ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾನ್ಸಮ್‌’ ಕಾಟ; ಸರ್ವರ್ ಹ್ಯಾಕ್

₹50 ಲಕ್ಷದಿಂದ ₹60 ಲಕ್ಷಕ್ಕೆ ಬೇಡಿಕೆ l ಮೂಲ ಪತ್ತೆ ಕಷ್ಟವೆಂದ ಪೊಲೀಸರು
Last Updated 9 ಫೆಬ್ರುವರಿ 2020, 1:52 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತಕಳೆದ ವರ್ಷವಷ್ಟೇ ಸದ್ದು ಮಾಡಿದ್ದ ‘ರ‍್ಯಾನ್ಸಮ್‌ ವೇರ್‌’ ಕಾಟ ಪುನಃ ಶುರುವಾಗಿದೆ. ಅದೇ ಅಸ್ತ್ರ ಬಳಸಿ ವಂಚಕರು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಸರ್ವರ್‌ ಹ್ಯಾಕ್ ಮಾಡಿದ್ದಾರೆ.

ದತ್ತಾಂಶ (ಡೇಟಾ) ಮರಳಿಸಲು ನೀಡಲು ₹ 50 ಲಕ್ಷದಿಂದ ₹ 60 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ಈ ಸಂಬಂಧ ಆಸ್ಪತ್ರೆಯ ವೈದ್ಯರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ‘ವಿದೇಶದಲ್ಲಿ ಕುಳಿತು ವಂಚಕರು ಕೃತ್ಯ ಎಸಗಿರುವುದು ಗೊತ್ತಾಗಿದೆ. ಅವರ ಮೂಲ ಪತ್ತೆ ಮಾಡುವುದು ತುಂಬಾ ಕಷ್ಟ’ ಎಂದು ಪೊಲೀಸರು ಹೇಳಿದರು.

ರಾಜರಾಜೇಶ್ವರಿನಗರದಲ್ಲಿರುವ ಆಸ್ಪತ್ರೆಯ ವ್ಯವಹಾರದ ದಾಖಲೆಗಳು, ರೋಗಿಗಳ ನೋಂದಣಿ, ತಪಾಸಣೆ ದಾಖಲೆಗಳು ಸರ್ವರ್‌ನಲ್ಲಿದ್ದವು. 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳ ನಿತ್ಯದ ಕೆಲಸಗಳು ನಡೆಯುತ್ತಿದ್ದವು.

ಇತ್ತೀಚೆಗೆ ರಾತ್ರಿ ಕೆಲಸ ಮುಗಿಸಿ ಸಿಬ್ಬಂದಿ ಮನೆಗೆ ಹೋಗಿದ್ದರು. ಕೆಲ ಸಿಬ್ಬಂದಿ ಕಂಪ್ಯೂಟರ್ ಆಫ್‌ ಮಾಡಿರಲಿಲ್ಲ. ಅಂತರ್ಜಾಲ ಸಂಪರ್ಕ ಸಹ ಆನ್‌ ಆಗಿತ್ತು. ಆ ಸಂದರ್ಭವನ್ನು ಬಳಸಿಕೊಂಡು ಸರ್ವರ್‌ ಹಾಗೂ ಕಂಪ್ಯೂಟರ್ ಹ್ಯಾಕ್ ಮಾಡಲಾಗಿದೆ.

‘ಹ್ಯಾಕ್‌ ಆದ ಕಂಪ್ಯೂಟರ್‌ಗಳ ಪರದೆ ಮೇಲೆ ಹ್ಯಾಕರ್ಸ್‌ಗಳು ಸಂದೇಶ ಪ್ರಕಟಿಸಿದ್ದರು. ‘ಕಂಪ್ಯೂಟರ್ ಹ್ಯಾಕ್ ಮಾಡಲಾಗಿದೆ. ದತ್ತಾಂಶಗಳು ನಮ್ಮ ವಶದಲ್ಲಿವೆ. ಬ್ಯಾಕಪ್‌ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಎಲ್ಲವೂ ಅಳಿಸಿ ಹೋಗಲಿದೆ’ ಎಂದಿದ್ದಾರೆ.

ದತ್ತಾಂಶ ಬೇಕಾದರೆ aire**ric@pro***mail.com ಅಥವಾ elle***@pro***mail.com ಸಂಪರ್ಕಿಸಿ’ ಎಂಬುದನ್ನು ಸಂದೇಶದಲ್ಲಿ ಬರೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಟ್‌ ಕಾಯಿನ್‌ಗೆ ಬೇಡಿಕೆ: ’ಸರ್ವರ್‌ ನಲ್ಲಿದ್ದ ಮಾಹಿತಿ ಮಹತ್ವದ್ದಾಗಿದ್ದರಿಂದ ಆಸ್ಪತ್ರೆ ತಾಂತ್ರಿಕ ವಿಭಾಗದ ಸಿಬ್ಬಂದಿ, ಹ್ಯಾಕರ್ಸ್‌ಗಳಿಗೆ ಇ–ಮೇಲ್ ಕಳುಹಿಸಿದ್ದರು. ಉತ್ತರಿಸಿದ್ದ ಹ್ಯಾಕರ್ಸ್‌ಗಳು, 10 ಬಿಟ್ ಕಾಯಿನ್ ಮೂಲಕ ₹ 50 ಲಕ್ಷದಿಂದ ₹60 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಹಣ ನೀಡಲು ಆಸ್ಪತ್ರೆಯವರು ಒಪ್ಪಿರಲಿಲ್ಲ. ತಾಂತ್ರಿಕ ವಿಭಾಗದ ಸಿಬ್ಬಂದಿ ‘ಫಾರ್ಮ್ಯಾಟ್‌’ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಹಲವು ಮಾಹಿತಿ ಗಳು ‘ಕ್ಲೌಡ್‌’ನಲ್ಲಿತ್ತು. ಕೆಲ ಮಾಹಿತಿಗಳಷ್ಟೇ ಅಳಿಸಿಹೋಗಿದೆ’ ಎಂದು ತಿಳಿಸಿವೆ.

ಏನಿದು ರ‍್ಯಾನ್ಸಮ್ ವೇರ್?

ಅಪಹೃತರ ಬಿಡುಗಡೆಗೆ ನೀಡಬೇಕಾದ ಹಣಕ್ಕೆ ‘ರ‍್ಯಾನ್ಸಮ್’ ಎನ್ನಲಾಗುತ್ತದೆ. ಇದೇ ಹೆಸರಿನ ‘ರ‍್ಯಾನ್ಸಮ್‌ ವೇರ್‌’ ಎಂಬ ಕಂಪ್ಯೂಟರ್ ವೈರಸ್ ಇದೆ.ಲಿಂಕ್ ಮೂಲಕ ಸುಲಭವಾಗಿ ಕಂಪ್ಯೂಟರ್ ಹಾಗೂ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಈ ವೈರಸ್ ಬಳಸಲಾಗುತ್ತದೆ.

ಹ್ಯಾಕ್ ನಂತರ ದತ್ತಾಂಶ ಅಳಿಸುವುದಾಗಿ ಬೆದರಿಸಿ ಹ್ಯಾಕರ್ಸ್‌ಗಳು ಹಣಕ್ಕೆ ಬೇಡಿಕೆ ಇಡುತ್ತಾರೆ. ಇಂಥ ಕೃತ್ಯ ಎಸಗುವ ತಂಡಗಳು ವಿಶ್ವದಾದ್ಯಂತ ಇವೆ. ಈಗ ರಾಜ್ಯದ ಮೇಲೂ ಅವರ ಕಣ್ಣು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT