ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ l ₹ 2.10 ಕೋಟಿ ವಹಿವಾಟು

Last Updated 4 ನವೆಂಬರ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ 2ನೇ ದಿನವಾದ ಶುಕ್ರವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಜನರು ಕಂಡುಬಂದರು. ಜಿಕೆವಿಕೆ ಆವರಣದಲ್ಲಿ ಇಡೀ ದಿನ ರೈತರು, ವಿದ್ಯಾರ್ಥಿಗಳ ಕಲರವ ಇತ್ತು. ರೈತರು ಎಲ್ಲ ಮಳಿಗೆಯನ್ನು ವೀಕ್ಷಿಸಿ, ಮಾಹಿತಿ ಪಡೆಯುವ ಪ್ರಯತ್ನ ಮಾಡಿದರು.

ಗ್ರಾಮೀಣ ಸೊಗಡು ಮಳಿಗೆಗಳು ಇರುವ ಕಡೆ ಹೆಚ್ಚಿನ ಜನರು ಕಾಣಿಸಿದರು. ಮಳೆ ಬಿಡುವು ನೀಡಿದ್ದರಿಂದ ಎಲ್ಲ ಕಡೆಯೂ ಓಡಾಟ ನಡೆಸಿ ಮೇಳ ವೀಕ್ಷಿಸಲು ಸಾಧ್ಯವಾಯಿತು.

ಎರಡನೇ ದಿನ 2.45 ಲಕ್ಷ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 11,250 ಜನರು ಕೃಷಿ ವಿಶ್ವವಿದ್ಯಾಲಯದ ರಿಯಾಯಿತಿ ದರದ ಊಟ ಸವಿದರು. ₹ 2.10 ಕೋಟಿ ವಹಿವಾಟು ನಡೆದಿದೆ. 575 ರೈತರು ಸಲಹಾ ಕೇಂದ್ರ ದಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಂಗಳೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಎಂ.ಎನ್. ಶೀಲವಂತರ್ ಮಾತನಾಡಿ, ‘ಪ್ರಸ್ತುತ ಸನ್ನಿವೇಶದಲ್ಲಿ ರೈತರ ಜೀವನ ಸಂಕಷ್ಟದಲ್ಲಿದೆ. ರೈತರಿಗೆ ಅತ್ಯಂತ ಅವಶ್ಯವಾಗಿ ಬೇಕಾಗಿರುವುದು ಆರ್ಥಿಕ, ಪೋಷಕಾಂಶ, ಮಾರುಕಟ್ಟೆ ಭದ್ರತೆ ಮತ್ತು ಬೆಳೆಗಳಿಗೆ ನೀರು’ ಎಂದು ಹೇಳಿದರು.

‘ಮಣ್ಣಿನಲ್ಲಿ ಬೆಳೆಗಳಿಗೆ ಬೇಕಾದಂತಹ ಸೂಕ್ಷ್ಮ ಪೋಷಕಾಂಶಗಳ ಕೊರತೆ ಕಂಡುಬರುತ್ತಿದೆ. ಮಣ್ಣಿನಲ್ಲಿ ಪೋಷ ಕಾಂಶ ಹೆಚ್ಚಿಸಬೇಕಿದೆ. ಸೂಕ್ತವಾದ ವೈಜ್ಞಾನಿಕ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಮಾಹಿತಿ ನೀಡಿದರು. ಚಾಮರಾಜನಗರ, ಮೈಸೂರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಹಾಗೂ ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾ.ಆರ್.ದ್ವಾರಕೀನಾಥ್ ಮತ್ತು ಪ್ರೊ.ಬಿ.ವಿ.ವೆಂಕಟರಾವ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಕೃಷಿ ಕುಲಪತಿ ಡಾ.ಎಸ್‌.ವಿ.ಸುರೇಶ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ, ಡಾ.ಕೆ.ನಾರಾಯಣಗೌಡ, ಡಾ.ಎಂ.ಹನುಮಂತಪ್ಪ, ಡಾ.ಆರ್.ಸಿ.ಜಗದೀಶ, ಡಾ.ಎನ್.ಬಿ.ಪ್ರಕಾಶ್, ಡಾ.ಕೆ.ನಾರಾಯಣಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT