ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳಿಗೆ ಭದ್ರತೆ ಒದಗಿಸಲು ಸಿದ್ಧ: ಜಿ. ಪರಮೇಶ್ವರ

Published 22 ಆಗಸ್ಟ್ 2023, 16:04 IST
Last Updated 22 ಆಗಸ್ಟ್ 2023, 16:04 IST
ಅಕ್ಷರ ಗಾತ್ರ

ಬೆಂಗಳೂರು: ಬೆದರಿಕೆ ಎದುರಿಸುತ್ತಿರುವ ಸಾಹಿತಿಗಳು ಮತ್ತು ಚಿಂತಕರಿಗೆ ಅಗತ್ಯ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಸಾಹಿತಿಗಳು ಬಯಸಿದರೆ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಕೆ. ಮರುಳಸಿದ್ದಪ್ಪ ನೇತೃತ್ವದಲ್ಲಿ ಪರಮೇಶ್ವರ ಅವರನ್ನು ಮಂಗಳವಾರ ಭೇಟಿಮಾಡಿದ ಸಾಹಿತಿಗಳು, ನಿರಂತರವಾಗಿ ಬೆದರಿಕೆ ಕರೆಗಳು ಮತ್ತು ಪತ್ರಗಳು ಬರುತ್ತಿರುವ ಕುರಿತು ಮಾಹಿತಿ ನೀಡಿದರು. ಸಾಹಿತಿಗಳ ಜತೆ ಸಭೆ ನಡೆಸಿದ ಗೃಹ ಸಚಿವರು ಈ ಕುರಿತು ವಿವರವಾಗಿ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವರು, ‘ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ರಾಜ್ಯದಲ್ಲಿ ಗೌರಿ ಲಂಕೇಶ್‌ ಮತ್ತು ಎಂ.ಎಂ. ಕಲಬುರ್ಗಿ ಅವರ ಕೊಲೆಗಳಾಗಿವೆ. ಈಗಲೂ ಹಲವು ಸಾಹಿತಿಗಳಿಗೆ ಬೆದರಿಕೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ತನಿಖೆ ನಡೆಸಲಾಗುವುದು’ ಎಂದರು.

ಸಾಹಿತಿಗಳು ಸಲ್ಲಿಸಿರುವ ಮನವಿ ಪತ್ರವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನೀಡಲಾಗಿದೆ. ಅವರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಇಬ್ಬರು ಸಾಹಿತಿಗಳಿಗೆ ಪೊಲೀಸ್ ಭದ್ರತೆಯನ್ನು ಈಗಾಗಲೇ ಒದಗಿಸಲಾಗಿದೆ. ಇನ್ನು ಯಾವುದೇ ಸಾಹಿತಿಗಳು ಕೋರಿಕೆ ಸಲ್ಲಿಸಿದರೆ ವೈಯಕ್ತಿಕ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.

ಮರುಳಸಿದ್ದಪ್ಪ ಮಾತನಾಡಿ, ‘ಬಿಜೆಪಿಯ ಅಪಾಯಕಾರಿ ನಡೆಯನ್ನು ನಾವು ಟೀಕಿಸಿದ್ದೇವೆ. ಇದರಿಂದ ಬಿಜೆಪಿಯವರಿಗೆ ಆತಂಕವಾಗಿದೆ. ಗೌರಿ ಲಂಕೇಶ್‌ ಕೊಲೆ ಏಕೆ ನಡೆದಿದೆ ಎಂಬುದು ಗೊತ್ತಿದೆ. ಅದೇ ಗುಂಪು ನಮ್ಮನ್ನು ಬೆದರಿಸುತ್ತಿದೆ. ಆ ಗುಂಪನ್ನು ಪತ್ತೆಹಚ್ಚಬೇಕು’ ಎಂದರು.

ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಜಿ. ರಾಮಕೃಷ್ಣ, ಎಲ್‌.ಎನ್‌. ಮುಕುಂದರಾಜ್‌, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವು ಸಾಹಿತಿಗಳು ನಿಯೋಗದಲ್ಲಿದ್ದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಕೂಡ ಸಭೆಯಲ್ಲಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT