ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಿಸಲು ನಿರ್ಧಾರ

ಬಿಬಿಎಂಪಿ ವಾರ್ಡ್‌ ಸಂಖ್ಯೆ ನಿಗದಿಗೆ ಸಂಖ್ಯಾಶಾಸ್ತ್ರ ಮೊರೆ ಹೋಯಿತೇ ಸರ್ಕಾರ
Last Updated 6 ಅಕ್ಟೋಬರ್ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಮ್ಮತಿಸಿದ್ದಾರೆ.

ಈ ಸಂಖ್ಯೆಯನ್ನು ನಿಗದಿಪಡಿಸಿದ್ದು ಯಾವುದೇ ಅಧ್ಯಯನವನ್ನು ಆಧರಿಸಿ ಅಲ್ಲ; ಬದಲು ಸಂಖ್ಯಾಶಾಸ್ತ್ರವನ್ನು ಆಧರಿಸಿ. 243 ಸಂಖ್ಯೆಯಲ್ಲಿರುವ ಅಂಕಿಗಳನ್ನು ಕೂಡಿಸಿದರೆ 9 ಆಗುತ್ತದೆ. 9 ಶುಭ ಸಂಖ್ಯೆ ಎಂಬುದು ವಾರ್ಡ್‌ಗಳ ಸಂಖ್ಯೆ ನಿಗದಿಪಡಿಸಿರುವುದರ ಹಿಂದಿನ ಲೆಕ್ಕಾಚಾರ.

ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ.

‘ಈ ಬಗ್ಗೆ ಶೀಘ್ರವೇ ರಾಜ್ಯಪಾಲರಿಂದ ಆದೇಶ ಪ್ರಕಟವಾಗಲಿದೆ’ ಎನ್ನುತ್ತಾರೆ ಬಿಬಿಎಂಪಿ ಮಸೂದೆ ಪರಿಶೀಲನೆಗಾಗಿ ರಚಿಸಿದ್ದ ಜಂಟಿ ಸಲಹಾ ಸಮಿತಿ ಅಧ್ಯಕ್ಷ ಎಸ್‌.ರಘು.

‘ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಮರುವಿಂಗಡಣಾ ಸಮಿತಿಯನ್ನು ರಚಿಸಲಾಗುತ್ತದೆ. ಬಿಡಿಎ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ವಿಶೇಷ ಆಯುಕ್ತರು (ಕಂದಾಯ) ಈ ಸಮಿತಿಯಲ್ಲಿರುತ್ತಾರೆ. ಈ ಸಮಿತಿಯು ನ.10ರ ಒಳಗೆ ವರದಿ ಸಲ್ಲಿಸಲಿದೆ’ ಎಂದು ರಘು ತಿಳಿಸಿದರು.

ಮರುವಿಂಗಡಣೆಯ ಬಳಿಕ ಪ್ರತಿ ವಾರ್ಡ್‌ ಸರಾಸರಿ 35 ಸಾವಿರ ಜನಸಂಖ್ಯೆಯನ್ನು ಹೊಂದಲಿದೆ.

‘ಬೆಂಗಳೂರಿನ ಈಗಿನ ಜನಸಂಖ್ಯೆಯನ್ನು 35 ಸಾವಿರದಿಂದ ಭಾಗಿಸಿದರೆ 241.5 ಬರುತ್ತದೆ. ಆದರೆ, ಜಂಟಿ ಸಲಹಾ ಸಮಿತಿ ವಾರ್ಡ್‌ಗಳ ಸಂಖ್ಯೆ 243 ಇರಬೇಕು ಎಂದು ಬಯಸಿತ್ತು. ಇದೊಂದು ಬೆಸ ಸಂಖ್ಯೆ. ಬೆಸ ಸಂಖ್ಯೆ ಇದ್ದರೆ ಮೇಯರ್‌ ಚುನಾವಣೆ ಸಂದರ್ಭದಲ್ಲಿ ತೀವ್ರ ಪೈಪೋಟಿ ಎದುರಾದರೆ ಬಹುಮತ ಸಾಬೀತುಪಡಿಸುವುದು ಸುಲಭ’ ಎಂದು ರಘು ವಿವರಿಸಿದರು.

‘ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸುವುದರ ಹಿಂದೆ ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರವೂ ಅಡಗಿದೆ. ಈ ಸಂಖ್ಯೆಯ ಅಂಕಿಗಳನ್ನು ಕೂಡಿಸಿದರೆ ಮೊತ್ತವು 9 ಆಗಲಿದೆ. ಈ ಕಾರಣಕ್ಕಾಗಿಯೇ ನಾನು ಮೊದಲಿನಿಂದಲೂ ಈ ಸಂಖ್ಯೆಯನ್ನೇ ಆಯ್ಕೆ ಮಾಡಲು ಬಯಸಿದ್ದೆ. ಕಾನೂನು ಸಚಿವ ಮಾಧುಸ್ವಾಮಿ ಅವರು ವಾರ್ಡ್‌ಗಳ ಸಂಖ್ಯೆಯನ್ನು 240ಕ್ಕೆ ನಿಗದಿಪಡಿಸುವಂತೆ ಸಲಹೆ ನೀಡಿದ್ದರು. ಇನ್ನು ಕೆಲವು ಶಾಸಕರು 250 ವಾರ್ಡ್‌ಗಳನ್ನು ರಚಿಸುವಂತೆ ಕೋರಿದ್ದರು. ಅಂತಿಮವಾಗಿ ಮುಖ್ಯಮಂತ್ರಿಯವರು 243 ವಾರ್ಡ್‌ಗಳನ್ನು ರಚಿಸುವುದು ಸೂಕ್ತ ಎಂದು ನಿರ್ಧರಿಸಿದರು’ ಎಂದು ಅವರು ತಿಳಿಸಿದರು.

ಬಿಬಿಎಂಪಿಯು 28 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇವುಗಳಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಹಾಗಾಗಿ ಸಹಜವಾಗಿಯೇ ಈ ಕ್ಷೇತ್ರಕ್ಕೆ ಹೆಚ್ಚು ವಾರ್ಡ್‌ಗಳು ಸೇರ್ಪಡೆಯಾಗಲಿವೆ. ನಂತರ ಹೆಚ್ಚು ವಿಸ್ತೀರ್ಣ ಹೊಂದಿರುವ ಕ್ಷೇತ್ರಗಳೆಂದರೆ ಮಹದೇವಪುರ ಹಾಗೂ ಕೆ.ಆರ್‌.ಪುರ. ಕೇಂದ್ರ ವಾಣಿಜ್ಯ ಪ್ರದೇಶದ ಕ್ಷೇತ್ರಗಳು 10ರಿಂದ 12 ವಾರ್ಡ್‌ಗಳನ್ನು ಹೊಂದಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT