ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ಗಳನ್ನೇ ಬದಲಿಸಬೇಕಾದೀತು: ಬಿಬಿಎಂಪಿಗೆ ಹೈಕೋರ್ಟ್ ಖಡಕ್‌ ಎಚ್ಚರಿಕೆ

Last Updated 6 ಮಾರ್ಚ್ 2022, 2:46 IST
ಅಕ್ಷರ ಗಾತ್ರ

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ವಿಳಂಬ ಮಾಡುತ್ತಿರುವ ಪಾಲಿಕೆ ಎಂಜನಿಯರ್‌ಗಳು ಉದ್ದೇಶಪೂರ್ವಕವಾಗಿಯೇ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಇವರು ಇದೇ ರೀತಿ ನಡೆದುಕೊಂಡರೆ ಎಂಜಿನಿಯರ್‌ಗಳನ್ನೇ ಬದಲಿಸಲು ಸರ್ಕಾರಕ್ಕೆ ಸೂಚಿಸುತ್ತೇವೆ’ ಎಂದು ಬಿಬಿಎಂಪಿಗೆ ಹೈಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ.

ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ 2015ರಲ್ಲಿ ವಿಜಯನ್ ಮೆನನ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹಾಜರಿದ್ದ ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ, ‘ಹೈಕೋರ್ಟ್ ಆದೇಶದಂತೆ ತ್ವರಿತವಾಗಿ ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ. ರಸ್ತೆ ಗುಮಟ್ಟದಲ್ಲಿ ರಾಜಿ‌ ಮಾಡಿಕೊಳ್ಳುವುದಿಲ್ಲ. ಸದ್ಯ ನಗರದ 182 ರಸ್ತೆಗಳನ್ನು ಪೈಥಾನ್ ಯಂತ್ರ ಬಳಸಿ ದುರಸ್ತಿ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ಹೆಚ್ಚಿರುವ ಕಡೆ ಪೈಥಾನ್ ಯಂತ್ರ ಬಳಸಲಾಗುತ್ತಿದೆ. ಹೊಸ ಟೆಂಡರ್‌ಗೆ ಯಾರೂ ಬಿಡ್ ಸಲ್ಲಿಸಿಲ್ಲ‌.‌ ಹೀಗಾಗಿ, ಪೈಥಾನ್ ಯಂತ್ರಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ,‘ಇನ್ನೂ ಏಕೆ ನೀವು ರಸ್ತೆ ಗುಂಡಿಗಳ ಸಮಸ್ಯೆ ಬಗೆಹರಿಸಿಲ್ಲ. ಸಾವಿರಾರು ಕೋಟಿ ರೂಪಾಯಿ ಸುರಿದರೂ ರಸ್ತೆಗಳು ಸರಿಯಾಗುತ್ತಿಲ್ಲ‌. ಈವಿಚಾರದಲ್ಲಿ ತಡ ಮಾಡುವುದನ್ನು ಸಹಿಸಲಾಗದು’ ಎಂದು ಎಚ್ಚರಿಸಿತು.

‘ರಸ್ತೆ ಗುಂಡಿ ಮುಚ್ಚಲು ಉತ್ತಮ ತಂತ್ರಜ್ಞಾನ ಬಳಸಿ. ಬರೀ ಕಣ್ಣೊರೆಸುವ ತಂತ್ರ ನಡೆಯುವುದಿಲ್ಲ’ ಎಂದು ಹೇಳಿರುವ ನ್ಯಾಯಪೀಠ, ಪೈಥಾನ್ ಯಂತ್ರ ಬಳಕೆಗೆ ಸಂಬಂಧಿಸಿದಂತೆ ಮಾರ್ಚ್ 15ರೊಳಗೆ ಕ್ರಿಯಾ ಯೋಜನೆ ರೂಪಿಸಿದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT