ಶನಿವಾರ, ಫೆಬ್ರವರಿ 27, 2021
31 °C

ಎಚ್‌ಡಿಕೆ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ: ವಿಚಾರಣೆ ತಡೆಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್‌ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರ ಮನವಿಯನ್ನು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

‘ನನ್ನ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯನ್ನು ರಜಾಕಾಲದ ಏಕಸದಸ್ಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಪಿ.ಜಿ.ಎಂ.ಪಾಟೀಲ ಅವರು ಮಂಗಳವಾರ ವಿಚಾರಣೆ ನಡೆಸಿದರು.

ವಿಚಾರಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು, ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡುವಂತೆ ಕೋರಿದರು.

ಇದೇ ವೇಳೆ, ಲೋಕಾಯುಕ್ತ ಪರ ವಕೀಲರಾದ ವೆಂಕಟೇಶ್ ಎಸ್‌.ಅರಬಟ್ಟಿ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.

ಅರ್ಜಿದಾರರ ಕೋರಿಕೆಯನ್ನು ನಿರಾಕರಿಸಿದ ನ್ಯಾಯಮೂರ್ತಿಗಳು, ಆರೋಪಿ ಕುಮಾರಸ್ವಾಮಿ ಅವರಿಗೆ ವಿಚಾರಣೆಯ ವೇಳೆ ಖುದ್ದು ಹಾಜರಾತಿಗೆ ನಾಲ್ಕು ವಾರಗಳ ಕಾಲ ವಿನಾಯ್ತಿಯನ್ನು ನೀಡಿ, ವಿಚಾರಣೆಯನ್ನು ಇದೇ 14ಕ್ಕೆ ಮುಂದೂಡಿದರು.

ಈ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್, ಪ್ರಕರಣದ ಪ್ರತಿವಾದಿಗಳಾದ ಲೋಕಾಯುಕ್ತ ಪೊಲೀಸರು ಮತ್ತು ಪ್ರಕರಣದ ದೂರದಾರರಾದ ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯ ಮಾಹಿತಿ ಹಕ್ಕು ಕಾರ್ಯಕರ್ತ ಎಂ.ಎಸ್.ಮಹದೇವ ಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು.

 ಪ್ರಕರಣವೇನು?

‘2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ, ನಗರದ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿ ವ್ಯಾಪ್ತಿಯಲ್ಲಿ 3 ಎಕರೆ 34 ಗುಂಟೆ ಪ್ರದೇಶವನ್ನು ಸರ್ಕಾರದ ಸ್ವಾಧೀನದಿಂದ ಕೈಬಿಟ್ಟು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣ ಇದಾಗಿದೆ.

ಏಳು ವರ್ಷ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2019ರ ಜನವರಿಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು.

ಇದನ್ನು ಆಕ್ಷೇಪಿಸಿ ದೂರುದಾರ ಮಹದೇವ ಸ್ವಾಮಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ‘ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಪುರಸ್ಕರಿಸಿದ್ದರು.

'ಬಿ‘ ರಿಪೋರ್ಟ್ ರದ್ದುಪಡಿಸಿ 2019 ಅಕ್ಟೋಬರ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪ್ರಕರಣದ ಒಟ್ಟು 19 ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು