ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬಿಸಿಲಿನಲ್ಲಿ ಕಾಯುವ ಶಿಕ್ಷೆ !

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಿಧಾನಗತಿ
Last Updated 5 ಮಾರ್ಚ್ 2021, 3:46 IST
ಅಕ್ಷರ ಗಾತ್ರ

ಹೆಸರಘಟ್ಟ: ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಮುಂದಾಗಿದ್ದು, ನೂರಾರು ಟ್ರ್ಯಾಕ್ಟರ್‌ಗಳಲ್ಲಿ ರೈತರು ರಾಗಿ ಹೊತ್ತು ತರುತ್ತಿದ್ದಾರೆ. ಆದರೆ, ಅಧಿಕಾರಿಗಳು ದಿನಕ್ಕೆ ಐದರಿಂದ ಆರು ಟ್ರ್ಯಾಕ್ಟರ್‌ನಷ್ಟು ರಾಗಿ ಮಾತ್ರ ಖರೀದಿಸುತ್ತಿದ್ದು, ರೈತರು ಬಿಸಿಲಿನಲ್ಲಿಯೇ ದಿನಗಟ್ಟಲೇ ಕಾಯಬೇಕಾಗಿದೆ.

‘ಕುರುಬರಹಳ್ಳಿ ಗ್ರಾಮದಲ್ಲಿ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಅಧಿಕಾರಿಗಳು ಬೆಳಿಗ್ಗೆ ಹತ್ತಕ್ಕೆ ಬಂದು, ಸಂಜೆ ಐದು ಗಂಟೆಗೆಲ್ಲ ಹೋಗುತ್ತಾರೆ. ದಿನಕ್ಕೆ ಐದಾರು ಟ್ರ್ಯಾಕ್ಟರ್‌ ರಾಗಿ ಮಾತ್ರ ತೂಕಕ್ಕೆ ಹಾಕುತ್ತಾರೆ. ಹೆಚ್ಚು ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೆಸರಘಟ್ಟ ವಲಯದ ಅಧ್ಯಕ್ಷ ಎಸ್.ಜಯಣ್ಣ ಒತ್ತಾಯಿಸಿದರು.

‘ಹೋಬಳಿಯ ಶಾನುಭೋಗನಹಳ್ಳಿ, ಕಾಕೋಳು, ರಾಜಾನುಕುಂಟೆ, ಮತ್ಕೂರು, ದಿಬ್ಬೂರು ಗ್ರಾಮಗಳಿಂದ ರೈತರು ರಾಗಿ ತರುತ್ತಿದ್ದು, ಒಂದು ದಿನಕ್ಕೆ ಟ್ರ್ಯಾಕ್ಟರ್‌ ಬಾಡಿಗೆಯೇ ₹2,000 ಇದೆ. ಆ ದಿನ ಅವರ ಸರದಿ ಬಾರದಿದ್ದರೆ ಟ್ರ್ಯಾಕ್ಟರ್‌ ಬಾಡಿಗೆಯೂ ಹೆಚ್ಚಾಗುತ್ತದೆ. ಬೆಂಬಲ ಬೆಲೆಯಲ್ಲಿ ಶೇಕಡಾ ಕಾಲುಭಾಗದಷ್ಟು ಟ್ಯಾಕ್ಟರ್ ಬಾಡಿಗೆಗೇ ಹೋದರೆ, ರೈತರಿಗೆ ಲಾಭ ಸಿಗುವುದೇ ಇಲ್ಲ’ ಎಂದು ಅವರು ಹೇಳಿದರು.

‘ನಾನು ರಾಗಿ ತಂದು ಎರಡು ದಿನ ಆಯಿತು. ಹತ್ತು ಕ್ವಿಂಟಲ್ ರಾಗಿ ಇದೆ. ಟ್ಯಾಕ್ಟರ್ ಅನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಇಲ್ಲೇ ಉಳಿದಿದ್ದೇವೆ. ಕುಡಿಯಲು, ಮುಖ ತೊಳೆಯಲು ಕೂಡ ನೀರಿಲ್ಲ’ ಎಂದು ರಾಜಾನುಕುಂಟೆ ಗ್ರಾಮದ ರೈತ ಚಂದ್ರಶೇಖರ್ ಅಳಲು ತೊಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT