ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ ಬಲಿ ಬಳಿಕವೂ ಸರಿಯಾಗದ ರಸ್ತೆ: ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಸಂಚಾರವೇ ದುಸ್ತರ

ಮೈಮರೆತ ಜಲಮಂಡಳಿ
Last Updated 20 ಅಕ್ಟೋಬರ್ 2021, 21:45 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ರಸ್ತೆ ಎಂದರೆ ಕಲ್ಲು, ಗುಂಡಿಗಳ ಹಾದಿ. ಈ ದಾರಿಯಲ್ಲಿ ಜಲಮಂಡಳಿ ತೋಡಿದ್ದ ಗುಂಡಿಗೆ ವ್ಯಕ್ತಿಯೊಬ್ಬ ಬಲಿಯಾಗಿ ತಿಂಗಳು ಕಳೆದರೂ ಗುಂಡಿ ಮುಚ್ಚಿಲ್ಲ, ರಸ್ತೆ ದುರಸ್ತಿಯೂ ಆಗಿಲ್ಲ.

ಎಂಟನೇ ಮೈಲಿಯಲ್ಲಿ ತುಮಕೂರು ರಸ್ತೆಯಿಂದ ಹೆಸರಘಟ್ಟ ಮುಖ್ಯ ರಸ್ತೆಗೆ ತಿರುಗಿದ ಕೂಡಲೇ ಹದಗೆಟ್ಟ ರಸ್ತೆಯ ದರ್ಶನವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಸಿಗುವ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ.

ಅದರ ನಡುವೆಯೇ ವಾಹನಗಳು ಸಂಚರಿಸುವುದರಿಂದ ರಸ್ತೆಯಲ್ಲಿ ಏಳುವ ದೂಳು ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ಎರಚಿದ ಅನುಭವವಾಗುತ್ತದೆ. ಕಣ್ಣಿಗೆ ರಾಚುವ ದೂಳಿನಿಂದ ರಕ್ಷಿಸಿಕೊಳ್ಳಲು ಸ್ವಲ್ಪ ಕಣ್ಮುಚ್ಚಿದರೂ ಗುಂಡಿಗೆ ಬೀಳುವ ಅಪಾಯ ಇದೆ. ಮಾಸ್ಕ್ ಧರಿಸಿದ್ದರೂ ದೂಳಿನ ಕಣಗಳ ಗಂಟಲು ಸೇರುವುದನ್ನು ತಪ್ಪಿಸಲು ಆಗುವುದಿಲ್ಲ.

ಸ್ವಲ್ಪ ದೂರ ಮುಂದೆ ಸಾಗಿದರೆ ಜಲಮಂಡಳಿ ತೋಡಿರುವ ಗುಂಡಿಯೊಂದು ಎದುರಾಗುತ್ತದೆ. ಮಲ್ಲಸಂದ್ರದ ಆನಂದ್ ಎಂಬ ದ್ಚಿಚಕ್ರ ವಾಹನ ಸವಾರ ಸೆ.18ರ ರಾತ್ರಿ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದರು. ರಸ್ತೆ ಮಧ್ಯದಲ್ಲಿ ಇದ್ದ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್ ದುರಸ್ತಿಪಡಿಸಲು ಆಳುದ್ದದ ಗುಂಡಿ ತೆಗೆಯಲಾಗಿತ್ತು. ಸುತ್ತಲು ನಾಲ್ಕು ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿತ್ತು. ರಾತ್ರಿ ವೇಗವಾಗಿ ಬಂದ ಆನಂದ್‌ ಅವರಿಗೆ ಗುಂಡಿ ಕಾಣಿಸದೆ ಅದರೊಳಗೆ ಬಿದ್ದು ಮೃತಪಟ್ಟಿದ್ದರು.

ಅಂದಿನಿಂದ ಇಂದಿನವರೆಗೆ ದುರಸ್ತಿ ಕಾಮಗಾರಿ ಅಲ್ಲಿಯೇ ನಿಂತಿದೆ. ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆಯೇ ಹೊರತು ಗುಂಡಿ ಮುಚ್ಚುವ ಕೆಲಸ ಆಗಿಲ್ಲ. ಬಿಬಿಎಂಪಿಯ ಪ್ರಮುಖ ರಸ್ತೆಗಳ ವಿಭಾಗ ಈ ರಸ್ತೆ ನಿರ್ವಹಣೆ ಜವಾಬ್ದಾರಿ ಹೊತ್ತಿದೆ. ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡರೂ ಎಚ್ಚೆತ್ತುಕೊಳ್ಳದೆ ಜಲಮಂಡಳಿ ಮತ್ತು ಬಿಬಿಎಂಪಿ ಬೇಜವಾಬ್ದಾರಿ ವಹಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನಗರದ ಪ್ರಮುಖ ರಸ್ತೆಯ ಸ್ಥಿತಿಯೇ ಹೀಗಾಗಿದೆ. ದಿನವೂ ದೂಳು ಕುಡಿಯುತ್ತಿರುವುರಿಂದ ರಸ್ತೆ ಬದಿಯಲ್ಲಿ ಇರುವ ಮನೆ, ಅಂಗಡಿಯವರಿಗೆ, ವಾಹನ ಸವಾರರಿಗೆ ಆಸ್ತಮಾ ಕಾಣಿಸಿಕೊಳ್ಳುತ್ತಿದೆ. ರಸ್ತೆ ಗುಂಡಿಯಲ್ಲಿ ಬಿದ್ದು ಜನ ಸತ್ತರೂ ಸರಿಪಡಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂದರೆ ಜನರ ಜೀವಕ್ಕೆ ಬೆಲೆಯೇ ಇಲ್ಲವೇ’ ಎಂದು ಸ್ಥಳೀಯರು ಹಿಡಿಶಾಪ ಹಾಕಿದರು.

110 ಹಳ್ಳಿಯಲ್ಲಿ ಮಂಡಿಯುದ್ದ ಗುಂಡಿ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಮಂಡಿಯುದ್ದ ಗುಂಡಿಗಳಿದ್ದು, ಸಂಚಾರವೇ ದುಸ್ತರವಾಗಿದೆ.

ಅಬ್ಬಿಗೆರೆ, ಮೇದರಹಳ್ಳಿ, ಶೆಟ್ಟಿಹಳ್ಳಿ, ವಿನಾಯಕ ಲೇಔಟ್‌ನಲ್ಲಿ ಸಂಚಾರಕ್ಕೆ ಸಾಧ್ಯವಾಗದಷ್ಟು ರಸ್ತೆಗಳು ಹಾಳಾಗಿವೆ. ಒಂದೆಡೆ ರಸ್ತೆಯ ಮಧ್ಯದಲ್ಲೇ ಗುಂಡಿಗಳಿದ್ದರೆ, ಇನ್ನೊಂದೆಡೆ ಜಲಮಂಡಳಿ ಪೈಪ್‌ಗಳನ್ನು ರಸ್ತೆ ಮಧ್ಯದಲ್ಲೇ ಬಿಟ್ಟು ಹೋಗಿದೆ.

ಹೆಸರಘಟ್ಟ ರಸ್ತೆಯಿಂದ ಮಲ್ಲಸಂದ್ರಕ್ಕೆ ಹೋಗುವ ಮುಖ್ಯ ರಸ್ತೆ ಕೂಡ ತೀರಾ ಹದಗಟ್ಟಿದ್ದು, ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದೇ ಸಾಹಸ ಎಂಬಂತಾಗಿದೆ.

ಎಂಜಿನಿಯರ್ ವಿರುದ್ಧ ಎಫ್‌ಐಆರ್: ಎಚ್ಚರಿಕೆ

‘ಬಿಬಿಎಂಪಿ ರಸ್ತೆಗಳನ್ನು ಜಲ ಮಂಡಳಿಯವರು ಅನುಮತಿ ಪಡೆಯದೆಎಲ್ಲೆಂದರೆಲ್ಲಿ ಅಗೆಯುತ್ತಾರೆ. ಇದರಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಅವಘಡ ಮರುಕಳಿಸಿದರೆ ಜಲ ಮಂಡಳಿ ಎಂಜಿನಿಯರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಬಿಬಿಎಂಪಿ ಜಂಟಿ ಆಯುಕ್ತ(ದಾಸರಹಳ್ಳಿ) ನರಸಿಂಹಮೂರ್ತಿ ಎಚ್ಚರಿಸಿದರು.

‘ಬಿಬಿಎಂಪಿ ಅನುಮತಿ ಪಡೆದೇ ಕಾಮಗಾರಿ ನಿರ್ವಹಿಸಬೇಕು ಎಂದು ಜಲ ಮಂಡಳಿಗೆ ತಿಳಿಸಲಾಗಿದೆ. ಕಡೆ ಪಕ್ಷ ಮಾಹಿತಿಯನ್ನಾದರೂ ನೀಡಿದರೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು. ಅದನ್ನೂ ಮಾಡದೆ ರಸ್ತೆ ಅಗೆದು ಬಿಟ್ಟು ಹೋದರೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಹದಗೆಟ್ಟ ರಸ್ತೆ ಎಂಬ ಫಲಕ: ಪ್ರಹ್ಲಾದ್

‘ಸತತ ಮಳೆ ಸುರಿಯುತ್ತಿರುವುದರಿಂದ ದುರಸ್ತಿ ಸಾಧ್ಯವಾಗುತ್ತಿಲ್ಲ. ರಸ್ತೆ ಹದಗೆಟ್ಟಿರುವ ಬಗ್ಗೆ ಸವಾರರಿಗೆ ಮನವರಿಕೆ ಮಾಡಿಸಲು ಫಲಕ ಅಳವಡಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌(ಮುಖ್ಯ ರಸ್ತೆ) ಬಿ.ಎಸ್. ಪ್ರಹ್ಲಾದ್ ತಿಳಿಸಿದರು.

‘ಮಳೆ ನಡುವೆ ಕಾಮಗಾರಿ ನಿರ್ವಹಿಸಿದರೆ ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಹಾಳಾಗಲಿದೆ. 15 ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಬಳಿಕವೇ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT