ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ವಿಷ: ಎಚ್‌ಐವಿ ಸೋಂಕಿತರಿಗೆ ಕುಡಿಯಲು ನೀರಿಲ್ಲ

ಕ್ವಾರಿಗೆ ಸೇರಿದ ತ್ಯಾಜ್ಯ: ಕೆರೆಗಳ ನೀರು ಕಲುಷಿತ,
Published 25 ಏಪ್ರಿಲ್ 2023, 4:14 IST
Last Updated 25 ಏಪ್ರಿಲ್ 2023, 4:14 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಲು ಕ್ವಾರಿಗೆ ಸೇರಿದ ವೈದ್ಯಕೀಯ ತ್ಯಾಜ್ಯ ಮತ್ತು ಕಸ. ಕಲುಷಿತಗೊಂಡ ಸುತ್ತಮುತ್ತಲ ಕೆರೆಗಳು, ವಿಷವಾದ ಕೊಳವೆ ಬಾವಿ ನೀರು. ಆರೈಕೆ ಕೇಂದ್ರದಲ್ಲಿನ ನೂರಾರು ಎಚ್‌ಐವಿ ಸೋಂಕಿತರಿಗೆ ಕುಡಿಯಲು ನೀರಿಲ್ಲ...

ನಗರದ ಹೊರ ವಲಯದಲ್ಲಿನ ಬೈರತಿ ಬಂಡೆ ಸುತ್ತಮುತ್ತಲ ಪ್ರದೇಶದ ಸ್ಥಿತಿ ಇದು. ಬೈರತಿ ಬಂಡೆಯಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆ ನಿಂತು ಹಲವು ವರ್ಷಗಳೇ ಕಳೆದಿವೆ. ನೂರಾರು ಅಡಿ ಆಳದಿಂದ ಕಲ್ಲುಗಳನ್ನು ಒಡೆದು ಮೇಲೆತ್ತಿದ ಬಳಿಕ ಕ್ವಾರಿಯಲ್ಲಿ ಮಳೆ ನೀರಿನ ಜತೆಗೆ ಜಲದ ಕಣ್ಣು ಕೂಡ ತೆರೆದುಕೊಂಡು ಕ್ವಾರಿ ಕೆರೆಯ ಸ್ವರೂಪ ಪಡೆದುಕೊಂಡಿತ್ತು.

ಈ ಕ್ವಾರಿಯನ್ನು ಮುಚ್ಚಲು ಮುಂದಾದ ಕೆಲವರು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಿಲ್ಲ. ವೈದ್ಯಕೀಯ ತ್ಯಾಜ್ಯ, ಕೋಳಿ ಅಂಗಡಿ ತ್ಯಾಜ್ಯ, ಕಸ ಸೇರಿ ಎಲ್ಲಾ ರೀತಿಯ ಬೇಡದ ವಸ್ತುಗಳನ್ನು ಟಿಪ್ಪರ್‌ ಮತ್ತು ಟ್ಯಾಕ್ಟರ್‌ಗಳಲ್ಲಿ ತಂದು ಸುರಿದಿದ್ದಾರೆ. ಆರು ತಿಂಗಳಿಂದ ಕ್ವಾರಿ ತ್ಯಾಜ್ಯದಿಂದ ತುಂಬಿದ್ದು, ಅಡಿಯಲ್ಲಿದ್ದ ನೀರು ಕೊಳೆತು ಪಕ್ಕದಲ್ಲೇ ಇರುವ ಕೆರೆಗೆ ಹರಿದಿದೆ. ಕೆರೆ ಮತ್ತು ಸುತ್ತಮುತ್ತಲ ಬಡಾವಣೆಯ ಇಡೀ ವಾತಾವರಣ ಗಬ್ಬು ನಾರುತ್ತಿದ್ದು, ಕಿಲೋ ಮೀಟರ್‌ ದೂರಕ್ಕೂ ದುರ್ವಾಸನೆ ಬೀರುತ್ತಿದೆ.

ಸುತ್ತಮುತ್ತಲ ಅಂತರ್ಜಲಕ್ಕೂ ತ್ಯಾಜ್ಯ ನೀರು ಸೇರಿದ್ದು, ಕೊಳವೆ ಬಾವಿಗಳಲ್ಲೂ ಕಲುಷಿತ ನೀರು ಬರುತ್ತಿದೆ. ಕುಡಿಯಲು ಮಾತ್ರವಲ್ಲ ಶೌಚಾಲಯಕ್ಕೂ ಬಳಸಲು ಸಾಧ್ಯವಾಗದಷ್ಟು ನೀರು ಹಾಳಾಗಿದೆ.

ಇಡೀ ಕ್ವಾರಿ ಈಗ ಅಕ್ಷರಶಃ ತ್ಯಾಜ್ಯ ಗುಂಡಿಯಾಗಿದ್ದು, ಇದರ ಪಕ್ಕದಲ್ಲೇ ‘ಅಕ್ಸಪ್ಟ್‌ ಸೊಸೈಟಿ’ ನಡೆಸುತ್ತಿರುವ ಆರೈಕೆ ಕೇಂದ್ರದಲ್ಲಿನ ಎಚ್‌ಐವಿ ಸೋಂಕಿತರು ಈಗ ತೊಂದರೆಗೆ ಸಿಲುಕಿದ್ದಾರೆ. ಮೊದಲೇ ಕಾಯಿಲೆಯಿಂದ ಬಳಲುತ್ತಿರುವ ಜನ ದುರ್ವಾಸನೆಯಿಂದ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕುಡಿಯಲು ಮಾತ್ರವಲ್ಲ ಬಳಕೆಗೂ ನೀರಿಲ್ಲದೆ ಇಡೀ ಕೇಂದ್ರ ಕಷ್ಟಕ್ಕೆ ಸಿಲುಕಿದೆ. ಸೋಂಕಿತರಿಗೆ ಕುಡಿಯಲು ಮತ್ತು ನಿತ್ಯ ಬಳಕೆಗೆ ನೀರು ಪೂರೈಸಲು ಅಕ್ಸಪ್ಟ್‌ ಸೊಸೈಟಿಯ ಆಡಳಿತ ಮಂಡಳಿ ಪರದಾಡುತ್ತಿದೆ.

ಕ್ವಾರಿಯಿಂದ ಹರಿದು ಬರುತ್ತಿರುವ ಕಲುಷಿತ ನೀರು
ಕ್ವಾರಿಯಿಂದ ಹರಿದು ಬರುತ್ತಿರುವ ಕಲುಷಿತ ನೀರು
ಕೊಳವೆ ಬಾವಿ ನೀರು ಬಳಕೆಗೆ ಯೋಗ್ಯವಿಲ್ಲ
ಕೊಳವೆ ಬಾವಿಗಳಲ್ಲಿ ಬರುತ್ತಿರುವ ನೀರನ್ನು ‘ಅಕ್ಸಪ್ಟ್‌ ಸೊಸೈಟಿ’  ಆಡಳಿತ ಮಂಡಳಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದೆ. ವರದಿ ಪ್ರಕಾರ ನೀರಿನಲ್ಲಿರುವ ಗಡುಸು ಪ್ರಮಾಣ 515.0 ರಷ್ಟಿದೆ. ಆದರೆ ಸಾಮಾನ್ಯವಾಗಿ ನೀರಿನ ಗಡಸು ಪ್ರಮಾಣ ಹೆಚ್ಚೆಂದರೆ 200ರಷ್ಟಿರಬೇಕು. ಎಚ್‌ಪಿ ವ್ಯಾಲ್ಯು 6.91 ಕ್ಯಾಲ್ಸಿಯಮ್ ಪ್ರಮಾಣ 141.6ರಷ್ಟಿದೆ. ಕಲ್ಮಶದ ಪ್ರಮಾಣ 6.7 ಸಿಒಡಿ(ಕೆಮಿಕಲ್ ಆ್ಯಕ್ಸಿಜನ್ ಡಿಮ್ಯಾಂಡ್‌) ಪ್ರಮಾಣ 8.0 ಮಾಲಿನ್ಯ ಪ್ರಮಾಣ 7ರಷ್ಟಿದೆ. ಕುಡಿಯುವ ಅಥವಾ ಇತರ ಬಳಕೆಯ ನೀರಿನಲ್ಲಿ ಈ ಅಂಶಗಳು ಇರಲೇಬಾರದು. ‘ಆದ್ದರಿಂದ ಈ ನೀರು ಕುಡಿಯಲು ಮಾತ್ರವಲ್ಲ ಬಟ್ಟೆ ತೊಳೆಯಲು ಅಥವಾ ಇನ್ನಾವುದಕ್ಕೂ ಬಳಸಲು ಯೋಗ್ಯವಾಗಿಲ್ಲ ಎಂದು ಪ್ರಯೋಗಾಲಯ ತಿಳಿಸಿದೆ’ ಎಂದು ಅಕ್ಸಪ್ಟ್ ಸೊಸೈಟಿ ಅಧ್ಯಕ್ಷ ರಾಜು ಮ್ಯಾಥ್ಯು ಹೇಳಿದರು.
ದೊಡ್ಡಗುಬ್ಬಿ ಕೆರೆ ಸೇರುತ್ತಿರುವ ವಿಷಕಾರಿ ನೀರು
ಕ್ವಾರಿ ಮತ್ತು ಅದರ ಪಕ್ಕದ ಚಿಕ್ಕ ಕೆರೆಯಿಂದ ಹರಿಯುತ್ತಿರುವ ದುರ್ವಾಸನೆಭರಿತ ನೀರನ್ನು ಈಗ ದೊಡ್ಡಗುಬ್ಬಿ ಕೆರೆಗೆ ಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ದೊಡ್ಡಗುಬ್ಬಿ ಕೆರೆ ಈ ವಿಷಕಾರಿ ನೀರಿನಿಂದ ತುಂಬಿಕೊಳ್ಳಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ‘ರಾಜಕಾಲುವೆ ಮೂಲಕವೇ ಈ ನೀರು ಹರಿಸಲಾಗುತ್ತಿದ್ದು ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಸುತ್ತಮುತ್ತ ಖಾಸಗಿ ಬಡಾವಣೆಗಳೂ ತಲೆ ಎತ್ತುತ್ತಿದ್ದು ಅಲ್ಲಿನ ಕೊಳವೆ ಬಾವಿಗಳಲ್ಲೂ ಕಲುಷಿತ ನೀರು ಬರುತ್ತಿದೆ. ಇಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಜನ ಮುಂದಿನ ದಿನಗಳಲ್ಲಿ ಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೂಡಲೇ ಸಮಸ್ಯೆ ಪರಿಹರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ಧಾರೆ.
ಬೈರತಿ ಬಂಡೆ ಕ್ವಾರಿಗೆ ಬಳಿಯ ಕೆರೆ ಕಲುಷಿತಗೊಂಡಿದ್ದು ಅ ನೀರನ್ನು ದೊಡ್ಡಗುಬ್ಬಿ ಕೆರೆಗೆ ಹರಿಸುತ್ತಿರುವುದು
ಬೈರತಿ ಬಂಡೆ ಕ್ವಾರಿಗೆ ಬಳಿಯ ಕೆರೆ ಕಲುಷಿತಗೊಂಡಿದ್ದು ಅ ನೀರನ್ನು ದೊಡ್ಡಗುಬ್ಬಿ ಕೆರೆಗೆ ಹರಿಸುತ್ತಿರುವುದು
ಕಲ್ಲು ಕ್ವಾರಿಯಲ್ಲಿದ್ದ ನೀರಿನಲ್ಲಿ ಜನ ಈಜುತ್ತಿದ್ದರು. ಕ್ವಾರಿ ಈಗ ತ್ಯಾಜ್ಯದಿಂದ ಮುಚ್ಚಿಕೊಂಡಿದೆ. ಅಲ್ಲಿದ್ದ ನೀರು ಕಲುಷಿತಗೊಂಡು ಪಕ್ಕದ ಕೆರೆಗೆ ಹರಿದಿದೆ. ಇದು ಅಂತರ್ಜಲ ಸೇರಿ ಕೊಳವೆ ಬಾವಿಗಳ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ನಮ್ಮ ಆರೈಕೆ ಕೇಂದ್ರದಲ್ಲಿ ಮೂರು ಕೊಳವೆಬಾವಿಗಳಿದ್ದು ಎಲ್ಲಾ ಕಡೆಯೂ ಕಲುಷಿತ ನೀರು ಬರುತ್ತಿದೆ. ಟ್ಯಾಂಕರ್‌ನಲ್ಲಿ ನೀರು ತರಿಸುತ್ತಿದ್ದು ನೀರಿಗಾಗಿಯೇ ತಿಂಗಳಿಗೆ ₹1 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಬೇಕಾಗಿದೆ. ಅಲ್ಲದೇ ಇಡೀ ಆರೈಕೆ ಕೇಂದ್ರದ ಆವರಣದಲ್ಲಿ ದುರ್ವಾಸನೆ ಬೀರುತ್ತಿದೆ. ಸೋಂಕಿತರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ದಾನಿಗಳ ನೆರವಿನಿಂದ 23 ವರ್ಷಗಳಿಂದ ಈ ಆರೈಕೆ ಕೇಂದ್ರ ನಡೆಸುತ್ತಿದ್ದು ದನಕರುಗಳನ್ನೂ ಸಾಕುತ್ತಿದ್ದೇವೆ. ಅವುಗಳಿಗೂ ಕುಡಿಯಲು ನೀರಿಲ್ಲ. ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಕೆಎಸ್‌ಪಿಸಿಬಿ) ದೂರು ನೀಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಳೆ ಸುರಿದರೆ ಇನ್ನಷ್ಟು ತೊಂದರೆ ಎದುರಾಗುವ ಆತಂಕವಿದೆ.
ರಾಜು ಮ್ಯಾಥ್ಯು ಅಕ್ಸಪ್ಟ್‌ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT