ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಶಾಸಕರಿಗೆ ಕ್ರಿಕೆಟ್‌ ಬೆಟ್ಟಿಂಗ್‌, ನೈಟ್‌ ಕ್ಲಬ್‌ ಹಣ: ಎಚ್‌ಡಿಕೆ ಆರೋಪ

ನಗರದಲ್ಲಿ ಬಿರುಸುಗೊಂಡ ಮತಬೇಟೆ ಪ್ರಚಾರ
Last Updated 25 ನವೆಂಬರ್ 2019, 4:27 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಮಹಾಲಕ್ಷ್ಮಿಲೇಔಟ್‌ ಮತ್ತು ಯಶವಂತಪುರ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ‘ಬಿಜೆಪಿ ನೈಟ್‌ಕ್ಲಬ್‌, ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಕೋರರಿಂದ ಹಣ ವಸೂಲಿ ಮಾಡಿ ಅನರ್ಹ ಶಾಸಕರಿಗೆ ಹಣ ಹಂಚಿದ್ದಾರೆ’ ಎಂದು ಆರೋಪಿಸಿದರು.

ಮೈತ್ರಿ ಸರ್ಕಾರವನ್ನು ಪತನ ಗೊಳಿಸಲು ಬಿಜೆಪಿ ಮುಖಂಡರು ಅನರ್ಹ ಶಾಸಕರಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

‘ಕ್ರಿಕೆಟ್‌ ಬೆಟ್ಟಿಂಗ್ ದಂಧೆ, ನೈಟ್‌ ಕ್ಲಬ್‌ಗಳಿಂದ ಹಣ ಪಡೆದು ಅನರ್ಹ ಶಾಸಕರಿಗೆ ಕೊಟ್ಟಿದ್ದಾರೆ. ನನ್ನ ಸರ್ಕಾರ ಇದ್ದಾಗ ಈ ಎಲ್ಲ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿದ್ದೆ. ಮತ್ತೆ ಇವುಗಳ ಆರಂಭಕ್ಕೆ ಅವರಿಂದ ಹಣ ಪಡೆದಿದ್ದಾರೆ. ಈ ಹಣ ಬಳಸಿಕೊಂಡೇ ಮೈತ್ರಿ ಸರ್ಕಾರ ಪತನಗೊಳಿಸಲಾಯಿತು’ ಎಂದು ದೂರಿದರು.

‘ಬಿಜೆಪಿ ಸರ್ಕಾರ ಉಳಿಸುತ್ತೇನೆ ಅಥವಾ ಕಾಪಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಸರ್ಕಾರ ಕಾಪಾಡುತ್ತೇನೆ ಎಂದು ಹೇಳಿದ್ದೇನೆ, ಯಾವ ಸರ್ಕಾರ ಎಂಬುದನ್ನು ತಿಳಿಸಿಲ್ಲ. ಯಾವ ಸರ್ಕಾರ ಎನ್ನುವುದನ್ನು ಡಿ. 9ರ ಬಳಿಕ ತಿಳಿಸುತ್ತೇನೆ. ಇದರ ಸೂಕ್ಷ್ಮತೆ ಬಲ್ಲವರಿಗೆ ಮಾತ್ರ ಅರ್ಥವಾಗುತ್ತದೆ ಸಚಿವ ಆರ್‌.ಅಶೋಕ್‌ ಅವರಿಗೆ ಇವೆಲ್ಲ ಅರ್ಥವಾಗುವುದಿಲ್ಲ. ಇವರು ಪಾಠ ಕಲಿಯೋದು ಬಹಳಷ್ಟಿದೆ’ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ ಮತ್ತು ಮಹಾಲಕ್ಷ್ಮಿಲೇಔಟ್‌ ಕ್ಷೇತ್ರದ ಅಭ್ಯರ್ಥಿ ಗಿರೀಶ್‌ ನಾಶಿ ಪರ ಕುಮಾರಸ್ವಾಮಿ ಪ್ರಚಾರ ನಡೆಸಿದರು.

ನಳಿನ್‌ ಕಟೀಲ್‌ ರೋಡ್‌ ಶೋ

ನಳಿನ್‌ ಕುಮಾರ್ ಕಟೀಲ್‌ ಮಹಾಲಕ್ಷ್ಮಿ ಲೇಔಟ್‌ ಅಭ್ಯರ್ಥಿ ಕೆ.ಗೋಪಾಲಯ್ಯ ಪರವಾಗಿ ಭಾನುವಾರ ರೋಡ್‌ ಶೋ ನಡೆಸಿ, ಮತಯಾಚನೆ ಮಾಡಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಗೆ ಪ್ರಚಾರಕ್ಕೆ ಕಾರ್ಯಕರ್ತರೇ ಇಲ್ಲದೆ ಹತಾಶರಾಗಿದ್ದಾರೆ. ಇದರಿಂದ ಗೋಪಾಲಯ್ಯ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಮತದಾರರು ಇದಕ್ಕೆ ಕಿವಿಗೊಡದೆ ಮತ ನೀಡಬೇಕು ಎಂದು ಮನವಿ ಮಾಡಿದರು. ಬಳಿಕ ಅವರು ಅಂಬರೀಷ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಷ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT