ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಪ್ಪಿತಸ್ಥ ಅಧಿಕಾರಿಗಳು ಮೈ ತೊಳೆದ ಎತ್ತುಗಳು’

ಅಕ್ರಮ ಕಟ್ಟಡ: ಕೆಎಂಸಿ ಕಾಯ್ದೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ವಿವರವೇ ಇಲ್ಲ!
Last Updated 16 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಹೊಣೆಗಾರರಾಗುವ ಎಂಜಿನಿಯರ್‌ಗಳನ್ನು ಮೈ ತೊಳೆದ ಎತ್ತುಗಳಂತೆ ಶಿಕ್ಷೆ ವಿಧಿಸದೆ ಬಿಡಲಾಗುತ್ತಿದೆ’ ಎಂಬ ಮನವಿಯನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

ಇದರ ಪರಿಣಾಮ ಎಂಬಂತೆ ‘ತಪ್ಪಿತಸ್ಥ ಎಂಜಿನಿಯರ್‌ಗಳಿಗೆ ಮತ್ತು ಅಧಿಕಾರಿಗಳಿಗೆ ಎಂತಹ ದಂಡನೀಯ ಶಿಕ್ಷೆ ವಿಧಿಸಬೇಕು ಎಂಬ ಮಾರ್ಗಸೂಚಿಗಳ ಅಧಿಸೂಚನೆಯನ್ನು ಆಗಸ್ಟ್‌ 8ರ ವಿಚಾರಣೆ ವೇಳೆಗೆ ಕೋರ್ಟ್‌ಗೆ ಪ್ರಸ್ತುಪಡಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಅವರು ಕಳೆದ ತಿಂಗಳ 7ರಂದು ಖಡಕ್‌ ತಾಕೀತು ಮಾಡಿದ್ದಾರೆ.

‘ಖಾಸಗಿ ಸ್ವತ್ತುಗಳಲ್ಲಿ ಕಟ್ಟಡ ಬೈ–ಲಾಗಳಿಗೆ ವಿರುದ್ಧವಾಗಿ ಕಟ್ಟಡ ನಿರ್ಮಿಸಲು ಅವಕಾಶ ಕಲ್ಪಿಸಿಕೊಡುವ ಅಧಿಕಾರಿಗಳಿಗೆ ಕಾನೂನು ಪ್ರಕಾರ ದಂಡನೀಯ ಶಿಕ್ಷೆ ವಿಧಿಸುವ ಬಗ್ಗೆ ಕೆಎಂಸಿ ಕಾಯ್ದೆಯಲ್ಲಿ ನಿರ್ದಿಷ್ಟವಾದ ಮಾರ್ಗಸೂಚಿಗಳಿಲ್ಲ’ ಎಂದು ಆಕ್ಷೇಪಿಸಿ ಹೈಕೋರ್ಟ್‌ ವಕೀಲರೂ ಆದ ಎಸ್‌.ಉಮಾಪತಿ 2018ರ ಸೆಪ್ಟೆಂಬರ್‌ 11ರಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

‘ಈ ಅರ್ಜಿ ವಿಚಾರಣೆ ಬಂದಾಗಲೆಲ್ಲಾ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ನ್ಯಾಯಪೀಠವು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದಂತೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೂ ಮಾರ್ಗಸೂಚಿ ರಚನೆಯಾಗಿಲ್ಲ. ಏತನ್ಮಧ್ಯೆ ಬಿಬಿಎಂಪಿ ಪ್ರದೇಶಗಳು ಇನ್ನಿಲ್ಲದ ನಾಗರಿಕ ಸಮಸ್ಯೆಗಳಿಂದ ಬಸವಳಿಯುತ್ತಿದ್ದು, ಕಟ್ಟಡ ಕುಸಿತದ ದುರಂತಗಳು ಹೆಚ್ಚುತ್ತಿವೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಅರ್ಜಿದಾರ ಉಮಾಪತಿ.

‘ತಪ್ಪಿತಸ್ಥ ಎಂಜಿನಿಯರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸಲು ಕರ್ನಾಟಕ ಪೌರಾಡಳಿತ ಕಾಯ್ದೆ-1976ಕ್ಕೆ ತಿದ್ದುಪಡಿ ತರಲಾಗಿದೆ. ಆದರೆ, ಶಿಕ್ಷೆ ಏನಿರಬೇಕು, ಹೇಗಿರಬೇಕು ಎಂಬ ಬಗ್ಗೆ ಈವರೆಗೆ ಮಾರ್ಗಸೂಚಿ ರಚನೆ ಮಾಡಿಲ್ಲ. ಕಳೆದ 11 ವರ್ಷಗಳಿಂದ ಯಾವೊಬ್ಬ ಅಧಿಕಾರಿಗೂ ಈತನಕ ಶಿಕ್ಷೆ ಆಗಿಲ್ಲ’ ಎಂಬುದು ಉಮಾಪತಿ ಅವರ ದೂರು.

ಕಾಯ್ದೆ ಏನು ಹೇಳುತ್ತದೆ? :

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಮತ್ತು ಪರವಾನಗಿ ಇಲ್ಲದೇ ನಿರ್ಮಿಸುವ ಕಟ್ಟಡಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೌರಾಡಳಿತ ಕಾಯ್ದೆ–1976ಕ್ಕೆ ತಿದ್ದುಪಡಿ ತರುವ ಮೂಲಕ 2007ರಲ್ಲಿ 321 ಬಿ ಕಲಂ ಅನ್ನು ಸೇರ್ಪಡೆ ಮಾಡಲಾಯಿತು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಮತ್ತು ಪರವಾನಗಿ ಇಲ್ಲದ ಕಟ್ಟಡಗಳನ್ನು ನಿರ್ಮಿಸುವುದನ್ನು ಅಧಿಕಾರಿಗಳು ನಿಯಂತ್ರಣ ಮಾಡುತ್ತಿಲ್ಲ. ಈತನಕ ಕಾಯ್ದೆಗೆ ತರಲಾದ ತಿದ್ದುಪಡಿ ಅನುಸಾರ ತಪ್ಪಿತಸ್ಥ ಅಧಿಕಾರಿಗಳಿಗೆ ಯಾವ್ಯಾವ ಶಿಕ್ಷೆ ನೀಡಬೇಕು ಎಂಬುದರ ಸ್ಪಷ್ಟ ನಿರ್ದೇಶನವಿಲ್ಲ. ಇದು ರಾಜ್ಯದ ಸ್ಥಳೀಯ ಸಂಸ್ಥೆಗಳ ತಪ್ಪು ಒಪ್ಪುಗಳಿಗೆ ಜವಾಬ್ದಾರಿಯಾಗಬೇಕಾದ ನಗರಾಭಿವೃದ್ಧಿ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿ’ ಎಂಬುದು ಅರ್ಜಿದಾರರ ಆರೋಪ.

‘ಈ ವಿಷಯವನ್ನು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲಾಯಿತು. ವಿಷಯದ ಗಂಭೀರತೆಯನ್ನು ಖುದ್ದು ಭೇಟಿ ಮನವರಿಕೆ ಮಾಡಿಕೊಡಲಾಯಿತು. ಅಂತೆಯೇ ಮನವಿಯನ್ನೂ ನೀಡಲಾಯಿತು. ಇಲಾಖೆ ಈತನಕ ತನ್ನ ಭರವಸೆಯನ್ನು ಈಡೇರಿಸಿಲ್ಲ. ಇದರಿಂದಾಗಿ ನಾಗರಿಕರ ಮೂಲಭೂತ ಹಕ್ಕುಗಳಾದ 14 ಮತ್ತು 21ರ ಉಲ್ಲಂಘನೆಯಾಗಿದೆ’ ಎಂಬುದು ಆಕ್ಷೇಪ.

‘ಸರ್ಕಾರದ ಪರಿಶೀಲನೆಯಲ್ಲಿದೆ’

‘ಈ ಹಿಂದೆ ನಿಯಮ ರೂಪಿಸಿ ಕೋರ್ಟ್‌ಗೆ ಅದನ್ನು ಸಲ್ಲಿಸಲಾಗಿತ್ತು. ಆದರೆ, ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ವಾಪಸು ಪಡೆಯಲಾಗಿದ್ದು ಇನ್ನೊಮ್ಮೆ ಸಲ್ಲಿಸಲಾಗುವುದು’ ಎಂದು ಹೈಕೋರ್ಟ್‌ನಲ್ಲಿ ಸರ್ಕಾರದ ಪರ ವಕೀಲ ಡಿ.ನಾಗರಾಜ್‌ ಹೇಳುತ್ತಾರೆ.

‘ಬಹಳಷ್ಟು ಅಧಿಕಾರಿಗಳು ತಮಗೆ ಯಾವುದೇ ಹೊಣೆಗಾರಿಕೆ ಇಲ್ಲವೆಂಬಂತೆ ವರ್ತಿಸುತ್ತಾರೆ. ಕಟ್ಟಡ ನಿರ್ಮಾಣ ಮಾಡುವುವರು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದ ನಕ್ಷೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಮೂರು ಮಹಡಿಗೆ ಪರವಾನಗಿ ಇದ್ದರೆ ನಾಲ್ಕು ಮಹಡಿ ಕಟ್ಟುತ್ತಾರೆ. ಹೀಗಾದರೆ ಕಟ್ಟಡ ಬೈ–ಲಾದ ಉದ್ದೇಶವಾದರೂ ಏನು’ ಎಂದು ಅವರು ಪ್ರಶ್ನಿಸುತ್ತಾರೆ.

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯವಾಗಲಿ’

‘ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವ ಅಧಿಕಾರವನ್ನು ಬಿಎಂಟಿಎಫ್‌ಗೆ ನೀಡಬೇಕು’ ಎಂಬುದು ಅರ್ಜಿದಾರ ಉಮಾಪತಿ ಅವರ ಅಭಿಪ್ರಾಯ.

‘ದುರಂತಕ್ಕೆ ಒಳಗಾಗುವ ಪ್ರಕರಣಗಳಲ್ಲಿ ಕಟ್ಟಡ ವಿನ್ಯಾಸ ಮಾಡಿಕೊಡುವ ವಾಸ್ತುಶಿಲ್ಪಿಗಳ ಪರವಾನಗಿ ರದ್ದುಪಡಿಸಬೇಕು. ಐಪಿಸಿ, ಕೆಎಂಸಿ ಕಾಯ್ದೆಯೆ ಜೊತೆಜೊತೆಗೇ ಎಂಜಿನಿಯರ್‌ಗಳನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಯಡಿ ಶಿಕ್ಷಿಸಲು ಅವಕಾಶ ಕಲ್ಪಿಸಬೇಕು’ ಎಂದು ಅವರು ಹೇಳುತ್ತಾರೆ.

***

ಅರ್ಜಿಯ ಪ್ರಮುಖ ಅಂಶಗಳು

* ರಾಜ್ಯ ಸರ್ಕಾರ 1975ರಲ್ಲಿ ಕರ್ನಾಟಕ ಪೌರಾಡಳಿತ (ಕೆಎಂಸಿ) ಕಾಯ್ದೆಯನ್ನು ಜಾರಿಗೆ ತಂದಿತು.

* 2007ರ ಸೆಪ್ಟೆಂಬರ್ 15: ಕೆಎಂಸಿ ಕಾಯ್ದೆ–1976ಕ್ಕೆ ತಿದ್ದುಪಡಿ ತರುವ ಮೂಲಕ ಕಲಂ 321ಎ ಮತ್ತು 321 ಬಿ ಸೇರ್ಪಡೆ ಮಾಡಲಾಯಿತು.

* 2013ರ ಅಕ್ಟೋಬರ್‌ 10: ಭಾರತೀಯ ದಂಡ ಸಂಹಿತೆ (ಐಪಿಸಿ) ಹಾಗೂ 321 ಬಿ ಅನ್ವಯ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣಗಳನ್ನು ಹೈಕೋರ್ಟ್‌ ವಜಾ ಮಾಡಿತು. ಬಿಎಂಟಿಎಫ್‌ಗೆ ಅಧಿಕಾರಿಗಳ ವಿರುದ್ಧ ಈ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲು ಅಧಿಕಾರವಿಲ್ಲ ಎಂಬುದ ಅರ್ಜಿದಾರರ ವಾದವಾಗಿತ್ತು.

* 2014ರ ಸೆಪ್ಟೆಂಬರ್‌ 12: ಇದೇ ರೀತಿಯ ಎಫ್‌ಐಆರ್‌ಗಳನ್ನು ಮತ್ತೊಂದು ಪ್ರಕರಣದಲ್ಲಿ ಹೈಕೋರ್ಟ್‌ ವಜಾಗೊಳಿಸಿತು.

* 2016ರ ಆಗಸ್ಟ್‌ 9: ಕೆಎಂಸಿ ಕಾಯ್ದೆಯ ಅನುಸಾರ ಕಲಂ 321–ಬಿ ಅಡಿಯಲ್ಲಿ ಯಾವುದೇ ಶಿಕ್ಷೆಯನ್ನು ನಿಖರವಾಗಿ ವಿವರಿಸಿಲ್ಲ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

* 2018ರ ಜೂನ್‌ 25: ಕೆಎಂಸಿ ಕಾಯ್ದೆಯ ಕಲಂ 321 ಬಿ ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂಬ ಹೈಕೋರ್ಟ್‌ ಆದೇಶವನ್ನು ಪಾಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT