ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಔಷಧಿ ಬೆರೆಸಿದ್ದ ಮಜ್ಜಿಗೆ ಕುಡಿಸಿ ಚಿನ್ನಾಭರಣ ಕಳವು

Published 5 ಏಪ್ರಿಲ್ 2024, 15:07 IST
Last Updated 5 ಏಪ್ರಿಲ್ 2024, 15:07 IST
ಅಕ್ಷರ ಗಾತ್ರ

ಬೆಂಗಳೂರು: ಪೇಯಿಂಗ್ ಗೆಸ್ಟ್‌ (ಪಿ.ಜಿ) ಕಟ್ಟಡದ ಮಾಲೀಕರೊಬ್ಬರಿಗೆ ಮತ್ತು ಬರುವ ಔಷಧಿ ಬೆರೆಸಿದ್ದ ಮಜ್ಜಿಗೆ ಕುಡಿಸಿ ಚಿನ್ನಾಭರಣ ಕದ್ದಿದ್ದ ಆರೋಪಿ ರಾಜೇಶ್ವರಿ (27) ಎಂಬುವವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

‘ಜೀವನ್‌ಬಿಮಾನಗರ ಬಳಿಯ ಮಲ್ಲೇಶ್ ಪಾಳ್ಯದ ರಾಜೇಶ್ವರಿ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿಯೇ ಅಡುಗೆ ಕೆಲಸ ಮಾಡಿಕೊಂಡಿದ್ದರು. ಅದೇ ಕಟ್ಟಡದ ಮಾಲೀಕರಾಗಿದ್ದ ಮಹಿಳೆಯ ಚಿನ್ನಾಭರಣ ಕದ್ದಿದ್ದರು. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ರಾಜೇಶ್ವರಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿಯಿಂದ ₹7.80 ಲಕ್ಷ ಮೌಲ್ಯದ 130 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದರು.

ಚಿನ್ನಾಭರಣ ಮಾರಿದ್ದ ಆರೋಪಿ: ‘ಪತಿಯಿಂದ ದೂರವಾಗಿದ್ದ ರಾಜೇಶ್ವರಿ, ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕರಾದ ಮಹಿಳೆ ಸಹ ರಾಜೇಶ್ವರಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮಾಲೀಕರಾದ ಮಹಿಳೆ, ಇತ್ತೀಚೆಗೆ ಸುಸ್ತಾಗಿ ಮಲಗಿದ್ದರು. ಅವರ ಕೈ–ಕಾಲು ಒತ್ತಿದ್ದ ಆರೋಪಿ, ಕುಡಿಯಲು ಮಜ್ಜಿಗೆ ಕೊಟ್ಟಿದ್ದರು. ಮಜ್ಜಿಗೆ ಕುಡಿಯುತ್ತಿದ್ದಂತೆ ಮಹಿಳೆ, ಪ್ರಜ್ಞೆ ತಪ್ಪಿದ್ದರು. ನಂತರ, ಆರೋಪಿ ಚಿನ್ನಾಭರಣ ಕದ್ದುಕೊಂಡು ಮಳಿಗೆಯೊಂದಕ್ಕೆ ಹೋಗಿದ್ದರು. ಆಭರಣಗಳನ್ನು ಮಾರಿ, ಹಣ ಪಡೆದಿದ್ದರು. ಪುನಃ, ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಬಂದಿದ್ದರು.’

‘ಕೆಲ ಹೊತ್ತಿನ ನಂತರ ಮಹಿಳೆ ಎಚ್ಚರಗೊಂಡಿದ್ದರು. ಚಿನ್ನಾಭರಣ ಕಳ್ಳತನವಾಗಿದ್ದು ಗೊತ್ತಾಗಿತ್ತು. ರಾಜೇಶ್ವರಿ ಹಾಗೂ ಇತರರನ್ನು ವಿಚಾರಿಸಿದಾಗ, ತಾವು ಕದ್ದಿಲ್ಲವೆಂದು ಹೇಳಿದ್ದರು. ಬಳಿಕವೇ ಅವರು ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ರಾಜೇಶ್ವರಿ ಮೇಲೆ ಅನುಮಾನ ಬಂದಿತ್ತು. ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT