ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ಪರ್ಸೆಂಟೇಜ್‌ ರಾಜಕಾರಣಿ ಅಲ್ಲ: ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌

‘ಫರೋಸ್ ಇನ್ ಎ ಫೀಲ್ಡ್’ ಕೃತಿ ಲೋಕಾರ್ಪಣೆ
Last Updated 20 ಡಿಸೆಂಬರ್ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹೇಳಿದರು.

ನಗರದಲ್ಲಿ ಸೋಮವಾರ ನಡೆದ, ದೇವೇಗೌಡರ ಜೀವನ ಚರಿತ್ರೆ ಕುರಿತಾದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಪರ್ಸೆಂಟೇಜ್‌ ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಒಬ್ಬ ರಾಜಕಾರಣಿಯ ಬದುಕನ್ನು ಪರ್ಸೆಂಟೇಜ್‌ನಲ್ಲೇ ಅಳೆಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇವೇಗೌಡರು ವಿಭಿನ್ನ ರಾಜಕಾರಣಿಯಾಗಿ ನಿಲ್ಲುತ್ತಾರೆ’ ಎಂದರು.

‘ಅಂತರ್ಮುಖಿಯೂ ಆಗಿರುವ ದೇವೇಗೌಡರು ಅನೇಕ ನೋವುಗಳನ್ನು ನುಂಗಿಕೊಂಡಿದ್ದಾರೆ. ದೇಶದ ರಾಜಕಾರಣದಲ್ಲಿ ಅಪರೂಪದ ಮತ್ತು ಬದ್ಧತೆವುಳ್ಳ ವ್ಯಕ್ತಿ. ಅವರನ್ನು ನಿರ್ಲಕ್ಷಿಸಿ ಕರ್ನಾಟಕ ರಾಜಕಾರಣವನ್ನು ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಅವರನ್ನು ಇಷ್ಟಪಡುವವರಷ್ಟೇ ಸಂಖ್ಯೆಯಲ್ಲಿ ವಿರೋಧಿಗಳೂ ಇದ್ದಾರೆ’ ಎಂದರು.

ವರ್ಚುವಲ್‌ ವ್ಯವಸ್ಥೆ ಮೂಲಕ ಕೃತಿ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ‘ದೇವೇಗೌಡರು ಸುದೀರ್ಘ ಅವಧಿಯವರೆಗೆ ರಾಜಕೀಯದಲ್ಲಿದ್ದರೂ ಅತ್ಯಂತ ಕಡಿಮೆ ಅವಧಿಗೆ ಅಧಿಕಾರದಲ್ಲಿದ್ದರು. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿದ್ದರು’ ಎಂದರು. ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌, ‘ರಾಜಕಾರಣಿಗಳ ಜೀವನ ಚರಿತ್ರೆ ಬರೆಯುವವರಿಗೆ ಈ ಕೃತಿ ಮಾದರಿ’ ಎಂದರು.

ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಎಸ್‌.ಎಸ್‌. ಮೀನಾಕ್ಷಿ ಸುಂದರಂ, ‘ಅಧಿಕಾರಿಗಳ ಮೇಲೆ ದೇವೇಗೌಡರು ವಿಶ್ವಾಸವಿಡುತ್ತಿದ್ದರು. ದೇವರು ನಮ್ಮನ್ನು ದೊಡ್ಡ ಜಾಗದಲ್ಲಿ ಇಟ್ಟಿದ್ದಾನೆ. ನಾವು ಸಣ್ಣತನ ತೋರಬಾರದು ಎನ್ನುತ್ತಿದ್ದರು’ ಎಂದು ದೇವೇಗೌಡರ ಜತೆಗಿನ ಒಡನಾಟವನ್ನು ನೆನಪಿಸಿಕೊಂಡರು.

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಕೃತಿ ರಚಿಸಿರುವ ಪತ್ರಕರ್ತ ಸುಗತ ಶ್ರೀನಿವಾಸರಾಜು, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT