ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಣ ಮುಚ್ಚಿ ಹಾಕಲು ಬಂದಿದ್ದೀರಾ?: ರಾಹುಲ್ ಗಾಂಧಿಗೆ ಅಶ್ವತ್ಥನಾರಾಯಣ್ ಪ್ರಶ್ನೆ

Published 7 ಜೂನ್ 2024, 10:27 IST
Last Updated 7 ಜೂನ್ 2024, 10:27 IST
ಅಕ್ಷರ ಗಾತ್ರ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ₹187 ಕೋಟಿ ಹಗರಣವನ್ನು ಮುಚ್ಚಿ ಹಾಕಲು ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದಿದ್ದಾರಾ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಶ್ನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿರುವುದು ಮುಖ್ಯಮಂತ್ರಿಯವರ ರಾಜೀನಾಮೆ ಪಡೆಯುವುದಕ್ಕಾ?ದಲಿತರ ಹಣವನ್ನು ಲೂಟಿ ಹೊಡೆದ ಸರಕಾರವಿದು. ನೀವು ಈ ಭ್ರಷ್ಟ ಸರ್ಕಾರದ ರಾಜೀನಾಮೆ ಪಡೆಯಬೇಕು ಎಂದು ಅವರು ಸುದ್ದಗೋಷ್ಠಿಯಲ್ಲಿ ಆಗ್ರಹಿಸಿದರು.

ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ರಾಜೀನಾಮೆ ಪಡೆಯಬೇಕು ಮತ್ತು ಬಂಧಿಸಬೇಕು. ಹಗರಣದ ಪುರಾವೆಗಳನ್ನು ನಾಶ ಮಾಡಲು ಸಭೆ ನಡೆಸಿದ್ದ ಸಚಿವರ ಶರಣ್‌ ಪ್ರಕಾಶ್‌ ಪಾಟೀಲರನ್ನು ಬಂಧಿಸಬೇಕು. ಇದಕ್ಕೆ ರಾಹುಲ್‌ಗಾಂಧಿಯವರು ನಿರ್ದೇಶನ ನೀಡುವರೆ ಎಂದು ಅವರು ಪ್ರಶ್ನಿಸಿದರು.

ಹಗರಣದ ಹಿಂದೆ ದೊಡ್ಡ ಜಾಲವೇ ಇದೆ. ಇದರಿಂದ ಎಲ್ಲರೂ ಅನುಕೂಲ ಪಡೆದುಕೊಂಡಿದ್ದಾರೆ.  ಹಾಗಾಗಿ ಎಲ್ಲ ಸಂದೇಹಗಳಿಗೂ ಉತ್ತರ ಕೊಟ್ಟು ಕ್ರಮ ವಹಿಸಬೇಕಿದೆ. ಕರ್ಮಕಾಂಡ ಮಾಡಿ ಭಂಡತನದಲ್ಲಿ ಏನೂ ಉತ್ತರ ಕೊಡದೆ ನಾಗೇಂದ್ರ ಅವರ ರಾಜೀನಾಮೆಯನ್ನು ಅತ್ಯಂತ ಕಷ್ಟಪಟ್ಟು ಪಡೆದಿದ್ದಾರೆ. ಅವರ ಬಂಧನ ಆಗಬೇಕಿತ್ತು. ಬಂಧಿಸುವ ಕಾರ್ಯವನ್ನು ಸಿಬಿಐನವರಿಗೆ ಬಿಡಿ ಎಂದು ವ್ಯಂಗ್ಯವಾಗಿ ತಿಳಿಸಿದರು.

ಸರಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ...

ರಾಜ್ಯದ ಇಡೀ ಕಾಂಗ್ರೆಸ್ ಸರಕಾರವೇ ಭ್ರಷ್ಟಾಚಾರದಲ್ಲಿದೆ. ದಲಿತರ ಹಣ ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದ್ದೂ ಅಲ್ಲದೆ ಪುರಾವೆಗಳನ್ನೂ ನಾಶ ಮಾಡಿದ್ದಾರೆ. ಮುಖ್ಯಮಂತ್ರಿಯವರಿಗೆ ನೈತಿಕತೆ ಇದ್ದರೆ ಮೊದಲು ರಾಜೀನಾಮೆ ನೀಡಬೇಕು ಎಂದು ಅಶ್ವತ್ಥನಾರಾಯಣ ಒತ್ತಾಯಿಸಿದರು.

ಎಲ್ಲರ ಭಾಗಿತ್ವ, ಸರಕಾರದ ಸಹಮತ ಇಲ್ಲದೆ, ಎಲ್ಲರ ಗಮನಕ್ಕೆ ಬಾರದೆ ರಾಜ್ಯ ಖಜಾನೆಯಿಂದ ಹಣ ವರ್ಗಾವಣೆ ಮಾಡಲು ಹೇಗೆ ಸಾಧ್ಯ? ಮುಖ್ಯ ಲೆಕ್ಕಾಧಿಕಾರಿ ಪರಶುರಾಂ ಅವರು ತಮ್ಮ ಅಫಿಡವಿಟ್‍ನಲ್ಲಿ ಸಾಕ್ಷಿ ನಾಶ ಆಗದಂತೆ ನೋಡಿಕೊಳ್ಳಲು ಕೋರಿದ್ದಾರೆ. ಆದರೆ, ಮೇ 25 ನೇ ತಾರೀಕು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಕೊಠಡಿಯಲ್ಲಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಸಚಿವ ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ- ಶಾಸಕ ಬಸವನಗೌಡ ದದ್ದಲ್ ಜೊತೆ ಈ ಪ್ರಕರಣದ ಚರ್ಚೆ ನಡೆದಿದೆ ಎಂದು ವಿವರಿಸಿದರು.

‘ದದ್ದಲ್ ಎಂಬ ಈ ಮಹಾಪುರುಷರು ಪರಿಶಿಷ್ಟ ಪಂಗಡದ ಶಾಸಕರು. ಈ ಜನರ ರಕ್ಷಣೆ, ಪ್ರತಿನಿಧಿತ್ವ, ಸಬಲೀಕರಣ, ಅಭಿವೃದ್ಧಿಗಾಗಿ ಡಾ. ಅಂಬೇಡ್ಕರರು ಮೀಸಲಾತಿ ಕೊಟ್ಟಿದ್ದಾರೆ. ಆ ಜನಾಂಗಕ್ಕೆ ಸೇರಿ, ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಎಂಥ ದ್ರೋಹ ಬಗೆಯುತ್ತಿದ್ದಾರೆ? ನಾಗೇಂದ್ರ, ದದ್ದಲ್ ಅವರು ಜನಾಂಗದ ದುಡ್ಡನ್ನೇ ಲೂಟಿ ಹೊಡೆಯುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನೇರವಾಗಿ ಖಜಾನೆಯಿಂದ ಲೂಟಿ...

ಇವರು ಕಮೀಷನ್ ಪಡೀತಾರೆ. ನೇರವಾಗಿ ಖಜಾನೆಯಿಂದ ಲೂಟಿ ಹೊಡೀತಾರೆ. ಆರ್ಥಿಕ ಸಚಿವರಾದ ಸಿದ್ದರಾಮಯ್ಯನವರ ಧ್ವನಿಯೇ ಹೊರಟು ಹೋಗಿದೆ.  ಈ ಕುರಿತು ಅವರು ಎಲ್ಲೂ ಮಾತನಾಡುತ್ತಿಲ್ಲ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT