ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ ಮಕ್ಕಳಿಂದ ‘ಹಸಿರು ರಕ್ಷಕ’ ಅಭಿಯಾನ

2 ಲಕ್ಷ ಗಿಡ ನೆಡುವ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
Published 14 ಜೂನ್ 2024, 15:58 IST
Last Updated 14 ಜೂನ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷ 52 ಸಾವಿರ ಗಿಡಗಳನ್ನು ಶಾಲಾ ಮಕ್ಕಳೇ ನೆಟ್ಟು ಬೆಳೆಸಿದ್ದಾರೆ. ಈ ವರ್ಷ 2 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ‘ಹಸಿರು ರಕ್ಷಕ’ ಅಭಿಯಾನ ರೂಪಿಸಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಬ್ರ್ಯಾಂಡ್‌ ಬೆಂಗಳೂರು– ಹಸಿರೀಕರಣ’ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಗಿಡ ನೆಟ್ಟರೆ ಮರ, ಮರದಿಂದ ಮಳೆ, ಮಳೆ ಬಂದರೆ ನೀರು, ನೀರು ಇದ್ದರೆ ನಾವು, ನೀವು. ಪ್ರಪಂಚದಲ್ಲಿ ನೀರು ಮತ್ತು ಅಧಿಕಾರಕ್ಕೆ ಯುದ್ಧಗಳು ಆಗುತ್ತವೆ ಎಂದು ಅನೇಕ ಜ್ಞಾನಿಗಳು ಹೇಳಿದ್ದಾರೆ. ಇದನ್ನು ಅರಿಯಿರಿ’ ಎಂದು ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.

‘ನಗರದ ಉಷ್ಣಾಂಶ 28 ಡಿಗ್ರಿಗಿಂತ ಹೆಚ್ಚಾಗುತ್ತಿರಲಿಲ್ಲ. ಈಗ 36 ಡಿಗ್ರಿ ದಾಟಿದೆ. ಹಸಿರು ಉಳಿಸಲು ಅನೇಕ ಸ್ವಯಂ ಸೇವಾ ಸಂಘಗಳು ಕೆಲಸ ಮಾಡುತ್ತಿವೆ. ಅದಕ್ಕೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ಬೆಂಗಳೂರಿನ ಹಸಿರು ಸಂರಕ್ಷಣೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ ₹310 ಕೋಟಿ ಹಾಗೂ 15 ನೇ ಹಣಕಾಸು ಆಯೋಗದ ಅಡಿ ₹100 ಕೋಟಿ ಸೇರಿದಂತೆ ಒಟ್ಟು ₹410 ಕೋಟಿ ಹಣ ಮೀಸಲಿಡಲಾಗಿದೆ’ ಎಂದರು.

‘ಯಾವುದೇ ಕಾರ್ಯಕ್ರಮ ನಡೆದರೂ ಮಕ್ಕಳಿಂದಲೇ ನಿರ್ವಹಣೆ ಮಾಡಿಸಬೇಕು ಎಂದು ಸೂಚನೆ ನೀಡಿದ್ದೆ. ಆದರೆ ಅಧಿಕಾರಿಗಳು ಅದನ್ನು ಮರೆತಂತಿದೆ. ನಮ್ಮ ಜೊತೆ ವೇದಿಕೆಯಲ್ಲಿ ಮಕ್ಕಳು ಇದ್ದರೆ ಅವರಿಗೂ ನೆನಪು ಇರುತ್ತದೆ. ಅಲ್ಲದೇ ಅವರು ನಮಗಿಂತ ತುಂಬಾ ಚೆನ್ನಾಗಿ ಮಾತನಾಡುತ್ತಾರೆ’ ಎಂದು ಶಿವಕುಮಾರ್‌ ಹೇಳಿದರು.

ಶಾಸಕ ರಿಜ್ವಾನ್ ಅರ್ಷದ್, ಮಾಜಿ ಶಾಸಕ ಹಸನಬ್ಬ, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT