ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ–ಗಣೇಶ್ ಹಬ್ಬ: ದರ ಏರಿಕೆ ನಡುವೆಯೂ ಖರೀದಿ ಭರಾಟೆ

Last Updated 8 ಸೆಪ್ಟೆಂಬರ್ 2021, 16:18 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಹೂವು ಮತ್ತು ಹಣ್ಣುಗಳ ದರಗಳು ಗಗನಕ್ಕೇರಿವೆ. ಆದರೂ, ಹಬ್ಬದ ಮುನ್ನ ದಿನ ಮಾರುಕಟ್ಟೆಗಳಲ್ಲಿ ಖರೀದಿಗೆಗ್ರಾಹಕರು ಮುಗಿಬಿದ್ದರು.

ವಾರದಿಂದ ಈಚೆಗೆ ಮಾರುಕಟ್ಟೆಗಳಲ್ಲಿ ಹಬ್ಬದ ಪರಿಕರಗಳ ಮಾರಾಟ ಗರಿಗೆದರಿತ್ತು. ನಗರದ ಹಲವೆಡೆ ತಾತ್ಕಾಲಿಕ ಕಿರು ಮಾರುಕಟ್ಟೆಗಳು ತಲೆ ಎತ್ತಿವೆ.

ಹೂವು ಹಣ್ಣಿನ ಚಿಲ್ಲರೆ ಮತ್ತು ಸಗಟು ದರದಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ಕೆ.ಜಿ. ದಾಳಿಂಬೆ ಹಣ್ಣಿಗೆ ₹120ರಷ್ಟಿದ್ದ ದರ, ₹140ರಿಂದ ₹150 ತನಕ ಹೆಚ್ಚಳವಾಗಿದೆ. ಕಳೆದ ವಾರ ₹150ರಿಂದ ₹ 200ರ ಆಸುಪಾಸಿನಲ್ಲಿದ್ದ ಇದ್ದ ಸೇಬು ಹಣ್ಣಿನ ದರ ಕೆ.ಜಿಗೆ ₹200ರಿಂದ ₹300ರ ತನಕ ಹೆಚ್ಚಳವಾಗಿದೆ. ಕಿತ್ತಳೆ ಹಣ್ಣಿನ ದರವೂ ₹100ರ ಗಡಿ ದಾಟಿದೆ. ಮೂಸಂಬಿ ಹಣ್ಣಿನ ದರ ಮಾತ್ರ ಕೆ.ಜಿ.ಗೆ ₹30ರಲ್ಲಿ ಉಳಿದಿದೆ. ಇನ್ನು ಎರಡು ಮೂರು ದಿನಗಳಲ್ಲಿ ಮೂಸಂಬಿ ಹಣ್ಣಿನ ದರ ಕೆ.ಜಿ.ಗೆ ₹15ರಿಂದ ₹20ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

‘ಹೂವಿಗೆ ಹೆಚ್ಚಿನ ಬೇಡಿಕೆ ಇಲ್ಲದಿದ್ದರೂ, ಕಳೆದ ಕೆಲ ದಿನಗಳಿಂದ ದರಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಕನಕಾಂಬರ ಮತ್ತು ಮಲ್ಲಿಗೆ ಹೂವುಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಈ ಹೂವುಗಳನ್ನು ನಾವು ಮಾರಾಟಕ್ಕೇ ಇಡುತ್ತಿಲ್ಲ’ ಎಂದು ಚಿಲ್ಲರೆ ವ್ಯಾಪಾರಿಗಳು ತಿಳಿಸಿದರು.

ಸಣ್ಣ ಗುಲಾಬಿ ಹೂವಿಗೆ ದರ ಕಳೆದ ವಾರ ₹100 ಇದ್ದದ್ದು, ₹120ಕ್ಕೆ ಏರಿಕೆಯಾಗಿದೆ. ಒಂದು ಮಾರು ಸೇವಂತಿಗೆ ಹೂವಿನ ದರ ಕೂಡ ₹80ರಿಂದ 100ಕ್ಕೆ ಜಿಗಿದಿದೆ. ಮೊಳ ಮಲ್ಲಿಗೆ ಹೂವಿಗೆ ಸಗಟು ಮಾರುಕಟ್ಟೆಯಲ್ಲೇ ₹20 ಇದೆ. ತರಕಾರಿಗಳ ಬೆಲೆಗಳು ಹೆಚ್ಚು ಕಡಿಮೆ ಅದೇ ರೀತಿ ಇದೆ ಎಂದು ಕಲಾಸಿಪಾಳ್ಯದ ಸಗಟು ವ್ಯಾಪಾರಿಗಳು ಹೇಳುತ್ತಾರೆ.

ಹಬ್ಬದ ಸಂಭ್ರಮದಲ್ಲಿದ್ದ ಜನ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಮಾರುಕಟ್ಟೆಯಲ್ಲಿ ಮುಗಿ ಬಿದ್ದಿದ್ದರು.

ಪುಟ್ಟ ಮೂರ್ತಿಗಳಿಗೆ ಬಲು ಬೇಡಿಕೆ

ಹಬ್ಬದ ವೇಳೆ ಪೂಜಿಸಲು ಭಕ್ತರು ಗೌರಿ–ಗಣೇಶ ಮೂರ್ತಿಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ 4 ಅಡಿ ಎತ್ತರ ಮೀರದಂತೆ ಮತ್ತು ಮನೆಯಲ್ಲಿ 2 ಅಡಿ ಎತ್ತರ ಮೀರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮಾತ್ರ ಅವಕಾಶ ಇರುವುದರಿಂದ ಚಿಕ್ಕ–ಚಿಕ್ಕ ಮೂರ್ತಿಗಳನ್ನು ಹುಡುಕಿ ಗ್ರಾಹಕರು ಖರೀದಿಸಿದರು.

ಮಲ್ಲೇಶ್ವರ, ಮಾವಳ್ಳಿ, ಜಯನಗರ, ಬಸವನಗುಡಿ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವೆಡೆ ಗಣೇಶ ಮೂರ್ತಿಗಳ ಮಾರಾಟ ಜೋರಾಗಿ ನಡೆದಿತ್ತು. ಕೋವಿಡ್‌ ನಿರ್ಬಂಧಗಳಿದ್ದರೂ, ಹಬ್ಬದ ಸಂಭ್ರಮಕ್ಕೆ ಯಾವುದೇ ಅಡೆ–ತಡೆ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.

ಪರಿಸರ ಸ್ನೇಹಿ ಮತ್ತು ಔಷಧಿಯ ಗುಣ ಹೊಂದಿರುವ ಅರಿಸಿನದಿಂದ ಗಣೇಶ ಮೂರ್ತಿಗಳನ್ನು ಮಾಡಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಭಿಯಾನ ನಡೆಸಿದ್ದರಿಂದ ಇಂತಹ ಮೂರ್ತಿಗಳ ತಯಾರಿಕೆ ಮತ್ತು ಬಳಕೆಯೂ ಹೆಚ್ಚಾಗಿದೆ.

‘ಹಬ್ಬಕ್ಕೆ ಕೆಲವೇ ದಿನಗಳು ಮುನ್ನ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿದ್ದರಿಂದ, ಸರ್ಕಾರ ದಿನಕ್ಕೊಂದೊಂದು ರೀತಿ ಆದೇಶ ಹೊರಡಿಸಿದ್ದರಿಂದ ವಿಗ್ರಹಗಳ ಮಾರಾಟಕ್ಕೆ ತೊಂದರೆಯಾಯಿತು’ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರು.

‘ಯಾವುದೇ ನಿಯಮ ಮಾಡುವುದಾದರೂ, ಸಾಕಷ್ಟು ಮುನ್ನವೇ ತೀರ್ಮಾನ ಮಾಡಬೇಕು. ಗಣೇಶ ಮೂರ್ತಿಗಳು ಒಣಗಲು ಮೂರು ತಿಂಗಳು ಬೇಕಾಗುತ್ತದೆ. ಕೊನೆಯ ಗಳಿಗೆಯಲ್ಲಿ ತೀರ್ಮಾನ ಮಾಡಿದರೆ ಅನನುಕೂಲವಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT