ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಮಾಡಲು ಅಂಗನವಾಡಿ ಕಾರ್ಯಕರ್ತೆಯರ ಬಳಕೆಗೆ ವಿರೋಧ

Published 27 ಫೆಬ್ರುವರಿ 2024, 15:24 IST
Last Updated 27 ಫೆಬ್ರುವರಿ 2024, 15:24 IST
ಅಕ್ಷರ ಗಾತ್ರ

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಅಂಗನವಾಡಿ ಕಾರ್ಯಕರ್ತೆಯರನ್ನು ಸ್ವಯಂ ಸೇವಕರನ್ನಾಗಿ ನೇಮಿಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ವಿರೋಧ ವ್ಯಕ್ತಪಡಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ. ಅಮ್ಜದ್, ‘ಸರ್ಕಾರದ ಗೃಹಲಕ್ಷ್ಮಿ, ಶಕ್ತಿಯೋಜನೆ, ಯುವನಿಧಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಫಲಾನುಭವಿಗಳಿಗೆ ತಲುಪಿರುವ ಕುರಿತು ಮಾಹಿತಿ ಸಂಗ್ರಹಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದೆ. 100ರಿಂದ 120 ಮನೆಗಳ ಸಮೀಕ್ಷೆ ನಡೆಸಿದ ಕಾರ್ಯಕರ್ತೆಯರಿಗೆ ₹1 ಸಾವಿರ ಪ್ರೋತ್ಸಾಹಧನ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ಆದರೆ, ‌ಇದರಿಂದ ಅಂಗನವಾಡಿ ಕೆಲಸದ ಹೊಣೆಗಾರಿಕೆ ನಿಭಾಯಿಸುವುದು ಕಷ್ಟವಾಗಲಿದೆ’ ಎಂದು ತಿಳಿಸಿದರು.

ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎಂ. ಜಯಮ್ಮ, ‘ಬೇರೆ ಇಲಾಖೆಗಳ ಕೆಲಸ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ಸಮೀಕ್ಷೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪದೇ ಪದೇ ಆದೇಶ ಹೊರಡಿಸುವ ಧೋರಣೆ ಖಂಡನೀಯ. ಈಗಾಗಲೇ ಗ್ಯಾರಂಟಿ ಯೋಜನೆಗಳ ಕುರಿತು ಸಮೀಕ್ಷೆ ನಡೆಸಲು ತರಬೇತಿ ಪಡೆಯಬೇಕೆಂದು ತಾಲ್ಲೂಕು–ಜಿಲ್ಲಾ ಮಟ್ಟದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ನೀಡುವ ಸರ್ಕಾರದ ಆರನೇ ಗ್ಯಾರಂಟಿ ಕೂಡಲೇ ಜಾರಿಗೊಳಿಸಬೇಕು. ಇಂದಿನ ಬೆಲೆ ಏರಿಕೆ ಸಂದರ್ಭದಲ್ಲಿ ಕನಿಷ್ಠ ಬದುಕಲು ಅಗತ್ಯವಾದಷ್ಟು ಸಂಭಾವನೆ ನೀಡಬೇಕು’ ಎಂದು ಆಗ್ರಹಿಸಿದರು.

ಫೆಡರೇಷನ್‌ ಉಪಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ್, ಜಿಲ್ಲಾ ಅಧ್ಯಕ್ಷೆ ವೈ.ಡಿ. ಗಿರಿಜಾ, ಕಾರ್ಯದರ್ಶಿ ಅನುಸೂಯ, ಖಜಾಂಚಿ ದಾಕ್ಷಾಯಿಣಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT