ಸೋಮವಾರ, ಫೆಬ್ರವರಿ 17, 2020
28 °C

ವೀರಸಂದ್ರ ಕೆರೆ ಪುನರುಜ್ಜೀವನಕ್ಕೆ ‘ಒತ್ತುವರಿ’ ಅಡ್ಡಿ

ಚಿರಂಜೀವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಬಳಸಿ 10ಕ್ಕೂ ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ. ಈ ನಡುವೆ, ಹೆಬ್ಬಗೋಡಿಯ ವೀರಸಂದ್ರ ಕೆರೆ ಪುನರುಜ್ಜೀವನಕ್ಕೆ ಕಂಪನಿಯೊಂದು ಕೋಟಿಗಟ್ಟಲೆ ರೂಪಾಯಿ ವ್ಯಯಿಸುತ್ತಿದ್ದರೂ, ಜಿಲ್ಲಾಡಳಿತ ಹಾಗೂ ಸ್ಥಳೀಯ ಅಧಿಕಾರಿಗಳು ಒತ್ತುವರಿ ತೆರವಿಗೆ ಆಸಕ್ತಿ ವಹಿಸದ ಕಾರಣ ಕಾಮಗಾರಿಯ ವೆಚ್ಚ ಹೆಚ್ಚಾಗುತ್ತಿದೆ.

ಅವನತಿಯ ಅಂಚು ತಲುಪಿದ್ದ ವೀರಸಂದ್ರ ಕೆರೆಯನ್ನು ಟೈಟನ್‌ ಕಂಪನಿ ಪುನರುಜ್ಜೀವನಗೊಳಿಸುತ್ತಿದೆ. ಈ ಕುರಿತು ಕಂಪನಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಪ್ಪಂದ ಮಾಡಿಕೊಂಡಿವೆ.

ಈ ಕೆರೆಯನ್ನು ಸಂಪರ್ಕಿಸುವ ರಾಜಕಾಲುವೆಗಳಲ್ಲಿ ಮಳೆ ನೀರಿನ ಬದಲು ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದ ಒಳಚರಂಡಿಯ ಕೊಳಚೆ ನೀರು ಹರಿಯುವುದರಿಂದ ಹಾಗೂ ಕಟ್ಟಡದ ಅವಶೇಷಗಳನ್ನು ತಂದು ಸುರಿದಿದ್ದರಿಂದ ಈ ಜಲಕಾಯವು ನಿಧಾನವಾಗಿ ವಿನಾಶದತ್ತ ಸಾಗಿತ್ತು. 17 ಎಕರೆ 6 ಗುಂಟೆ ವಿಸ್ತೀರ್ಣದ ಈ ಕೆರೆಯಲ್ಲಿ 14 ಗುಂಟೆಗಷ್ಟು ಜಾಗ ಒತ್ತುವರಿ ಆಗಿದೆ. ಇನ್ನೊಂದೆಡೆ, ಈ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು 3 ಎಕರೆ 17 ಗುಂಟೆ ಜಾಗವನ್ನು ಸರ್ಕಾರವೇ ಬಳಸಿಕೊಂಡಿದೆ.

ಕೆರೆ ಪುನರುಜ್ಜೀವನ ಕಾರ್ಯವನ್ನು ಕಂಪನಿಯು 2018ರಲ್ಲಿ ಆರಂಭಿಸಿತ್ತು. ‘ಕಾಮಗಾರಿಯನ್ನು 2019ರ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳಿಸಲು ಕಂಪನಿ ಸಿದ್ಧತೆ ನಡೆಸಿತ್ತು. ಕೆರೆಯಂಗಳದಲ್ಲಿದ್ದ 70 ಸಾವಿರ ಕ್ಯೂಬಿಕ್‌ ಮೀಟರ್‌ಗಳಷ್ಟು ಹೂಳನ್ನು ತೆರವುಗೊಳಿಸಿದ್ದು, ಇದರಿಂದ ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ದಿನಕ್ಕೆ 9 ಕೋಟಿ ಲೀಟರ್‌ಗಳಿಂದ 14 ಕೋಟಿ ಲೀಟರ್‌ಗೆ ಹೆಚ್ಚಳವಾಗಿದೆ’ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆದರೆ, ಈ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಅಭಿವೃದ್ಧಿ ಕಾಮಗಾರಿ ಸಲುವಾಗಿ ಕಂಪನಿ ನೇಮಿಸಿದ್ದ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿದ್ದು, ಐದು ತಿಂಗಳುಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ‘ಅವರು ಗುತ್ತಿಗೆದಾರರ ವಾಹನಗಳನ್ನು ಸುಡುವುದಾಗಿ ಬೆದರಿಕೆ ಹಾಕಿದ್ದರು. ಕೆರೆ ದಂಡೆಯ ರಸ್ತೆಯನ್ನು ವಿಸ್ತರಿಸುವಂತೆ ಒತ್ತಡ ಹೇರಿದ್ದರು’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಸ್ಥಳೀಯ ನಗರ ಸಭೆಯ ಅಧಿಕಾರಿಗಳು ಮಧ್ಯಪ್ರವೇಶ ಮಾಡಿದ ಬಳಿಕ ಇಡೀ ಕಾಮಗಾರಿ ಸ್ಥಗಿತಗೊಂಡಿದೆ. ಈ ಕೆರೆಯ ಪಶ್ಚಿಮ ದಿಕ್ಕಿನಲ್ಲಿ ಇನ್ನೊಂದು ರಸ್ತೆಯನ್ನು ನಿರ್ಮಿಸುವಂತೆ ಕೋರಿ ನಗರಸಭೆಯವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 2015ರ ಪರಿಷ್ಕೃತ ನಗರ ಮಹಾಯೋಜನೆಯ ಕೆರೆಯ ಮೀಸಲು ಪ್ರದೇಶದ ನಿಯಮಗಳ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶಗಳ ಸ್ಪಷ್ಟ ಉಲ್ಲಂಘನೆ ಇದು. 

ಸ್ಥಳೀಯ ರಾಜಕೀಯದಿಂದಾಗಿ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ‘ಕೆರೆ ಪುನರುಜ್ಜೀವನ ಕಾಮಗಾರಿಯ ಒಟ್ಟು ವೆಚ್ಚವು ಏನಿಲ್ಲವೆಂದರೂ ₹2 ಕೋಟಿಗಳಷ್ಟು ಹೆಚ್ಚಾಗಲಿದೆ. ಜಿಲ್ಲಾಡಳಿತವು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶಕ್ತವಾಗಿಲ್ಲ. ಕೆರೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗುವ ಇತರ ಕಂಪನಿಗಳ ಉತ್ಸಾಹಕ್ಕೂ ಈ ಬೆಳವಣಿಗೆ ತಣ್ಣೀರು ಎರಚಬಹುದು’ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಈ ಕೆರೆ ಅಭಿವೃದ್ಧಿ ಸಂಬಂಧ ಬಿಕ್ಕಟ್ಟು ಇರುವುದನ್ನು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಒಪ್ಪಿಕೊಂಡರು.

‘ಕೆರೆ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ನಿವಾರಿಸುವಂತೆ ಕೋರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಎಂಆರ್‌ಸಿಎಲ್‌ ಪತ್ರ ಬರೆದಿದೆ. ಆದಷ್ಟು ಶೀಘ್ರ ಈ ಸಮಸ್ಯೆ ನಿವಾರಣೆ ಆಗಲಿದೆ’ ಎಂದು ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಇಲಾಖೆಯು ಆರು ಕೆರೆಗಳ ಅಭಿವೃದ್ಧಿಗೆ ಹಾಗೂ ಬಿಬಿಎಂಪಿ 12 ಕೆರೆಗಳ ಅಭಿವೃದ್ಧಿಗೆ ಕಾರ್ಪೋರೇಟ್‌ ಸಂಸ್ಥೆಗಳ ಸಾಮಾಜಿಕ  ಹೊಣೆಗಾರಿಕೆ ನಿಧಿಯನ್ನು ಎದುರು ನೋಡುತ್ತಿರುವಾಗಲೇ ಈ ಬೆಳವಣಿಗೆ ನಡೆದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು