ಮಂಗಳವಾರ, ಮೇ 11, 2021
20 °C

ಮನೆ ಆರೈಕೆ: ಇಲ್ಲದ ನಿಗಾ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್ ಪೀಡಿತರಾದವರಲ್ಲಿ ಶೇ 80ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. ಆದರೆ, ಅವರ ಮೇಲೆ ಬಿಬಿಎಂಪಿ ಸೂಕ್ತ ನಿಗಾ ಇಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸದ್ಯ 60 ವರ್ಷದೊಳಗಿನವರಿಗೆ ಮನೆ ಆರೈಕೆಗೆ ಅವಕಾಶ ನೀಡಲಾಗುತ್ತಿದೆ. ನಿಯಮದ ಪ್ರಕಾರ ಈ ವ್ಯವಸ್ಥೆಯಡಿ ಆರೈಕೆಗೆ ಒಳಪಡಲು ಮನೆಯಲ್ಲಿ ಉತ್ತಮ ಗಾಳಿ–ಬೆಳಕಿನ ವ್ಯವಸ್ಥೆ, ಪ್ರತ್ಯೇಕ ಕೊಠಡಿ, ಶೌಚಾಲಯ ಸೇರಿದಂತೆ ವಿವಿಧ ಸೌಕರ್ಯಗಳು ಇರಬೇಕಿದೆ. ಬಿಬಿಎಂಪಿ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಬೇಕು. ವೈದ್ಯಾಧಿಕಾರಿಗಳು ಸೋಂಕಿತ ವ್ಯಕ್ತಿಯನ್ನು ತಪಾಸಣೆ ನಡೆಸಿ, ಅನುಮತಿ ನೀಡಬೇಕಿದೆ.

ಮನೆ ಆರೈಕೆಗೆ ಒಳಗಾದವರು ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಪರೀಕ್ಷೆಗಳನ್ನು ಪ್ರತಿನಿತ್ಯ ಮಾಡಿಕೊಂಡು, ವೈದ್ಯರ ಜತೆಗೆ ಸಮಾಲೋಚನೆ ನಡೆಸಬೇಕು. ವ್ಯಕ್ತಿಯು ಮನೆ ಆರೈಕೆ ಅವಧಿಯಲ್ಲಿ ನಿಯಮಗಳನ್ನು ಪಾಲಿಸುತ್ತಿದ್ದಾನೆಯೇ ಎಂಬುದರ ಬಗ್ಗೆ ನಿಗಾ ಇಡಬೇಕು. ಆದರೆ, ಈ ಪ್ರಕ್ರಿಯೆಗಳು ನಡೆಯುತ್ತಿಲ್ಲ ಎಂದು ಕೋವಿಡ್ ಪೀಡಿತರು ಅಳಲು ತೋಡಿಕೊಂಡಿದ್ದಾರೆ. ಸದ್ಯ ನಗರದಲ್ಲಿ 63,167 ಸಕ್ರಿಯ ಪ್ರಕರಣಗಳಿವೆ.

‘ಮನೆ ಆರೈಕೆ ಅವಧಿಯಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಈವರೆಗೆ ಬಿಬಿಎಂಪಿ ಮತ್ತು ಆಪ್ತಮಿತ್ರ ಸಹಾಯವಾಣಿಗೆ 20 ಬಾರಿ ಕರೆ ಮಾಡಿದೆ. ಹೆಸರು, ವಿಳಾಸ ಪಡೆದುಕೊಂಡರೂ ಯಾವುದೇ ಅಧಿಕಾರಿ, ಸಿಬ್ಬಂದಿ ಮನೆಗೆ ಭೇಟಿ ನೀಡಲಿಲ್ಲ. ಮನೆ ಆರೈಕೆ ವೇಳೆ ಬೇಕಾದ ಪಲ್ಸ್ ಆಕ್ಸಿಮೀಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಸಾಧನಗಳನ್ನು ಒದಗಿಸುವುದಾಗಿ ಕೆಲವರು ಹೇಳಿದರು. ಆದರೆ, ಯಾವುದೇ ಕಿಟ್ ತಲುಪಲಿಲ್ಲ’ ಎಂದು 32 ವರ್ಷದ ಕೋವಿಡ್ ಪೀಡಿತ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ‘ಮನೆ ಆರೈಕೆಗೆ ಒಳಗಾದ ಕೋವಿಡ್ ಪೀಡಿತರಿಗೆ ಕಿಟ್‌ಗಳನ್ನು ನೀಡುವ ವ್ಯವಸ್ಥೆ ಕೈಬಿಡಲಾಗಿದೆ. ಕಳೆದ ವರ್ಷ ಚಿಕಿತ್ಸೆಯ ಬಗ್ಗೆ ಅಷ್ಟಾಗಿ ಸ್ಪಷ್ಟತೆ ಇರಲಿಲ್ಲ. ಹಾಗಾಗಿ, ಕಿಟ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಈಗ ಚಿಕಿತ್ಸೆಯ ಬಗ್ಗೆ ಖಚಿತತೆ ದೊರೆತಿದೆ. ಔಷಧ ಮಾತ್ರ ನೀಡುತ್ತಿದ್ದೇವೆ’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು