ಬುಧವಾರ, ಮೇ 12, 2021
20 °C
ಟ್ವೀಟರ್‌ನಲ್ಲಿ ಆಕ್ರೋಶ

ಸದ್ದು ಮಾಡುತ್ತಿದೆ ಹಿಂದಿ ಕಟೌಟ್‌; ನಾಡು, ರಾಜಕೀಯ, ಧರ್ಮದ ಆಯಾಮ ಪಡೆದ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈನ ಸಮುದಾಯದವರ ‘ಗಣೇಶ್‌ ಬಾಗ್’ ಕಟ್ಟಡದ ಪ್ರವೇಶದ್ವಾರದಲ್ಲಿ ಹಾಕಿದ್ದ ‘ಹಿಂದಿ’ ಕಟೌಟ್‌ ಕಿತ್ತು ಹಾಕಿರುವ ಪ್ರಕರಣವೀಗ ನಾಡು, ಧರ್ಮ, ರಾಜಕೀಯದ ಆಯಾಮಗಳನ್ನು ಪಡೆದುಕೊಂಡು ದೊಡ್ಡ ಸದ್ದು ಮಾಡುತ್ತಿದೆ.

ಕಟೌಟ್ ಕಿತ್ತು ಹಾಕಿದ ಆರೋಪದಡಿ ಕಮರ್ಷಿಯಲ್ ಸ್ಟ್ರೀಟ್‌ ಪೊಲೀಸರು, ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಆರು ಕಾರ್ಯಕರ್ತರನ್ನು ಬಂಧಿಸಿದ್ದಕ್ಕೂ ಪರ– ವಿರೋಧ ವ್ಯಕ್ತವಾಗುತ್ತಿದೆ.

ಕೃತ್ಯವನ್ನು ಖಂಡಿಸಿದ್ದ ಸಂಸದ ತೇಜಸ್ವಿ ಸೂರ್ಯ, ‘ಹಿಂದಿ ಬ್ಯಾನರ್ ವಿಷಯವಾಗಿ ಕೆಲ ರೌಡಿಗಳು, ಜೈನ ಸಹೋದರರ ಮೇಲೆ ದಾಳಿ ಮಾಡಿದ್ದಕ್ಕೆ ತುಂಬಾ ನೋವಾಗಿದೆ. ಅವರೇಕೆ ಬೆಂಗಳೂರಿನಲ್ಲಿ ಉರ್ದು ಬಳಸುವುದನ್ನು ಪ್ರಶ್ನಿಸುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದರು.

ಇದರಿಂದ ಕೆಂಡಾಮಂಡಲರಾಗಿರುವ ಹಲವರು, ಮರು ಟ್ವೀಟ್ ಮಾಡುವ ಮೂಲಕ ತಮ್ಮದೇ ಧಾಟಿಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು, ‘ಹಿಂದಿ ಕಟೌಟ್‌ ಕಿತ್ತವರಿಗೆ ನೀವೇ ತಕ್ಕ ಶಿಕ್ಷೆ ಕೊಡಿಸಬೇಕು’ ಎಂದೂ ಒತ್ತಾಯಿಸಿದ್ದಾರೆ.

ಧರ್ಮ ಎಳೆದು ತಂದಿದ್ದಕ್ಕೆ ಆಕ್ರೋಶ: ‘ತೇಜಸ್ವಿ ಸೂರ್ಯ ಅವರು ಟ್ವೀಟ್‌ನಲ್ಲಿ ಧರ್ಮವನ್ನು ಎಳೆದು ತಂದಿದ್ದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೆಲ ನೆಟ್ಟಿಗರು, ‘ಇದು ಧರ್ಮದ ವಿಚಾರವಾಗಿ ನಡೆದ ಘಟನೆಯಲ್ಲ. ಕೇವಲ ನಾಮಫಲಕದ ವಿಚಾರ. ಇದರಲ್ಲಿ ಧರ್ಮ, ರಾಜಕೀಯವನ್ನು ಎಳೆದು ತರಬಾರದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧ’

‘ನಮ್ಮ ಸರ್ಕಾರ ಕನ್ನಡ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಬದ್ಧವಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

‘ಹಿಂದಿ’ ಕಟೌಟ್ ಕಿತ್ತು ಹಾಕಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ‘ನಿನ್ನೆ ನಡೆದ ಘಟನೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಕನ್ನಡ ಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದಿದ್ದಾರೆ.

’ನಾನು ರೈತರ ಪರ ಇರುವುದು ಎಷ್ಟು ಸತ್ಯವೋ, ಕನ್ನಡಿಗರ ಪರ ಇರುವುದೂ ಅಷ್ಟೇ ಸತ್ಯ. ‘ಸರ್ವೇಜನಾಃ ಸುಖಿನೋಭವಂತು’ ಎನ್ನುವುದೇ ನನ್ನ ಮೂಲಮಂತ್ರ’ ಎಂದು ಹೇಳಿದ್ದಾರೆ.

ಜಾಮೀನು ಮಂಜೂರು

‘ಹಿಂದಿ’ ಕಟೌಟ್ ಕಿತ್ತು ಹಾಕಿದ್ದ ಆರೋಪದಡಿ ಬಂಧಿಸಲಾಗಿದ್ದ ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಆರು ಕಾರ್ಯಕರ್ತರಿಗೆ ನಗರದ 43ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

‘ಬಾಂಡ್ ಹಾಗೂ ನಗದು ಶ್ಯೂರಿಟಿ ನೀಡಬೇಕೆಂಬ ಷರತ್ತಿನನ್ವಯ ಜಾಮೀನು ಮಂಜೂರು ಆಗಿದೆ’ ಎಂದು ಆರೋಪಿಗಳ ಪರ ವಕೀಲ ಸೂರ್ಯ ಮುಕುಂದರಾಜು ತಿಳಿಸಿದರು.

‘ಕಟ್ಟಾಳು ಕೆಲಸವೆಂದು ಬಿಂಬಿಸಲು ಪಿತೂರಿ’

ಪ್ರಕರಣದ ಬಗ್ಗೆ ‘ಫೇಸ್‌ಬುಕ್‌’ ಖಾತೆಯಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ಡಿ.ವಿ. ಸಂದಾನಂದಗೌಡ, ‘ಕೆಲ ಕಿಡಿಗೇಡಿಗಳು ಮಾಡಿದ ಈ ದುಷ್ಕೃತ್ಯವನ್ನು ಕನ್ನಡದ ಕಟ್ಟಾಳುಗಳ ಕೆಲಸ ಎಂದು ಬಿಂಬಿಸುವ ಪಿತೂರಿ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಫಲಕ ಕಿತ್ತುಹಾಕಿರುವ ಘಟನೆಯನ್ನು ಭಾಷಾ ಸಂಘರ್ಷವಾಗಿ ಬದಲಾಯಿಸಿ ರಾಜಕೀಯ ಬೇಳೆ ಬೇಯಿಸಿಕ್ಕೊಳ್ಳುತ್ತಿರುವ ಕೈ ಯಾರದ್ದೆಂದು ತಿಳಿದಿದೆ’ ಎಂದಿದ್ದಾರೆ.

‘ಶಾಂತಿ ಪ್ರಿಯ ಜೈನ ಸಮುದಾಯದ ಮೇಲೆ ನಡೆಸಿದ ನೈತಿಕ ದಾಳಿ ಎಷ್ಟು ಸರಿ? ಅವರ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ್ದು ಎಷ್ಟು ಸರಿ? ಹಿಂದಿ ಭಾಷೆಯ ನಾಮಫಲಕ ಹಾಕಿದ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿ ಗಮನ ಸೆಳೆಯಬೇಕಿತ್ತು. ಕನ್ನಡದ ವಿಷಯದಲ್ಲಿ ಕನ್ನಡಿಗರ ಮಾತನ್ನು ಧಿಕ್ಕರಿಸುವ ಮನಸ್ಥಿತಿ, ಧೈರ್ಯ ಯಾರಿಗಾದರೂ ಕರ್ನಾಟಕದಲ್ಲಿ ಇದೆಯಾ’ ಎಂದು ಪ್ರಶ್ನಿಸಿದ್ದಾರೆ.

ಹೋರಾಟಗಾರರ ಬಿಡುಗಡೆಗೆ ಆಗ್ರಹ

ಕನ್ನಡ ಹೋರಾಟಕ್ಕೆ ಧರ್ಮ ಮತ್ತು ರಾಜಕೀಯದ ಬಣ್ಣ ಬಳಿದು ಪೊಲೀಸರ ಮೂಲಕ ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ನಡೆ ಖಂಡನೀಯ. ಬಂಧಿತ ಕನ್ನಡ ಹೋರಾಟಗಾರರನ್ನು ರಾಜ್ಯ ಸರ್ಕಾರ ತಕ್ಷಣೆ ಬಿಡುಗಡೆಗೊಳಿಸಬೇಕು.

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

* ‘ಸ್ವಾಮಿಗಳೇ, ಕನ್ನಡ ನಾಡಿಗೆ ವಲಸೆ ಬಂದ ಈ ಜನ ಕನ್ನಡಿಗರ ಜೊತೆ ಒಂದಾಗಿ ಕನ್ನಡ ಕಲಿತು ಬಾಳುವುದನ್ನು ಬಿಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿದ ಕನ್ನಡ ಹೋರಾಟಗಾರರನ್ನೇ ರೌಡಿಗಳು ಅಂತೀರಲ್ಲ’

ಎಸ್‌.ಕೀರ್ತಿಕುಮಾರ್‌

* ‘ಮಾನ್ಯ ಸಂಸದರೇ, ಕನ್ನಡಿಗರು ಏನೇ ಕೇಳಿದರೂ ಉರ್ದುವನ್ನು ಏಕೆ ಮಧ್ಯದಲ್ಲಿ ತರುತ್ತೀರಾ’

-ಕಿರಣ್

* ‘ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಪಕ್ಷದ ಸರ್ಕಾರವಿದೆ. ತಾಕತ್ತು ಇದ್ದರೆ, ಉರ್ದು ನಾಮಫಲಕಗಳನ್ನು ತೆಗೆಸಿ ನೋಡೋಣ’

-ಎಸ್‌. ರವಿನಾಥ್

* ‘ಉರ್ದು, ಕರ್ನಾಟಕದ ಮಣ್ಣಲ್ಲಿ‌ ಬೆರೆತ ಭಾಷೆ. ಹಿಂದಿ‌ ಕರ್ನಾಟಕದಲ್ಲಿ ಮೆರೆಯುವ ಕನಸು ಹೊತ್ತುಕೊಂಡು ಬಂದ ಭಾಷೆ. ಧರ್ಮವನ್ನು, ಅದರಲ್ಲೂ
ಮುಸ್ಲಿಮರನ್ನು ಎದುರಿಟ್ಟುಕೊಂಡು‌ ಇಲ್ಲಿ‌ಯ ಕನ್ನಡಿಗರನ್ನು ಪರಸ್ಪರ ಶತ್ರುಗಳನ್ನಾಗಿಸುವ ಪ್ರಯತ್ನ ಕೆಲ ಸ್ವಾರ್ಥಿಗಳಿಂದ ಆಗುತ್ತಿರುವುದು‌ ವಿಪರ್ಯಾಸ’

-ಹರೀಶ್

* ‘ತೇಜಸ್ವಿ ಸೂರ್ಯ ಪ್ರಕಾರ, ಕರ್ನಾಟಕದಲ್ಲಿ ನಾವೆಲ್ಲರೂ ಇನ್ನೂ ಕನ್ನಡಿಗರಾಗಿ ಉಳಿದಿರುವುದೇ ದೊಡ್ಡ ಅಪರಾಧ’

-ಪ್ರತಾಪ್ ಕಣಗಾಲ್

* ‘ನಿಮ್ಮ (ತೇಜಸ್ವಿ ಸೂರ್ಯ) ಟ್ವೀಟ್‌ನಲ್ಲಿ ಹಿಂದಿ, ಇಂಗ್ಲಿಷ್ ಇದೆ. ಕನ್ನಡ ಏಕೆ ಇಲ್ಲ? ಕನ್ನಡದಲ್ಲಿ ಬರಿಯಿರಿ. ಕನ್ನಡಿಗರು ಪ್ರತಿಕ್ರಿಯಿಸುತ್ತಾರೆ’

-ಕೆ.ಶ್ರೀನಿವಾಸ್

* ‘ನಾನು ಅಪ್ಪಟ ಮೋದಿ ಭಕ್ತ. ಹಾಗೆಯೇ ಕನ್ನಡಿಗ. ನಮ್ಮ ಭಾಷೆ, ನಾಡು ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾರ ಅವಶ್ಯಕತೆಯೂ ಬೇಡ. ನೀವೂ ಹೆಚ್ಚಲ್ಲ’

-ಮಂಜುನಾಥ್ ಗೌಡ್ರು

ನೆರವು ಪಡೆಯುವುದರಲ್ಲಿ ಪೌರುಷ ಬಳಸಿ

ಮಾನ್ಯ ಮುಖ್ಯಮಂತ್ರಿಗಳೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ. ನಿಮ್ಮ ಪೌರುಷವನ್ನು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ಪಾಲಿನ ನೆರವಿನ ಹಣವನ್ನು ಪಡೆದುಕೊಂಡು ಬರುವುದರಲ್ಲಿ ತೋರಿಸಿ

-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ನಾಯಕ

ಕನ್ನಡಕ್ಕೆ ಮೊದಲು ಗೌರವ ನೀಡಿ

ನಮ್ಮ ಜನರಿಂದ ಆಯ್ಕೆಯಾಗಿ ನಮ್ಮ ನಾಡನ್ನು ಪ್ರತಿನಿಧಿಸುವ ನಾವೇ ನಮ್ಮ ಜನರನ್ನು ಬಿಟ್ಟು ಕೊಡಬಾರದು. ಕನ್ನಡ ಪರ ಹೋರಾಟ ಯಾವ ಧರ್ಮ ಅಥವಾ ಭಾಷೆಯ ವಿರುದ್ಧದ ಹೋರಾಟವಲ್ಲ. ಎಲ್ಲ ಧರ್ಮ ಹಾಗೂ ಭಾಷೆಗಳನ್ನು ಗೌರವಿಸುವ ಸರ್ವ ಜನಾಂಗದ ಶಾಂತಿಯ ತೋಟ ಈ ನಮ್ಮ ನಾಡು. ಬೇರೆಲ್ಲರಿಗೂ ಕೊಡುವ ಗೌರವವನ್ನು ಬೇರೆಲ್ಲರೂ ನಮ್ಮ ಭಾಷೆಗೆ ಕೊಡಬೇಕು

-ಜಿ. ಪರಮೇಶ್ವರ, ಶಾಸಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು