ಸೋಮವಾರ, ಮಾರ್ಚ್ 30, 2020
19 °C
ಸಮೂಹ ಸಾರಿಗೆ ಬಳಕೆ: ಶೇ 31ರಷ್ಟು ಪ್ರಯಾಣಿಕರು ಹಿಂದೇಟು

ನಿಲ್ದಾಣ–ಕೊನೆಯ ತಾಣ: ಪ್ರಯಾಣ ಹೈರಾಣ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ದಟ್ಟಣೆ ಸಮಸ್ಯೆ ರಕ್ಕಸ ರೂಪವನ್ನು ಪಡೆದುಕೊಳ್ಳುತ್ತಲೇ ಇದೆ. ಅದನ್ನು ಮಣಿಸಲು ಖಾಸಗಿ ವಾಹನ ಬಳಕೆ ಬಿಟ್ಟು ಸಮೂಹ ಸಾರಿಗೆ ಬಳಸುವುದೊಂದೇ ದಾರಿ. ಆದರೆ, ಸಮೂಹ ಸಾರಿಗೆ ಬಳಕೆಗೆ ಶೇ 31ರಷ್ಟು ಜನ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ನಿಲ್ದಾಣ ಹಾಗೂ ಕೊನೆಯ ತಾಣಗಳ ನಡುವಿನ ಪ್ರಯಾಣಕ್ಕೆ ಸಮರ್ಪಕ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಹೈರಾಣಾಗಿದ್ದಾರೆ.

ಸಿಲಿಕಾನ್ ಸಿಟಿ ಬೆಳೆದಂತೆಲ್ಲಾ ಯಾಂತ್ರಿಕ ಬದುಕಿನ ಅವಸರದ ವೇಗ ಕೂಡ ಹೆಚ್ಚಾಗುತ್ತಲೇ ಇದೆ. ಕುಟುಂಬವು ನಗರದಲ್ಲಿ ಒಂದು ಕಡೆ ನೆಲಸಿದ್ದರೆ, ಕಚೇರಿ ಮತ್ತೊಂದು ದಿಕ್ಕಿನಲ್ಲಿ ಇರುತ್ತದೆ. ಮನೆಯಿಂದ ಕಚೇರಿ ಮತ್ತು ಕಚೇರಿಯಿಂದ ಮನೆ ತಲುಪುವುದು ಬೆಂಗಳೂರಿನಲ್ಲಿ ಸವಾಲಿನ ಕೆಲಸ.

ಈ ಸವಾಲು ಎದುರಿಸಿ ನಿರ್ದಿಷ್ಟ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಲು ನಮ್ಮ ಮೆಟ್ರೊ, ಬಿಎಂಟಿಸಿ, ಉಪನಗರ ರೈಲು ಬಳಸಲು ಜನರಿಗೆ ಆಸಕ್ತಿಯೇನೋ ಇದೆ. ಆದರೆ, ನಿಲ್ದಾಣಗಳಲ್ಲಿ ಬಸ್‌ಗಳಿಗಾಗಿ ಕಾದು ನಿಲ್ಲಬೇಕಾದ ಸ್ಥಿತಿ ಇರುವುದು, ಮನೆಯಿಂದ ಬಸ್‌ನಿಲ್ದಾಣ ಅಥವಾ ಮೆಟ್ರೊ ನಿಲ್ದಾಣ ತಲುಪಲು ಮತ್ತು ನಿಲ್ದಾಣಗಳಿಂದ ಮನೆಗೆ ತಲುಪಲು ಸಮರ್ಪಕ ಸೌಲಭ್ಯ ಇಲ್ಲದಿರುವುದು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸಲು ಹಿಂದೇಟು ಹಾಕುವಂತೆ ಮಾಡಿದೆ ಎಂಬ ಅಂಶ ಬಿ–ಪ್ಯಾಕ್ (ಬೆಂಗಳೂರು ಪೊಲಿಟಿಕಲ್  ಆ್ಯಕ್ಷನ್ ಕಮಿಟಿ) ನಡೆಸಿರುವ ಸರ್ವೆಯಿಂದ ಬೆಳಕಿಗೆ ಬಂದಿದೆ.

ಮೊದಲ ಮತ್ತು ಕೊನೆಯ ತಾಣ ತಲುಪಲು ಇರುವ ಸಮಸ್ಯೆಗಳಿಂದಾಗಿಯೇ ಶೇ 31ರಷ್ಟು ಜನರು ಸ್ವಂತ ಕಾರನ್ನು ಅಥವಾ ಬೈಕನ್ನು ನೆಚ್ಚಿಕೊಳ್ಳುವಂತೆ ಮಾಡಿದೆ. ಖಾಸಗಿ ವಾಹನ ಇಲ್ಲದವರು ಆ್ಯಪ್ ಆಧಾರಿತ ಟ್ಯಾಕ್ಸಿ ಅಥವಾ ಆಟೊರಿಕ್ಷಾ ಮತ್ತು ಬಾಡಿಗೆ ಬೈಕ್‌ಗಳನ್ನು ಬಳಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ರಸ್ತೆಗಳಲ್ಲಿ ವಾಹನ ದಟ್ಟಣೆ ಏರುಗತಿಯಲ್ಲೇ ಇದೆ.

ಬಿ–ಪ್ಯಾಕ್ ನಡೆಸಿದ ಆನ್‌ಲೈನ್ ಸರ್ವೆಯಲ್ಲಿ 1,129 ಭಾಗವಹಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ವೆಯಲ್ಲಿ ಭಾಗವಹಿಸಿದವರ ಪೈಕಿ ಶೇ 69ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರೆ. ಇವರಲ್ಲಿ ಶೇ 53ರಷ್ಟು ಮನೆಯಿಂದ ಬಸ್‌ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಅಥವಾ ನಮ್ಮಮೆಟ್ರೊ ನಿಲ್ದಾಣಕ್ಕೆ ನಡೆದುಕೊಂಡೇ ಹೋಗುತ್ತಿದ್ದಾರೆ. ನಿಲ್ದಾಣಗಳಿಂದ ಕಚೇರಿಗೂ ನಡೆದುಕೊಂಡೇ ಹೋಗುತ್ತಿದ್ದಾರೆ. ಶೇ 24ರಷ್ಟು ಜನ ಮನೆಯಿಂದ ನಿಲ್ದಾಣಗಳ ತನಕ ನಡೆದುಕೊಂಡು ಬರುತ್ತಿದ್ದಾರೆ. ಶೇ 18ರಷ್ಟು ಜನ ಮನೆ ಮತ್ತು ಕಚೇರಿಗಳನ್ನು ನಡೆದು ತಲುಪುವ ಬದಲು ಪರ್ಯಾಯಗಳನ್ನು ಅನುಸರಿಸುತ್ತಿದ್ದಾರೆ.

ಇನ್ನು ಸಾರ್ವಜನಿಕ ಸಾರಿಗೆ ಬಳಸದ ಶೇ 31ರಷ್ಟು ಜನರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಸಮೂಹ ಸಾರಿಗೆ ಬಳಸಲು ಇರುವ ಅನನುಕೂಲ, ತಮಗೆ ಬೇಕಾದ ಸಮಯದಲ್ಲಿ ಬಸ್‌ ಅಥವಾ ಮೆಟ್ರೊ ಲಭ್ಯ ಇಲ್ಲದಿರುವುದು, ಪ್ರಯಾಣ ದರ ಕೈಗೆಟಕದಂತಿರುವುದು, ನಿಲ್ದಾಣಗಳಲ್ಲಿ ಕಾಯುವ ಸ್ಥಿತಿ, ನಿಲ್ದಾಣ ತಲುಪಲು ಮತ್ತು ನಿಲ್ದಾಣಗಳಿಂದ ಮನೆಗೆ ತಲುಪಲು ಅನ್ಯ ಸಾರಿಗೆಯ ಕೊರತೆ... ಮುಂತಾದ ಕಾರಣಗಳಿಂದಾಗಿ ಖಾಸಗಿ ವಾಹನಗಳ ಮೊರೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಕೊನೆಯ ತಾಣದ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರ್ಕಾರ ತುರ್ತಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯ ಇದೆ. ಈ ಸಮಸ್ಯೆಯನ್ನು ಕಡೆಗಣಿಸಿದ್ದೇ ಆದರೆ ಭವಿಷ್ಯದಲ್ಲಿ ಖಾಸಗಿ ವಾಹನ ಬಳಕೆ ಮತ್ತಷ್ಟು ಹೆಚ್ಚಾಗಿ ಸಂಚಾರ ದಟ್ಟಣೆ ಉಲ್ಬಣಿಸಲಿದೆ ಎಂದು ಬಿ–ಪ್ಯಾಕ್‌ ಎಚ್ಚರಿಸಿದೆ.

ವಾಹನ ಹಂಚಿಕೊಳ್ಳುವಿಕೆ ಮಹಿಳೆಯರೇ ಹೆಚ್ಚು
ವಾಹನ ಹಂಚಿಕೊಂಡು ಪ್ರಯಾಣ ಮಾಡುವುದರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಒಲವು ಹೊಂದಿದ್ದಾರೆ.

ಮನೆಯಿಂದ ಬಸ್‌, ಮೆಟ್ರೊ ಅಥವಾ ರೈಲು ನಿಲ್ದಾಣಗಳಿಗೆ ಕಾರು ಮತ್ತು ಆಟೋರಿಕ್ಷಾಗಳಲ್ಲಿ ಪ್ರಯಾಣ ಹಂಚಿಕೊಳ್ಳುವ ಪ್ರಯಾಣಿಕರಲ್ಲಿ ಶೇ 65ರಷ್ಟು ಮಹಿಳೆಯರೇ ಇದ್ದಾರೆ.

‘ಯಾವುದೇ ಸಾರ್ವಜನಿಕ ಸಾರಿಗೆ ಬಳಸದೆ ಖಾಸಗಿ ವಾಹನ ಬಳಸುವವರಲ್ಲಿ ಪುರುಷರ ಪ್ರಮಾಣ ಶೇ 88ರಷ್ಟಿದೆ. ಶೇ 63ರಷ್ಟು ಮಹಿಳೆಯರು ಸ್ವಂತ ವಾಹನ ಬಳಸಿದರೆ ಶೇ 37ರಷ್ಟು ಮಹಿಳೆಯರು ಕಾರು ಮತ್ತು ಆಟೋರಿಕ್ಷಾಗಳಲ್ಲಿ ಪ್ರಯಾಣ ಹಂಚಿಕೊಳ್ಳುತ್ತಾರೆ. ವಾಹನ ಹಂಚಿಕೊಂಡು ಪ್ರಯಾಣ ಮಾಡುವ ಪುರುಷರ ಪ್ರಮಾಣ ಶೇ 11ರಷ್ಟು ಮಾತ್ರ’ ಎಂದು ಬಿ–ಪ್ಯಾಕ್‌ ಸರ್ವೆ ವರದಿ ಹೇಳಿದೆ.

‘ತಳಮಟ್ಟದಲ್ಲೇ ಪರಿಹಾರ ಅಗತ್ಯ’
ಮೊದಲ ಮತ್ತು ಕೊನೆಯ ತಾಣ ತಲುಪಲು ಇರುವ ಸಮಸ್ಯೆಗಳನ್ನು ತಳಮಟ್ಟಗಳಲ್ಲೇ ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಸ್ಥಳೀಯ ರನ್ನು ವಿಶ್ವಾಸಕ್ಕೆ ಪಡೆದು ಮೊದಲ ಹಂತದಲ್ಲಿ ವಿಧಾನಸಭಾ ಕ್ಷೇತ್ರವಾರು ಪರಿಹಾರಗಳನ್ನು ಕಂಡುಕೊಳ್ಳಬೇಕು. ಮೆಟ್ರೊ ಹೊಸ ಮಾರ್ಗಗಳಲ್ಲೂ ಸಂಬಂಧಪಟ್ಟವರ ಜತೆ ಸಭೆ ನಡೆಸಿ ಕೊನೆಯ ತಾಣಕ್ಕೂ ಸಾರಿಗೆ ಸಂಪರ್ಕ ಕಲ್ಪಿಸಬೇಕು.
-ಅರ್ಚನಾ ಎಂ.ವಿ., ಸಂಶೋಧನೆ ಮತ್ತು ಕಾರ್ಯಕ್ರಮ ಸಂಯೋಜಕಿ, ಬಿ–ಪ್ಯಾಕ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು