ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಕೆವಿಕೆ | ನ.14ರಿಂದ ’ಕೃಷಿ ಮೇಳ’: ಕೃಷಿಕ ಸ್ನೇಹಿ ತಾಂತ್ರಿಕತೆಗಳ ಪ್ರದರ್ಶನ

Published : 20 ಸೆಪ್ಟೆಂಬರ್ 2024, 15:28 IST
Last Updated : 20 ಸೆಪ್ಟೆಂಬರ್ 2024, 15:28 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ(ಜಿಕೆವಿಕೆ) ಆವರಣದಲ್ಲಿ ನವೆಂಬರ್ 14 ರಿಂದ 17ರವರೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ‘ಕೃಷಿ ಮೇಳ’ವನ್ನು ಆಯೋಜಿಸಿದೆ.

'ಹವಾಮಾನ ಚತುರ ಡಿಜಿಟಲ್‌ ಕೃಷಿ (ಕ್ಲೈಮೇಟ್‌ ಸ್ಮಾರ್ಟ್‌ ಡಿಜಿಟಲ್‌ ಅಗ್ರಿಕಲ್ಚರ್‌)’ ಎಂಬ ಶೀರ್ಷಿಕೆಯಡಿ ಮೇಳ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಕೃಷಿ ವಿ.ವಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ 19 ನೂತನ ತಾಂತ್ರಿಕತೆಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕೃಷಿ ವಿ.ವಿ ಪ್ರಕಟಣೆ ತಿಳಿಸಿದೆ.

ಸಾಧನಗಳು: ರಾಗಿ ಬೀಜದೊಂದಿಗೆ ಗೊಬ್ಬರವನ್ನು ಸೇರಿಸಿ ಬಿತ್ತನೆ ಮಾಡುವ ಕೈಚಾಲಿತ ಕೂರಿಗೆ ಸಾಧನವನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ. ಶೇಂಗಾ ಗಿಡ, ಮುಸುಕಿನ ಜೋಳದ ತೆನೆ, ಸೂರ್ಯಕಾಂತಿಯಿಂದ ಕಾಯಿ/ಕಾಳುಗಳನ್ನು ಬೇರ್ಪಡಿಸುವ ‘ಬಹು ಬೆಳೆ ಸಂಸ್ಕರಣಾ ಯಂತ್ರವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಈ ಯಂತ್ರಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ.

ಹೊಸ ತಳಿಗಳು: ಮೇಳದಲ್ಲಿ ವಿಶೇಷವಾಗಿ ಅಧಿಕ ಇಳುವರಿ ನೀಡುವ ನಾಲ್ಕು ಮೆಕ್ಕೆಜೋಳದ ತಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದರೊಂದಿಗೆ ಅಲಸಂದೆ, ಜೋಳ, ಸೂರ್ಯಕಾಂತಿಯ ಹೊಸ ತಳಿಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೇ ಕಳೆ ನಿರ್ಮೂಲನೆ, ಕೀಟ ನಿಯಂತ್ರಕ ತಾಂತ್ರಿಕತೆಗಳನ್ನು ಪರಿಚಯಿಸಲಾಗುತ್ತದೆ.‌

ನೂತನ ತಾಂತ್ರಿಕತೆ: ಮುಸುಕಿನ ಜೋಳದಲ್ಲಿ ಕಳೆ ನಿರ್ವಹಣೆ, ರಸಗೊಬ್ಬರಗಳ ಸಮರ್ಪಕ ಬಳಕೆ, ತೇಗದಲ್ಲಿ ಅಂತರ ಬೆಳೆಯಾಗಿ ಮೇವಿನ ಹುಲ್ಲುಗಳು, ನೈಸರ್ಗಿಕ ಪದ್ಧತಿಯಲ್ಲಿ ಇಲಿಗಳ ನಿರ್ವಹಣೆ, ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆ ಸೇರಿದಂತೆ ತಾಂತ್ರಿಕತೆಗಳು ಮೇಳದಲ್ಲಿ ಅನಾವರಣಗೊಳ್ಳಲಿವೆ.

ಸೆ.23 ರಿಂದ ಮೇಳದಲ್ಲಿ ಮಳಿಗೆ ಕಾಯ್ದಿರಿಸುವಿಕೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ ದೂ: 080-23638883, 23330153 ಸಂಪರ್ಕಿಸಬಹುದು ಎಂದು ಕೃಷಿ ವಿ.ವಿಯ ವಿಸ್ತರಣಾಧಿಕಾರಿ ವಿ.ಎಲ್.ಮಧುಪ್ರಸಾದ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೂತನ ಅಲಸಂದೆ ತಳಿ
ನೂತನ ಅಲಸಂದೆ ತಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT