ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಭಯದಿಂದ ಬಿಬಿಎಂಪಿ ಚುನಾವಣೆ ನಡೆಸಲು ಹಿಂದೇಟು: ಪ್ರತಿಪಕ್ಷಗಳ ಆರೋಪ

ಅವಧಿ ಮುಕ್ತಾಯಕ್ಕೆ ಮುನ್ನ ನಡೆಯದ ಬಿಬಿಎಂಪಿ ಚುನಾವಣೆ– ಕೌನ್ಸಿಲ್ ಸಭೆಯಲ್ಲಿ ಪ್ರತಿಪಕ್ಷ ಪ್ರತಿಭಟನೆ
Last Updated 8 ಸೆಪ್ಟೆಂಬರ್ 2020, 18:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ಚುನಾಯಿತ ಸದಸ್ಯರ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸದ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ವಿರೋಧ ಪಕ್ಷಗಳು ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ನಿಲುವನ್ನು ಖಂಡಿಸಿ ಮೇಯರ್ ಪೀಠದ ಎದುರು ಪ್ರತಿಭಟನೆ ನಡೆಸಿದರು.

ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರವಿದ್ದಾಗಲೂ ಮೂರು ವರ್ಷ ಚುನಾವಣೆ ನಡೆದಿರಲಿಲ್ಲ. ಸರ್ಕಾರ ಕೋವಿಡ್‌ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಿಸಿಲ್ಲ. ಬಿಬಿಎಂಪಿಯಲ್ಲೂ ಹಿಂದಿನ ನಾಲ್ಕು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಬಳಸಿದ್ದು ಬಿಟ್ಟರೆ, ಈಗಿನ ಮೇಯರ್‌ ಅವಧಿಯ ಒಂದು ಪೈಸೆ ಅನುದಾನವೂ ವೆಚ್ಚವಾಗಿಲ್ಲ. ಜನರಿಗೆ ನಿಮ್ಮ ಆಡಳಿತದ ಬಗ್ಗೆ ಆಕ್ರೋಶವಿದೆ. ಸೋಲಿನ ಭಯದಿಂದಾಗಿಯೇ ಚುನಾವಣೆ ನಡೆಸುತ್ತಿಲ್ಲ’ ಎಂದು ಆರೋಪಿಸಿದರು.

‘ವಾರ್ಡ್‌ಗಳ ಮರುವಿಂಗಡಣೆಯಾಗಿ ಎರಡೂವರೆ ತಿಂಗಳುಗಳು ಕಳೆದಿಲ್ಲ. ಅಷ್ಟರಲ್ಲಿ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ವಾರ್ಡ್‌ ಸಂಖ್ಯೆಗಳನ್ನು ಮತ್ತೆ 225ಕ್ಕೆ ಹೆಚ್ಚಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಚುನಾವಣೆ ನಡೆಸಲು ನಿಮಗೆ ತಾಕತ್ತಿಲ್ಲ’ ಎಂದು ಟೀಕಿಸಿದರು.

‘ಚುನಾವಣೆ ನಡೆಸುವುದಿಲ್ಲ ಎಂದು ಸರ್ಕಾರ ಯಾವತ್ತು ಹೇಳಿಲ್ಲ’ ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ಸಮರ್ಥಿಸಿಕೊಂಡರು.

‘ಶೀಘ್ರವೇ ಚುನಾವಣೆ ನಡೆಸುವ ಕುರಿತು ಕಂದಾಯ ಸಚಿವ ಅಶೋಕ ನೀಡಿರುವ ಹೇಳಿಕೆ ‘ಪ್ರಜಾವಾಣಿ’ಯ ಮುಖಪುಟದಲ್ಲಿ ಇಂದು ಪ್ರಕಟವಾಗಿದೆ. ಚುನಾವಣೆಯನ್ನೂ ನಡೆಸುತ್ತೇವೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆ ತಾಕತ್ತು ನಮಗಿದೆ’ ಎಂದು ಆಡಳಿತ ಪಕ್ಷದ ಪದ್ಮನಾಭ ರೆಡ್ಡಿ ಹೇಳಿದರು. ಇದಕ್ಕೆ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌, ಸದಸ್ಯರಾದ ಬಿ.ಎಸ್‌.ಸತ್ಯನಾರಾಯಣ, ಉಮೇಶ್‌ ಶೆಟ್ಟಿ ಮತ್ತಿತರರು ದನಿಗೂಡಿಸಿದರು.

‘ಕೋವಿಡ್‌ನಿಂದಾಗಿ ಚುನಾವಣೆ ಮುಂದೂಡಲಾಗದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಕೋವಿಡ್‌ ಸಂದರ್ಭದಲ್ಲಿ ಚುನಾವಣೆ ನಡೆಸುವುದಕ್ಕೆ ಕೇಂದ್ರ ಚುನಾವಣಾ ಆಯೋಗವೂ ಮಾರ್ಗಸೂಚಿ ಪ್ರಕಟಿಸಿದೆ. ಕೊರೊನಾ ಹರಡಿದ್ದ ಸಂದರ್ಭದಲ್ಲೇ ಎಸ್ಸೆಸ್ಸೆಲ್ಸಿ ಸೇರಿದಂತೆ ವಿವಿಧ ಪರೀಕ್ಷೆ ನಡೆಸಿರುವ ಸರ್ಕಾರ ಈ ಕಾರಣಕ್ಕೆ ಚುನಾವಣೆ ಮುಂದೂಡಲು ಹೇಗೆ ಸಾಧ್ಯ’ ಎಂದು ವಾಜಿದ್‌ ಪ್ರಶ್ನಿಸಿದರು.

‘ನೀವು ವಿಧಿ ಇಲ್ಲದೇ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ. ಮೀಸಲಾತಿ ಪಟ್ಟಿ ಸಿದ್ಧಪಡಿಸಲೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ಕಾಂಗ್ರೆಸ್‌ನ ಪದ್ಮಾವತಿ, ಮಂಜುನಾಥ ರೆಡ್ಡಿ, ಎಂ.ಶಿವರಾಜು, ಆರ್.ಎಸ್‌.ಸತ್ಯನಾರಾಯಣ ಟೀಕಿಸಿದರು.

‘ನಡೆಯದ ಚುನಾವಣೆ– ಆಯೋಗವೇ ನೇರ ಹೊಣೆ’

‘ಬಿಬಿಎಂಪಿ ಕೌನ್ಸಿಲ್‌ ಅವಧಿ ಮುಗಿಯುವುದಕ್ಕೆ ಮುನ್ನವೇ ಚುನಾವಣೆ ನಡೆಯದಿರುವುದಕ್ಕೆ ರಾಜ್ಯ ಚುನಾವಣಾ ಆಯೋಗವೇ ನೇರ ಹೊಣೆ. ಇದಕ್ಕೆ ಸರ್ಕಾರವನ್ನು ದೂಷಿಸಿ ಪ್ರಯೋಜನವಿಲ್ಲ’ ಎಂದು ಪದ್ಮನಾಭ ರೆಡ್ಡಿ ಆರೋಪ ಮಾಡಿದರು.

‘ಆಯೋಗವು ಸ್ವಾಯತ್ತ ಸಂಸ್ಥೆ. ಸಕಾರಣವಿಲ್ಲದೇ ಚುನಾವಣೆ ಮುಂದೂಡುವಂತಿಲ್ಲ. ಕಿಶನ್‌ ಸಿಂಗ್‌ ತೋಮರ್‌ ಮತ್ತು ಅಹಮದಾಬಾದ್ ನಗರ ಪಾಲಿಕೆ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಇದನ್ನು ಸ್ಪಷ್ಟಪಡಿಸಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಎಂ.ಶಿವರಾಜು, ‘ಚುನಾವಣೆ ನಡೆಸಲು ಕ್ರಮಕೈಗೊಳ್ಳುವಂತೆ 2020ರ ಜನವರಿಯಲ್ಲೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೆ. ವಾರ್ಡ್‌ ಮರುವಿಂಗಡಣೆ ಮಾಡದ ಬಗ್ಗೆ ಹಾಗೂ ಮೀಸಲಾತಿ ಪಟ್ಟಿ ನಿಗದಿಪಡಿಸದ್ದನ್ನು ಪ್ರಶ್ನಿಸಿ ಆಯೋಗವೇ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಬಳಿಕವಷ್ಟೇ ಸರ್ಕಾರ ವಾರ್ಡ್ ಮರುವಿಂಗಡಣೆ ಮಾಡಿದೆ. ಈ ಬಾರಿಯೂ ನ್ಯಾಯಾಲಯ ಮಧ್ಯ ಪ್ರವೇಶ ಮಾಡದೇ ಚುನಾವಣೆ ನಡೆಯದು’ ಎಂದರು.

‘ಮೀಸಲಾತಿ ಪಟ್ಟಿ ಸಿದ್ಧವಾಗಿಲ್ಲ, ವಾರ್ಡ್‌ ಮರುವಿಂಗಡಣೆ ಆಗಿಲ್ಲ ಎಂದು ಆಯೋಗವು ನೆಪ ಹೇಳುವಂತಿಲ್ಲ. ಸಿ.ಕೆ.ರಾಮಮೂರ್ತಿ ಮತ್ತು ಚುನಾವಣಾ ಆಯೊಗದ ನಡುವಿನ ಪ್ರಕರಣದಲ್ಲಿ ಹೈಕೋರ್ಟ್‌ ಇದನ್ನು ಸ್ಪಷ್ಟವಾಗಿ ಹೇಳಿದೆ’ ಎಂದು ಪದ್ಮನಾಭ ರೆಡ್ಡಿ ಹೇಳಿದರು.

‘ಅವಧಿ ಮುಂದುವರಿಸಲು ಒತ್ತಾಯ’

’ಕೋವಿಡ್ ಇರುವುದರಿಂದ ಚುನಾವಣೆ ನಡೆಯುವವರೆಗೆ ಈಗಿರುವ ಕೌನ್ಸಿಲ್‌ ಸದಸ್ಯರನ್ನೇ ಮುಂದುವರಿಸಬೇಕು. ಇಲ್ಲದಿದ್ದರೆ ಕೋವಿಡ್‌ ನಿಯಂತ್ರಣ ಕಾರ್ಯ ಹಳಿತಪ್ಪಲಿದೆ. ಪಶ್ಚಿಮ ಬಂಗಾಲ ಸರ್ಕಾರ ಇದೇ ಕ್ರಮವನ್ನು ಅನುಸರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಗೆ ಪಾಲಿಕೆ ಸದಸ್ಯರ ನಿಯೋಗ ಕೊಂಡೊಯ್ದು ಈ ಬಗ್ಗೆ ಮನವಿ ಮಾಡೋಣ’ ಎಂದು ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು. ಆದರೆ, ಈ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಂಡಿಲ್ಲ.

‘ಚುನಾವಣೆಗೆ ಶಾಸಕರ ಅಡ್ಡಗಾಲು’

‘ಪಾಲಿಕೆ ಸದಸ್ಯರು ಇಲ್ಲದಿದ್ದರೆ ಸಂಪೂರ್ಣ ಅಧಿಕಾರವನ್ನು ಅವರೇ ಅನುಭವಿಸಬಹುದು ಎಂಬ ಕಾರಣಕ್ಕೆ ಕೆಲವು ಶಾಸಕರು ಚುನಾವಣೆ ನಡೆಸುವುದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ವಾಜಿದ್‌ ಆರೋಪ ಮಾಡಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ನ್ಯಾಯಾಲಯದ ಮಧ್ಯಪ್ರವೇಶ ಇಲ್ಲದೇ ಯಾವತ್ತೂ ಅವಧಿಗೆ ಮುನ್ನ ನಡೆಯುವುದಿಲ್ಲ. ಆದರೆ, ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಳು ಯಾವತ್ತಾದರೂ ಮುಂದೂಡಿಕೆ ಆಗಿವೆಯೇ’ ಎಂದು ಕಾಂಗ್ರೆಸ್‌ನ ಶಿವರಾಜು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವೇಲು ನಾಯ್ಕರ್, ‘ಸದಾ ಪರಸ್ಪರ ಕಚ್ಚಾಡುವ 28 ಶಾಸಕರು ಚುನಾವಣೆ ಮುಂದೂಡುವ ವಿಚಾರದಲ್ಲಿ ಒಂದಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT