‘ಜಿಬಿಎ ರಚನೆಯ ನಂತರ ಮುಂದೇನಾಗಬೇಕು’– ಈ ಪ್ರಶ್ನೆಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.
ಬೆಂಗಳೂರು ನಗರದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಕಸ ವಿಲೇವಾರಿ, ಸಂಚಾರ ದಟ್ಟಣೆ ನಿವಾರಣೆಗೆ, ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಇವುಗಳ ದುರಸ್ತಿಗೆ ಯಾರೂ ಸ್ಪಂದಿಸುತ್ತಿಲ್ಲ. ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ನಗರದ ಸ್ವಚ್ಛತೆಗೆ ಆದ್ಯತೆ ನೀಡಿದ ನಂತರ ಜಿಬಿಎ ಅನುಷ್ಠಾನಗೊಳಿಸಿದರೆ, ಇದು ಯಶಸ್ವಿ ಆಗುತ್ತದೆ. ಇಲ್ಲದಿದ್ದರೆ ಮೊದಲಿನಂತಯೇ ಸಮಸ್ಯೆಗಳ ಸರಮಾಲೆಯಲ್ಲಿ ಜೀವನ ನಡೆಸಬೇಕಾಗುತ್ತದೆ.– ಕೆಂಪರಾಜು ಸಿ.ವಿ., ಜ್ಞಾನಭಾರತಿ
ಬಿಬಿಎಂಪಿಯನ್ನು ಜಿಬಿಎ ಮಾಡಿದರೆ ಏನೂ ಬದಲಾವಣೆ ಆಗುವುದಿಲ್ಲ. ನಾಗರಿಕರಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಸ್ಪಷ್ಟ ನೀಲನಕ್ಷೆ ರೂಪಿಸಬೇಕು. 2008ರಲ್ಲಿ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಳ್ಳಲಾಯಿತು. ಆದರೆ, ಈಗಲೂ ಈ ಹಳ್ಳಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಇಲ್ಲಿ ರಸ್ತೆಗಳಿಲ್ಲ, ಪಾದಚಾರಿ ಮಾರ್ಗವಿಲ್ಲ, ಉದ್ಯಾನಗಳಿಲ್ಲ. ಮಹಿಳೆಯರ ಸುರಕ್ಷತೆ ಇಲ್ಲವೇ ಇಲ್ಲ. ಆದ್ದರಿಂದ ಜಿಬಿಎ ಮಾಡುವ ಮುನ್ನ ಮೂಲಸೌಕರ್ಯದ ಅಭಿವೃದ್ಧಿಗೆ ಆದ್ಯತೆ ನೀಡಬೇಕು.– ಶಿವರಾಮು ಕೆ.ಬಿ., ಮೇದರಹಳ್ಳಿ, ಚಿಕ್ಕಬಾಣಾವರ
ಜಿಬಿಎ ಹೆಸರಿನಲ್ಲಾದರೂ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ ಆಗಲಿ. ಬಿಬಿಎಂಪಿ ಹೆಸರು ಜಿಬಿಎ ಆಗಿ ಬದಲಾದರೆ ಸಾಲದು. ಶಿಕ್ಷಣ, ಆರೋಗ್ಯ, ವಸತಿ, ಬಡಾವಣೆ ನಿರ್ಮಾಣ, ಸಮರ್ಪಕ ಕಸ ವಿಲೇವಾರಿ ಸೇರಿದಂತೆ ನಾಗರಿಕರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಜಿಬಿಎ ಅನ್ನು ಹೇಗೆ ಅನುಷ್ಠಾನ ಮಾಡಬೇಕು ಎಂಬ ಸ್ಪಷ್ಟತೆ ಇರಬೇಕು.– ಸಯ್ಯದ್ ಯೇಜಸ್ ಪಾಷ, ಬಸವೇಶ್ವರನಗರ
ಕಾಲಕ್ಕೆ ತಕ್ಕಂತೆ ಬದಲಾವಣೆ, ಜಗದ ನಿಯಮ. ಹಾಗೆಯೇ, ಬಿಬಿಎಂಪಿ ಬದಲಿಗೆ ಜಿಬಿಎ ಅನುಷ್ಠಾನ ಸ್ವಾಗತಾರ್ಹ. ಜಿಬಿಎ ಅನುಷ್ಠಾನದ ನಂತರ ಇದರ ವ್ಯಾಪ್ತಿಯ ಎಲ್ಲರೂ ಕಾವೇರಿ ನೀರನ್ನೇ ಅವಲಂಬಿಸಬಾರದು. ಆಯಾ ಪಾಲಿಕೆಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ವಿದ್ಯುತ್ ಚಾಲಿತ ‘ಟ್ರಾಮ್‌ವೇ’ ಸೌಲಭ್ಯ ಒದಗಿಸಬೇಕು. ನಗರದಲ್ಲಿ ಹಸಿರೀಕರಣ ಹೆಚ್ಚಿಸಲು ಉದ್ಯಾನಗಳನ್ನು ನಿರ್ಮಿಸಬೇಕು.– ವಿಜಯ ಮುತ್ತತ್ತಿ, ಯಲಹಂಕ–ಉಪನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.