ಬುಧವಾರ, ಏಪ್ರಿಲ್ 14, 2021
31 °C
ಹೊರೆ ಇಳಿಕೆಗೆ ಸರ್ಕಾರ ಕ್ರಮ

ಜನರಿಂದ ಭಾರಿ ವಿರೋಧ: ಅಭಿವೃದ್ಧಿ ಮಂಜೂರಾತಿ– ಸರ್ಜಾರ್ಜ್‌ ರದ್ದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿವೇಶನ ಅಥವಾ ಕಟ್ಟಡ ಅಭಿವೃದ್ಧಿಗೆ ಪರವಾನಗಿ ನೀಡುವ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯು ಸರ್ಜಾರ್ಜ್‌ ವಿಧಿಸುವ ಪ್ರಸ್ತಾಪವನ್ನು ಸರ್ಕಾರ ಕೈಬಿಡಲು ಮುಂದಾಗಿದೆ.

ಕಟ್ಟಡ, ನಿವೇಶನ ಅಥವಾ ಭೂಮಿಯ ಅಭಿವೃದ್ಧಿ ವೇಳೆ ಮೇಲ್ತೆರಿಗೆ (ಸರ್ಚಾರ್ಜ್‌ ) ಅಥವಾ ಅಭಿವೃದ್ಧಿ ಶುಲ್ಕ ವಿಧಿಸುವುದಕ್ಕೆ ಅವಕಾಶ ಕಲ್ಪಿಸಲು ‘2019’ರ ಕರ್ನಾಟಕ ಯೋಜನಾ ಪ್ರಾಧಿಕಾರ ನಿಯಮಗಳಿಗೆ 37 ಸಿ ನಿಯಮವನ್ನು ಸೇರ್ಪಡೆಗೊಳಿಸಲಾಗಿತ್ತು. ಇದರನ್ವಯ ನಿವೇಶನದ ಅಥವಾ ಜಮೀನಿನ ಮಾರುಕಟ್ಟೆ ಮೌಲ್ಯದ ಮೇಲೆ ಶೇ 0. 2ರಷ್ಟು ಮೇಲ್ತೆರಿಗೆ (ಸರ್ಚಾರ್ಜ್‌) ಕೂಡಾ ಸಂಗ್ರಹಿಸಲು 2020ರಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ಕುರಿತು ಸರ್ಕಾರ 2020ರ ಫೆ.25ರಂದು ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನು ಪ್ರಕಟಿಸಿತ್ತು. ಹಿಂದಿನ 1965ರ ಕರ್ನಾಟಕ ಯೋಜನಾ ಪ್ರಾಧಿಕಾರಗಳ ಅಧಿಸೂಚನೆಯನ್ನು ಮಾರ್ಪಡುಗೊಳಿಸುವ ಸಲುವಾಗಿ  ಸರ್ಕಾರ 2021ರ ಮಾ. 10ರಂದು ಕರಡು ಅಧಿಸೂಚನೆ ಪ್ರಕಟಿಸಿದ್ದು, ಸರ್ಜಾರ್ಜ್‌ ವಿಧಿಸುವ ಪ್ರಸ್ತಾಪ ಕೈಬಿಡುವುದಾಗಿ ಅದರಲ್ಲಿ ಹೇಳಲಾಗಿದೆ. ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಕುರಿತ ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕವಷ್ಟೇ ಇದು ಜಾರಿಯಾಗಲಿದೆ.

ನಿವೇಶನ ಅಥವಾ ಕಟ್ಟಡ ಅಭಿವೃದ್ಧಿಗೆ ಮಂಜೂರಾತಿ ನೀಡುವಾಗ ವಿಧಿಸುವ ಶುಲ್ಕವನ್ನು ಕಡಿತಗೊಳಿಸುವ ಪ್ರಸ್ತಾಪವೂ ಕರಡು ಅಧಿಸೂಚನೆಯಲ್ಲಿದೆ. ಪಾಲಿಕೆಯ ನಗರ ಯೋಜನೆ ವಿಭಾಗವು ಕಟ್ಟಡ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣಪತ್ರ (ಸಿ.ಸಿ), ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡುವಾಗ ಸರ್ಕಾರದ 2015ರ ಸೆ. 4ರ ಸುತ್ತೋಲೆಯನ್ವಯ ಶುಲ್ಕ ಪಡೆಯುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಸೂಚನೆ ಪ್ರಕಾರ 1961ರ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪರಿಚ್ಛೇದ 18 ಮತ್ತು 18 ಎ ಅನ್ವಯ ರೂಪಿಸಿರುವ ‘ಕರ್ನಾಟಕ ಯೋಜನಾ ಪ್ರಾಧಿಕಾರ ನಿಮಯ 2019’ಕ್ಕೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು.

ನಿಯಮ 37–ಎ (1) (ಎ) ಮತ್ತು (ಬಿ) ತಿದ್ದುಪಡಿ ಪ್ರಕಾರ ನಿವೇಶನಕ್ಕೆ ಮತ್ತು ಕಟ್ಟಡಕ್ಕೆ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಅಭಿವೃದ್ಧಿ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಶುಲ್ಕವನ್ನು ಮಾರುಕಟ್ಟೆ ಮೌಲ್ಯದ ಜೊತೆ ಜೋಡಿಸಲಾಗಿತ್ತು. ನಗರದಲ್ಲಿ ಜಮೀನಿಗೆ ಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಡೆಗಳಲ್ಲಿ ಕ‌ಟ್ಟಡ ನಿರ್ಮಿಸುವವರಿಗೆ ಮತ್ತು ಅಭಿವೃದ್ಧಿಪಡಿಸುವವರಿಗೆ ಈ ತೆರಿಗೆ ಭಾರವಾಗಿ ಪರಿಣಮಿಸಿತ್ತು. 20X30 ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸುವುದಕ್ಕೂ ಮೂರು– ನಾಲ್ಕು ಲಕ್ಷ ರೂಪಾಯಿಗೂ ಅಧಿಕ ಶುಲ್ಕ ಪಾವತಿಸಬೇಕಾದ ಪ್ರಮೇಯ ಸೃಷ್ಟಿಯಾಗಿತ್ತು. ಇದು ತೀರಾ ದುಬಾರಿಯಾಯಿತು. ಶುಲ್ಕ ಇಳಿಸಬೇಕು ಎಂದು ಎಂದು ಅನೇಕರು ಒತ್ತಾಯಿಸಿದ್ದರು.

ಕಟ್ಟಡ ಅಭಿವೃದ್ಧಿಗೆ ಮುಂದಾಗಿದ್ದವರು ಸರ್ಜಾರ್ಜ್‌ ವಿಧಿಸುವಿಕೆ ಹಾಗೂ ಶುಲ್ಕ ಹೆಚ್ಚಳದಿಂದ ಕಂಗಾಲಾಗಿದ್ದರು. ದುಬಾರಿ ಶುಲ್ಕ ಭರಿಸಲಾಗದೇ ಅನೇಕರು ಕಟ್ಟಡ ನಿರ್ಮಿಸುವ ಯೋಜನೆಯನ್ನೇ ಮುಂದೂಡಿದ್ದರು. ಇದರಿಂದ ಬಿಬಿಎಂಪಿ ವರಮಾನಕ್ಕೂ ಏಟು ಬಿದ್ದಿತ್ತು. 

ನಗರದ ಬಿಜೆಪಿ ಶಾಸಕರ ಜೊತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಲ ತಿಂಗಳ ಹಿಂದೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಶುಲ್ಕ ಹೆಚ್ಚಳದ ಬಗ್ಗೆ ಶಾಸಕರು ದೂರಿದ್ದರು. ಕೋವಿಡ್‌ ಸಂಕಷ್ಟದ ನಡುವೆ ಜನರಿಗೆ ಶುಲ್ಕದ ಹೊರೆಯನ್ನು ಹೆಚ್ಚಿಸುವುದು ತರವಲ್ಲ. ಅಭಿವೃದ್ಧಿಗೆ ಮಂಜೂರಾತಿ ನೀಡುವಾಗ ಶುಲ್ಕ ಹೆಚ್ಚಿಸುವ ಪ್ರಸ್ತಾಪ ಕೈಬಿಡದಿದ್ದರೆ ಅಭಿವೃದ್ಧಿ ಕಾರ್ಯಗಳ ಮೇಲೂ ದುಷ್ಪರಿಣಾಮ ಉಂಟಾಗಲಿದೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹೊಡೆತ ಬೀಳಲಿದೆ ಎಂದೂ ಅನೇಕ ಶಾಸಕರು ಆತಂಕ ತೋಡಿಕೊಂಡಿದ್ದರು. ಬಳಿಕ, ಮುಖ್ಯಮಂತ್ರಿಯವರು ಶುಲ್ಕ ಇಳಿಸುವ ಭರವಸೆ ನೀಡಿದ್ದರು.

ಕರಡು ಅಧಿಸೂಚನೆ ಯಥಾಪ್ರಕಾರ ಜಾರಿಯಾದರೆ ಅಭಿವೃದ್ಧಿಗೆ ಮಂಜೂರಾತಿ ಪಡೆಯುವ ವೇಳೆ ಬಿಬಿಎಂಪಿಗೆ ಪಾವತಿಸುವ ಶುಲ್ಕದ ಮೊತ್ತ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಸರ್ಜಾರ್ಜ್‌ ಕೈಬಿಟ್ಟಿರುವುದರಿಂದ ಹಾಗೂ ಶುಲ್ಕ ಇಳಿಕೆ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವುದರಿಂದ ನಗರದಲ್ಲಿ ಮನೆ ನಿರ್ಮಿಸಲು ಮುಂದಾಗಿರುವವರು ನಿಟ್ಟುಸಿರು ಬಿಡುವಂತಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು