ಸಾಗಬೇಕು’ ಎಂದು ಪದ್ಮನಾಭ ರೆಡ್ಡಿ ಎಚ್ಚರಿಸಿದರು.

‘ಹೊರೆಯಾಗಲಿದೆ ಭೂಭರ್ತಿ ಕೇಂದ್ರಗಳ ಬಯೊಮೈನಿಂಗ್‌’

‘ಭೂಭರ್ತಿ ಕೇಂದ್ರಗಳ ವೈಜ್ಞಾನಿಕ ನಿರ್ವಹಣೆ ಮಾಡದ್ದಕ್ಕೆ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಮಂಡೂರು ಮಾವಳ್ಳಿ ಪುರಗಳ ಭೂಭರ್ತಿ ಕೇಂದ್ರಗಳಲ್ಲಿ ಕಸ ಬೆಟ್ಟದಂತೆ ರಾಶೀ ಬಿದ್ದಿದೆ. ಭೂಭರ್ತಿ ಕೇಂದ್ರಗಳಲ್ಲಿ ಬಯೋಮೈನಿಂಗ್‌ ನಡೆಸಲು ಹಸಿರು ನ್ಯಾಯಮಂಡಳಿ ಆದೇಶ ಮಾಡಿದೆ. ಇದಕ್ಕಾಗಿ ಸರ್ಕಾರ ₹ 540 ಕೋಟಿಗೂ ಹೆಚ್ಚು ವೆಚ್ಚ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪದ್ಮನಾಭ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

‘ಬಾಗಲೂರು ಭೂಭರ್ತಿ ಕೇಂದ್ರ ಬಯೋಮೈನಿಂಗ್‌ಗೆ ಟೆಂಡರ್‌ ಕರೆಯಲಾಗಿದೆ. ಇನ್ನು ಮಂಡೂರು ಹಾಗೂ ಇತರ ಭೂಭರ್ತಿ ಕೇಂದ್ರಗಳ ಬಯೋಮೈನಿಂಗ್‌ ನಡೆಸುವುದಕ್ಕೂ ಶೀಘ್ರವೇ ಆದೇಶ ಹೊರಬೀಳಬಹುದು’ ಎಂದರು.

* ಕಸಮುಕ್ತ ಬೆಂಗಳೂರನ್ನು ಕಟ್ಟುವಲ್ಲಿ ಹೆಣ್ಣುಮಕ್ಕಳ ಪಾತ್ರ ಮಹತ್ವದ್ದು. ಸ್ತ್ರೀಶಕ್ತಿ ಸಂಘಗಳ ನೆರವು ಪ‍ಡೆದು ಕಸ ವಿಂಗಡಣೆ ಬಗ್ಗೆ ವಲಯ ವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಬೀದಿನಾಟಕ, ಕಾಂಪೋಸ್ಟ್ ಹಬ್ಬಗಳು ಅಲ್ಲಲ್ಲಿ ನಡೆಯಬೇಕು.

–ಪದ್ಮಾವತಿ, ಕಾಂಗ್ರೆಸ್‌ ಮುಖಂಡೆ

* ಸ್ವಚ್ಛ ಬೆಂಗಳೂರು ನಿರ್ಮಾಣವನ್ನು ನಮ್ಮ ಸರ್ಕಾರ ಸವಾಲಾಗಿ ಸ್ವೀಕರಿಸಿದೆ. ಇದನ್ನು ಶೀಘ್ರದಲ್ಲೇ ಸಾಧಿಸಿ ತೋರಿಸಲಿದೆ. ಜನರೂ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು.

– ಪದ್ಮನಾಭ ರೆಡ್ಡಿ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT