ಶುಕ್ರವಾರ, ಮೇ 20, 2022
22 °C
ರಾಸಾಯನಿಕ ಮುಕ್ತ ಪರಿಸರಕ್ಕೆ ಪ್ರಯತ್ನ, 30ಕ್ಕೂ ಹೆಚ್ಚು ವಿವಿಧ ಹಣ್ಣಿನ ಗಿಡ

ಗೊಬ್ಬರವಾಗಿ ತ್ಯಾಜ್ಯ ಬಳಕೆ: ತಾರಸಿ ಮೇಲೆ ಅರಳಿದ ಹಣ್ಣಿನ ತೋಟ

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಕ್ರೀಟ್‌ ತಾರಸಿಯ ಮೇಲೆ ಹಸಿರು ಪಸರಿಸುವ ಪ್ರಯತ್ನವನ್ನು ವಿನೂತನ ಪ್ರಯೋಗಗಳ ಮೂಲಕ ಇವರು ಕೈಗೊಂಡಿದ್ದಾರೆ.

ತ್ಯಾಜ್ಯ ಬಳಸಿಕೊಂಡು ರಾಸಾಯನಿಕ ಮುಕ್ತ ವಿಭಿನ್ನವಾದ ತೋಟವನ್ನು ರೂಪಿಸಿರುವ ನಗರದ ಆರ್‌.ಎಂ.ವಿ. ಎರಡನೇ ಹಂತದ ನಿವಾಸಿ ಕೆ. ಸುಲೋಚನಾ ಅವರು, ಹಣ್ಣುಗಳನ್ನು ಬೆಳೆಯುವ ಕಾಯಕದಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಬಹುತೇಕ ಮಂದಿ ತಾರಸಿ ಮೇಲೆ ತರಕಾರಿಗಳನ್ನು ಬೆಳೆಯುತ್ತಾರೆ. ಹೀಗಾಗಿಯೇ ಸುಲೋಚನಾ ಅವರು ಹೊಸ ಪ್ರಯತ್ನಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.

ಮಾವು, ನೇರಳೆ, ಸಪೋಟಾ, ದಾಳಿಂಬೆ, ಸೀಬೆಕಾಯಿ, ಲಿಂಬೆ, ಚೆರ್ರಿ ಸೇರಿದಂತೆ 30ಕ್ಕೂ ಹೆಚ್ಚು ವಿವಿಧ ಹಣ್ಣು ನೀಡುವ ಗಿಡಗಳನ್ನು ಇವರು ಪೋಷಿಸಿ ಬೆಳೆಸುತ್ತಿದ್ದಾರೆ. ಐದು ವಿವಿಧ ತಳಿಯ ಮಾವಿನ ಗಿಡ ಬೆಳೆಸಿದ್ದಾರೆ. ಪ್ರತಿ ವರ್ಷ ಕೆಲ ಸಸಿಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಇವರ ಕೈತೋಟದಲ್ಲಿ ಬೆಳೆದ ನೇರಳೆ ಗಿಡದಿಂದ ಪ್ರತಿ ವರ್ಷದ ಋತುವಿನಲ್ಲಿ 7–8 ಕೆ.ಜಿ. ದೊರೆಯುತ್ತಿದೆ. ಇದೇ ರೀತಿ ಸುಮಾರು 25 ಕೆ.ಜಿ. ಮಾವಿನ ಹಣ್ಣುಗಳು ಕಳೆದ ವರ್ಷ ದೊರೆತಿದ್ದವು.

ವಾಟರ್‌ ಆ್ಯಪಲ್‌ (ಮಲಯ ಆಪಲ್) ಇವರ ತೋಟದ ಪ್ರಮುಖ ಆಕರ್ಷಣೆ. ಸಸ್ಯವಿಜ್ಞಾನದಲ್ಲಿ ಸಿಜಿಜಿಯಮ್ ಮಲಾಸಿಸೆನ್ ಎಂದು ಕರೆಯಲಾಗುವ ಈ ಗಿಡದಿಂದ ಕಳೆದ ವರ್ಷ 15ರಿಂದ 20 ಕೆ.ಜಿಯಷ್ಟು ಲಭಿಸಿತ್ತು. ಜೂನ್‌ ತಿಂಗಳಲ್ಲಿ ಈ ಹಣ್ಣುಗಳು ದೊರೆಯುತ್ತವೆ. 

ತಾರಸಿ ಮೇಲೆ ಲಭ್ಯವಿರುವ ಜಾಗದಲ್ಲಿಯೇ ಈ ಗಿಡಗಳನ್ನು ಬೆಳೆಸಿದ್ದಾರೆ. ನೀರಿನ ತೊಟ್ಟಿಗಳ ಮಾದರಿಗಳಲ್ಲಿ ಮತ್ತು ಸಣ್ಣ ಬಕೆಟ್‌ಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಸಣ್ಣ ಉಳಿತಾಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾಗಿರುವ ಸುಲೋಚನಾ ಅವರು, ತಾರಸಿ ಕೃಷಿಯನ್ನು 15 ವರ್ಷಗಳಿಂದ ನಿರಂತರವಾಗಿ ಮುಂದುವರಿಸಿದ್ದಾರೆ.

 ‘ಸಸ್ಯವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದರಿಂದ ಸಹಜವಾಗಿ ತೋಟ ಬೆಳೆಸುವ ಆಸಕ್ತಿ ಇತ್ತು. ಆರಂಭದಲ್ಲಿ ತರಕಾರಿಗಳನ್ನು ಬೆಳೆಯುವ ಪ್ರಯೋಗ ಮಾಡಲಾಗಿತ್ತು. ಕೆಲ ದಿನಗಳ ನಂತರ, ಹಣ್ಣಿನ ಗಿಡಗಳನ್ನು ಬೆಳೆಯಬೇಕು ಎಂಬ ಆಲೋಚನೆ ಬಂತು. ಆಗ ಮಗನ ನೆರವು ಪಡೆದು ಹಣ್ಣುಗಳನ್ನು ನೀಡುವ ಸಸಿಗಳನ್ನು ಬೆಳೆಸುವ ಪ್ರಯತ್ನ ಮಾಡಿದೆ’ ಎಂದು ಸುಲೋಚನಾ ಅವರು ಹೇಳುತ್ತಾರೆ.

‘ರಾಸಾಯನಿಕ ಮುಕ್ತ ಹಣ್ಣುಗಳನ್ನು ತಿನ್ನಬೇಕು ಎನ್ನುವ ಉದ್ದೇಶವೇ ಹಣ್ಣಿನ ತೋಟ ಬೆಳೆಯಲು ಪ್ರೇರಣೆಯಾಗಿದೆ. ಜಾಗ ಚಿಕ್ಕದು, ದೊಡ್ಡದು ಎನ್ನುವುದು ಮುಖ್ಯವಾಗುವುದಿಲ್ಲ. ಜಾಗವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಇದು
ವರೆಗೆ ಯಾವುದೇ ರೀತಿ ರಾಸಾಯನಿಕಗಳನ್ನು ಬಳಸಿಲ್ಲ. ಬೇವಿನ ಎಣ್ಣೆ, ಹೊಂಗಿನ ಎಣ್ಣೆ ಮುಂತಾದವುಗಳನ್ನು ಮಾತ್ರ ಬಳಸುತ್ತೇನೆ. ತ್ಯಾಜ್ಯದಿಂದಲೇ ಗೊಬ್ಬರ ಮಾಡುತ್ತೇವೆ. ಇದರಿಂದ, ಎರಡು ಉಪಯೋಗಗಳಾಗುತ್ತಿವೆ. ಕಸವನ್ನು ರಸವನ್ನಾಗಿ ಬಳಸುವ ಪ್ರಯತ್ನ ನಡೆಸಲಾಗುತ್ತಿದೆ. ಜತೆಗೆ, ಗಿಡಗಳಿಗೂ ಗೊಬ್ಬರವಾಗುತ್ತದೆ. ರಸಗೊಬ್ಬರ ಖರೀದಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ವಿವರಿಸುತ್ತಾರೆ.

‘ಈಗ ತೆಂಗಿನ ಗಿಡಗಳನ್ನು ಬೆಳೆಸುವ ಪ್ರಯೋಗ ಮಾಡುತ್ತಿದ್ದೇನೆ. ಫಲಿತಾಂಶ ಯಾವ ರೀತಿ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಹೊಸ, ಹೊಸ ಪ್ರಯೋಗಗಳನ್ನು ಮಾಡಿದಾಗಲೇ ಹೊಸ ವಿಷಯಗಳು ಗೊತ್ತಾಗುತ್ತವೆ. ಕೈತೋಟದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಸಮಾನ ಮನಸ್ಕರ ಗುಂಪೊಂದನ್ನು ಮಾಡಿಕೊಂಡಿದ್ದೇವೆ. ಪ್ರತಿಯೊಬ್ಬರು ಸಲಹೆ–ಸೂಚನೆಗಳನ್ನು ಕೊಡುತ್ತಾರೆ. ಬೀಜಗಳು, ಸಸಿಗಳ ವಿಷಯಗಳು ಚರ್ಚೆಯಾಗುತ್ತವೆ. ಮಾಹಿತಿ ವಿನಿಮಯದಿಂದ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳುತ್ತಾರೆ.


ಮನೆಯಲ್ಲಿ ಸುಲೋಚನ ಅವರು ಗಿಡಗಳನ್ನು ಬೆಳೆಸುವ ದೃಶ್ಯ. ಚಿತ್ರ: ಎಂ.ಎಸ್‌.ಮಂಜುನಾಥ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು