ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಯ ಜಿಎಸ್‌ಟಿ ಖಾತೆ ಹ್ಯಾಕ್‌: ‘ಜಿಎಸ್‌ಟಿ’ ಮೇಲೂ ವಂಚಕರ ಕಣ್ಣು

ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು
Last Updated 17 ಜುಲೈ 2021, 19:09 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ, ಓಎಲ್‌ಎಕ್ಸ್‌ ಸೇರಿ ಹಲವು ಮಾರ್ಗದಲ್ಲಿ ಸೈಬರ್ ಅಪರಾಧ ಎಸಗುತ್ತಿರುವ ವಂಚಕರು, ಇದೀಗ ಕೇಂದ್ರ ಸರ್ಕಾರದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾಲತಾಣದ ಮೇಲೂ ಕಣ್ಣು ಹಾಕಿದ್ದಾರೆ.

ನಗರದ ಉದ್ಯಮಿಯೊಬ್ಬರು ಜಿಎಸ್‌ಟಿ ಮರುಪಾವತಿ ಮಾಡಲು www.gst.gov.in ಜಾಲತಾಣದಲ್ಲಿ ತೆರೆದಿದ್ದ ಖಾತೆಯನ್ನು ಖದೀಮರು ಹ್ಯಾಕ್ ಮಾಡಿದ್ದಾರೆ. ಈ ಬಗ್ಗೆ ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಮೈಸೂರು ರಸ್ತೆಯ ಕುವೆಂಪು ನಗರದ ಉದ್ಯಮಿ ಸುರೇಶ್ ಜೈನ್ ಎಂಬುವರ ಖಾತೆಯನ್ನು (29AWHP*******ZO) ವಂಚಕರು ಹ್ಯಾಕ್ ಮಾಡಿದ್ದಾರೆ. ಪ್ರಸಕ್ತ ವರ್ಷದ ಜಿಎಸ್‌ಟಿ ಮರುಪಾವತಿ ಮಾಡುವಾಗ ಈ ಕೃತ್ಯ ಬೆಳಕಿಗೆ ಬಂದಿದೆ. ದೂರು ನೀಡಿರುವ ಸುರೇಶ್ ಜೈನ್, ಹ್ಯಾಕ್ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಕೋರಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಜಾಲತಾಣ ನಿರ್ವಹಣೆಗಾರರಿಗೆ ಪತ್ರ: ಜಿಎಸ್‌ಟಿ ಖಾತೆ ಹ್ಯಾಕ್ ಸಂಬಂಧ ನಗರದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಜಿಎಸ್‌ಟಿ ಜಾಲತಾಣ ಮೇಲೆಯೇ ವಂಚಕರ ಕಣ್ಣು ಬಿದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು, ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳ ಸಹಕಾರದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

ಜಿಎಸ್‌ಟಿ ಜಾಲತಾಣ ನಿರ್ವಾಹಕರಿಗೆ ಹಿರಿಯ ಅಧಿಕಾರಿಗಳ ಮೂಲಕ ಪತ್ರ ಬರೆದಿರುವ ಪೊಲೀಸರು, ‘ಜಿಎಸ್‌ಟಿ ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ, ಆರೋಪಿಗಳ ಬಗ್ಗೆ ಏನಾದರೂ ಸುಳಿವು ಇದ್ದರೆ ವರದಿ ನೀಡಿ’ ಎಂದು ಕೋರಿದ್ದಾರೆ.

ಪರಿಚಯಸ್ಥರಿಂದ ಕೃತ್ಯ ಶಂಕೆ: ‘ಕೆಲ ವರ್ಷಗಳ ಹಿಂದೆಯೇ ಜಿಎಸ್‌ಟಿ ಖಾತೆ ತೆರೆದಿದ್ದ ಸುರೇಶ್, ಜಿಎಸ್‌ಟಿ ಮರುಪಾವತಿ ಮಾಡುತ್ತಿದ್ದರು. ಖಾತೆ ತೆರೆಯಲು ಅಗತ್ಯವಿರುವ ‘ಯೂಸರ್‌ ನೇಮ್’ ಹಾಗೂ ‘ಪಾಸ್‌ವರ್ಡ್’ ಅವರ ಬಳಿ ಇತ್ತು. ಆ ಮಾಹಿತಿ ತಿಳಿದುಕೊಂಡ ಪರಿಚಯಸ್ಥರೇ ಖಾತೆ ತೆರೆದು ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಬದಲಾಯಿಸಿರುವ ಮಾಹಿತಿ ಇದೆ. ಈ ರೀತಿ ಕೃತ್ಯವಾದರೂ ಹ್ಯಾಕ್ ಎಂದೇ ಪರಿಗಣಿ
ಸಲಾಗುವುದು. ಈ ಸಂಬಂಧವೂ ಹಲವರನ್ನು ವಿಚಾರಣೆ ನಡೆಸಲಾಗಿದೆ. ಸದ್ಯಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಜಿಎಸ್‌ಟಿ ಜಾಲತಾಣ ಸುರಕ್ಷಿತ’

‘ಜಿಎಸ್‌ಟಿ ಜಾಲತಾಣ ಸುರಕ್ಷಿತವಾಗಿರುವುದಾಗಿ ಅದರ ನಿರ್ವಾಹಕರು ಹೇಳಿದ್ದಾರೆ. ದೂರುದಾರ ಸುರೇಶ್ ಅವರ ವೈಯಕ್ತಿಕ ಖಾತೆ ಮಾತ್ರ ಹ್ಯಾಕ್ ಆಗಿದ್ದು, ಅದರಿಂದ ಯಾವುದೇ ನಷ್ಟವಾಗಿಲ್ಲ. ಜಿಎಸ್‌ಟಿ ಮರುಪಾವತಿಗೆ ಮಾತ್ರ ಸಮಸ್ಯೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಖಾತೆ ಹ್ಯಾಕ್ ಮಾಡುವುದು ಗಂಭೀರ ಅಪರಾಧ. ಆರೋಪಿಗಳು ಯಾರು ಎಂಬುದನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT