ಗುರುವಾರ , ಜನವರಿ 23, 2020
22 °C
ಯು.ಆರ್. ಅನಂತಮೂರ್ತಿ ಸ್ಮರಣೆಯಲ್ಲಿ ಸಂಗೀತ ಗಾಯಕ ಟಿ.ಎಂ. ಕೃಷ್ಣ

‘ಮಾನವೀಯತೆ–ಸಂವಿಧಾನವೇ ನಮ್ಮ ಸಂಸ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಯವರ ಪುಣ್ಯಸ್ಮರಣೆಯನ್ನು ನಗರದಲ್ಲಿ ವಿಭಿನ್ನವಾಗಿ ಭಾನುವಾರ ಆಚರಿಸ
ಲಾಯಿತು. ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ.ಕೃಷ್ಣ ಪತ್ರದ ಮೂಲಕ ನುಡಿನಮನ ಸಲ್ಲಿಸಿದರು.

‘ನಮಸ್ಕಾರ ಸರ್, ನಾನು ಕೃಷ್ಣ’ ಹೆಸರಿನಲ್ಲಿ ಬರೆದ ಪತ್ರದ ರೂಪದಲ್ಲಿ ಉಪನ್ಯಾಸ ನೀಡಿದ ಅವರು, ಸಂಗೀತ, ಸಂಸ್ಕಾರ, ಸಂವಿಧಾನ, ಆರ್‌ಎಸ್‌ಎಸ್‌ ಮತ್ತು ಈಗಿನ ಶಿಕ್ಷಣ ವ್ಯವಸ್ಥೆ ಕುರಿತು ಮಾತನಾಡಿದರು.  ಮಡಿ, ಮೈಲಿಗೆ ವಿಚಾರದಲ್ಲಿ ನಮ್ಮ ತಿಳಿವಳಿಕೆ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಉದಾಹರಣೆ ಮೂಲಕ ಹೇಳಿದರು. 

‘ಬ್ರಾಹ್ಮಣ ಮೃದಂಗಪಟುಗಳು ಅಥವಾ ವಿದ್ವಾಂಸರು ಮನೆಯ ಪೂಜಾ ಕೊಠಡಿಯಲ್ಲಿ ಮೃದಂಗವನ್ನು ಇಟ್ಟುಕೊಳ್ಳುತ್ತಾರೆ. ದನ ಮತ್ತು ಎಮ್ಮೆಯ ಚರ್ಮವನ್ನು ಬಳಸಿ ಆ ಮೃದಂಗವನ್ನು ತಯಾರಿಸುವವರು ದಲಿತ ಕ್ರಿಶ್ಚಿಯನ್ನರು ಮತ್ತು ತಳ ಸಮುದಾಯದ ಜನ. ಆದರೆ, ಮೃದಂಗ ಮಡಿ ಆದದ್ದು ಯಾವಾಗ, ಅದೇ ಹಸುವನ್ನು ಕೊಲ್ಲುವ ವಧಾಸ್ಥಾನಗಳು ಮೈಲಿಗೆ ಆಗಿದ್ದು ಯಾವಾಗ ಎಂಬುದು ಇಂದಿಗೂ ಉತ್ತರ ಸಿಗದ ಪ್ರಶ್ನೆಗಳಾಗಿವೆ’ ಎಂದು ಹೇಳಿದರು.

‘ಮಾನವೀಯತೆಯೇ ನಮ್ಮ ಸಂಸ್ಕಾರ. ಈ ಸಂಸ್ಕಾರ ಯಾವುದೇ ಒಬ್ಬ ವ್ಯಕ್ತಿಗೆ, ಒಂದು ಸಮುದಾಯಕ್ಕೆ, ಒಬ್ಬ ರಾಜನಿಗೆ, ಒಂದು ಪ್ರದೇಶಕ್ಕೆ, ಒಂದು ಲಿಂಗ ಅಥವಾ ಒಂದು ಜಾತಿಗೆ ಮಾತ್ರ ಸೇರಿದ್ದಲ್ಲ’ ಎಂದೂ ಪ್ರತಿಪಾದಿಸಿದರು. 

‘ಸರ್, ನೀವು ಕಠಿಣ ಪ್ರಶ್ನೆಗಳನ್ನು ಕೇಳುವುದನ್ನು ಕಲಿಸಿದ್ದೀರಿ. ಪ್ರಶ್ನಿಸುವ ಮಾರ್ಗವನ್ನೂ ತೋರಿದ್ದೀರಿ. ಅದೇ ಪ್ರಶ್ನೆಗಳನ್ನು ನೀವು ಈಗ ಕೇಳಿದ್ದರೆ, ಹಿಂದೂ ವಿರೋಧಿ, ಬ್ರಾಹ್ಮಣ ವಿರೋಧಿ, ದೇಶದ್ರೋಹಿ ಎಂಬ ಪಟ್ಟ ಕಟ್ಟಿಕೊಳ್ಳಬೇಕಾಗಿತ್ತು’ ಎಂದು ಅನಂತ ಮೂರ್ತಿ ಕುರಿತಾಗಿ ಹೇಳಿದರು.

‘ಇಂದು ನಾವು ಪ್ರಶ್ನಿಸುವುದನ್ನೇ ಮರೆತಿದ್ದೇವೆ. ಹೊತ್ತಿನ ಊಟಕ್ಕಾಗಿ ಹೋರಾಡುತ್ತಿರುವ, ಮಾಂಸ ಒಯ್ಯುತ್ತಿದ್ದ ಕಾರಣದಿಂದಲೇ ಸಾವಿಗೀಡಾದ ಜನರಿಗೆ ಆದ ಅನ್ಯಾಯದ ಕುರಿತು ನಾವು ಪ್ರಶ್ನಿಸುತ್ತಿಲ್ಲ. ಈ ಬಗ್ಗೆ ಮಾತನಾಡಲೂ ನಾವು ಮುಂದಾಗುವುದಿಲ್ಲ’ ಎಂದರು. 

‘ನಮ್ಮ ಬರವಣಿಗೆ, ಸಂಗೀತ, ಕಲೆಯ ಮೂಲಕ ಪ್ರತಿಭಟಿಸುವ ಜೊತೆಗೆ, ಬೀದಿಯಲ್ಲಿ ಇಳಿದು ಹೋರಾಡುವ ಅಗತ್ಯವೂ ಹೆಚ್ಚಿದೆ. ದೇಶವನ್ನು ಜೀವಂತವಾಗಿಡಬೇಕೆಂದರೆ ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಇದೆ’ ಎಂದರು.

ಸಂವಿಧಾನ ಪ್ರಸ್ತಾವ ನಿತ್ಯದ ಹಾಡಾಗಲಿ:  ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕಿದೆ. ವಿವಿಧತೆಯ, ಸರ್ವಧರ್ಮದ ಸಮನ್ವಯತೆ ಸಾರುವ ಸಂವಿಧಾನದ ಪ್ರಸ್ತಾವವನ್ನು ಶಾಲೆಗಳಲ್ಲಿ ನಿತ್ಯ ಹಾಡುವ ವ್ಯವಸ್ಥೆ ಮಾಡುವ ಅಗತ್ಯವಿದೆ’ ಎಂದು ಕೃಷ್ಣ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು