ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಮನೆಗಳಲ್ಲಿ ಕಳವು: ಬೆರಳಚ್ಚು ಸುಳಿವಿನಿಂದ ಸಿಕ್ಕಿಬಿದ್ದ ದಂಪತಿ

ಆರ್‌.ಟಿ.ನಗರ ಪೊಲೀಸರಿಂದ ಆರೋಪಿಗಳ ಬಂಧನ
Last Updated 5 ಅಕ್ಟೋಬರ್ 2021, 15:42 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಟಿ.ನಗರ ಠಾಣೆ ವ್ಯಾಪ್ತಿಯ ಕೆಲ ಮನೆಗಳಲ್ಲಿ ಕಳವು ಮಾಡಿದ್ದ ಆರೋಪದಡಿ ದಂಪತಿಯನ್ನು ಬಂಧಿಸಿರುವ ಪೊಲೀಸರು, ಅವರಿಂದ ₹ 8.5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ನಿವಾಸಿ ಜಯಂತಿ ಅಲಿಯಾಸ್ ಕುಟ್ಟಿಯಮ್ಮ (30) ಹಾಗೂ ಅವರ ಪತಿ ಬಾಬು ಅಲಿಯಾಸ್ ಮಾರ್ಕೆಟ್ ಬಾಬು (33) ಬಂಧಿತರು. 2019ರಿಂದಲೇ ದಂಪತಿ ಕಳ್ಳತನ ಎಸಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರ್‌.ಟಿ.ನಗರ ಠಾಣೆ ವ್ಯಾಪ್ತಿಯ 6 ಕಡೆ ಕಳ್ಳತನ ನಡೆದಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ವಿಶೇಷ ತಂಡ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿತ್ತು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ, ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಬಂಧಿತರಾಗಿದ್ದ ಆರೋಪಿಗಳ ಬೆರಳಚ್ಚು ಪರಿಶೀಲನೆಗೆ ಮುಂದಾಗಿತ್ತು.’

‘ಮಲ್ಲೇಶ್ವರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ 2019ರಲ್ಲಿ ದಂಪತಿ ಕಳ್ಳತನ ಎಸಗಿದ್ದರು. ಈ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಿದ್ದ ಪೊಲೀಸರು, ಬೆರಳಚ್ಚು ಸಂಗ್ರಹಿಸಿಟ್ಟುಕೊಂಡಿದ್ದರು. ಆರ್‌.ಟಿ. ನಗರ ಪ್ರಕರಣಗಳಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿಯನ್ನು ಹೋಲಿಕೆ ಮಾಡಲಾಯಿತು. ಅವಾಗಲೇ ಆರೋಪಿಗಳ ಸುಳಿವು ಲಭ್ಯವಾಯಿತು’ ಎಂದೂ ಪೊಲೀಸರು ತಿಳಿಸಿದರು.

‘ಡಿ.ಜೆ.ಹಳ್ಳಿ ಬಳಿಯ ಕಾವಲ್‌ಬೈರಸಂದ್ರ ಬಳಿ ಆರೋಪಿಗಳು ವಾಸವಿದ್ದರು. ಮನೆ ಮೇಲೆ ದಾಳಿ ಮಾಡಿ ದಂಪತಿಯನ್ನು ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿದರು.

ಬಾಡಿಗೆ ಕೇಳುವ ನೆಪದಲ್ಲಿ ಸುತ್ತಾಟ: ‘ಆರೋಪಿ ಜಯಂತಿ, ಸ್ಥಳೀಯ ಸಂಘಟನೆಯೊಂದರ ಸದಸ್ಯೆ ಆಗಿದ್ದರು. ಮನೆ ಬಾಡಿಗೆ ಕೇಳುವ ನೆಪದಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದ ಆಕೆ, ಬೀಗ ಹಾಕಿರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದಳು. ಅದೇ ಮಾಹಿತಿಯನ್ನು ಪತಿ ಬಾಬುಗೆ ತಿಳಿಸುತ್ತಿದ್ದಳು’ ಎಂದು ಪೊಲೀಸರು ವಿವರಿಸಿದರು.

‘ಹಗಲು ಹಾಗೂ ರಾತ್ರಿ ವೇಳೆ ಮನೆಯ ಬೀಗ ಮುರಿದು ಒಳಗೆ ನುಗ್ಗುತ್ತಿದ್ದ ಬಾಬು, ಚಿನ್ನಾಭರಣ ಹಾಗೂ ನಗದು ಕದ್ದು ಬರುತ್ತಿದ್ದ. ಜಯಂತಿ ಹೊರಗೆ ಕಾಯುತ್ತಿದ್ದರು. ಯಾರಾದರೂ ಬಂದರೆ ಸೂಚನೆ ನೀಡುತ್ತಿದ್ದಳು. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಮಾಹಿತಿ ನೀಡಿದರು.

‘2021ರ ಮಾರ್ಚ್‌ನಲ್ಲಿ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು, 15 ದಿನ ಜೈಲಿನಲ್ಲಿ ಇದ್ದರು. ಜಾಮೀನು ಮೇಲೆ ಹೊರಬಂದು ಪುನಃ ಕಳ್ಳತನಕ್ಕೆ ಇಳಿದಿದ್ದರು. ಆರ್‌.ಟಿ.ನಗರದ ಮಂಜುನಾಥ ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಸೆ. 16ರಂದು ಕಳ್ಳತನ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದೂ ಹೇಳಿದರು.

‘ರಾಮಮೂರ್ತಿನಗರ, ಯಶವಂತಪುರ, ಅಶೋಕನಗರ, ಡಿ.ಜೆ.ಹಳ್ಳಿ, ಅನ್ನಪೂರ್ಣೇಶ್ವರಿನಗರ, ವಿವೇಕನಗರ, ಬೆಳ್ಳಂದೂರು, ವಿಧಾನಸೌಧ, ಕೊತ್ತನೂರು, ಮಡಿವಾಳ ಹಾಗೂ ಕೆ.ಆರ್.ಪುರ ಠಾಣೆಗಳ ವ್ಯಾಪ್ತಿಯಲ್ಲೂ ದಂಪತಿ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT