ಬೆಂಗಳೂರು: ಗಣೇಶೋತ್ಸವದ ಪ್ರಯುಕ್ತ ಬೆಂಗಳೂರಿನಿಂದ ತಮ್ಮೂರಿನತ್ತ ಹೊರಟವರ ಸಂಖ್ಯೆ ಶನಿವಾರ ಒಂದೇ ಪ್ರಮಾಣದಲ್ಲಿ ಏರಿದ್ದರಿಂದ ಮೆಜೆಸ್ಟಿಕ್ ಸಹಿತ ವಿವಿಧ ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ ಉಂಟಾಯಿತು.
ಶುಕ್ರವಾರವೇ ಜನಸಂದಣಿ ಕಂಡು ಬಂದಿತ್ತು. ಶನಿವಾರ ದಟ್ಟಣೆ ಇನ್ನಷ್ಟು ಹೆಚ್ಚಾಯಿತು. ಜನರು ಲಗೇಜುಗಳೊಂದಿಗೆ ಮೆಜೆಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳ ಕಡೆಗೆ ಗುಂಪು ಗುಂಪಾಗಿ ಬರತೊಡಗಿದ್ದರು.
ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಕಲಬುರ್ಗಿ ಸಹಿತ ವಿವಿಧ ನಗರಗಳಿಗೆ ಹೋಗುವವರು ನಿಲ್ದಾಣಗಳಲ್ಲಿ ಜಮಾಯಿಸಿದ್ದರಿಂದ ಬಸ್, ರೈಲು ನಿಲ್ದಾಣಗಳು ಕಿಕ್ಕಿರಿದವು. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದ ಜನ, ನಿಲ್ದಾಣಕ್ಕೆ ಬಂದು ಬಸ್‌ಗಾಗಿ ಹುಡುಕಾಟ ನಡೆಸಿದರು.
ಚಾಲುಕ್ಯ ವೃತ್ತ, ಆನಂದರಾವ್ ವೃತ್ತ, ಮೈಸೂರು ರಸ್ತೆ, ಯಶವಂತಪುರ, ಆರ್‌ಎಂಸಿ ಯಾರ್ಡ್, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿತ್ತು.
ದುಪ್ಪಟ್ಟು ದರ: 742 ಪ್ರಕರಣ ದಾಖಲು ಖಾಸಗಿ ಬಸ್‌ಗಳ ಪ್ರಯಾಣಿಕರಿಗೆ ದುಪ್ಪಟ್ಟು ದರ ನಿಗದಿ ಮಾಡಿದ್ದಕ್ಕಾಗಿ ಸಾರಿಗೆ ಇಲಾಖೆ ಎರಡು ದಿನಗಳಲ್ಲಿ 742 ಪ್ರಕರಣ ದಾಖಲಿಸಿಕೊಂಡಿದೆ. ₹ 9.24 ಲಕ್ಷ ದಂಡ ವಸೂಲಿ ಮಾಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.