ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ: ವಕ್ಫ್‌ ಮಂಡಳಿ ಅರ್ಜಿ ವಜಾ

ಚಾಮರಾಜಪೇಟೆ ಮೈದಾನ ಖಾತೆ ಪ್ರಕರಣ l ಬಿಬಿಎಂಪಿ ವಿಲೇವಾರಿ
Last Updated 6 ಆಗಸ್ಟ್ 2022, 19:37 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಖಾತೆಯಲ್ಲಿ ತಮ್ಮ ಹೆಸರಿನಲ್ಲಿ ನಮೂದಿಸಬೇಕು ಎಂದು ರಾಜ್ಯ ವಕ್ಫ್‌ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ವಜಾಗೊಳಿಸಿದ್ದಾರೆ.

ಚಾಮರಾಜಪೇಟೆಯಲ್ಲಿರುವ ಬೆಂಗಳೂರು ದಕ್ಷಿಣದ ಕೆಂಗೇರಿ ಹೋಬಳಿ ಗುಟ್ಟಹಳ್ಳಿ ಸರ್ವೆ ನಂ.40ರ 2 ಎಕರೆ 4 ಗುಂಟೆಗೆ ಖಾತೆಯನ್ನು ಇಂಡೀಕರಣ ಮಾಡಲು ರಾಜ್ಯ ವಕ್ಫ್‌ ಮಂಡಳಿಯವರು ಚಾಮರಾಜಪೇಟೆ ಸಹಾಯಕ ಕಂದಾಯ ಅಧಿಕಾರಿಗೆ ಜೂನ್‌ 21ರಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರ ನ್ಯಾಯಾಲಯ, ಅರೆನ್ಯಾಯಿಕ ಪ್ರಾಧಿಕಾರದಿಂದ ವಿಚಾರಣೆ ನಡೆಸಿ, ತೀರ್ಪು
ನೀಡಿದ್ದಾರೆ.

‘ಈ ಆಸ್ತಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಸೇರಿದೆ ಎಂದು ಪರಿಗಣಿಸಿರುವುದರಿಂದ ಅರ್ಜಿದಾರರು ಈ ಆಸ್ತಿಯ ಬಗ್ಗೆ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆಯೊಂದಿಗೆ ವ್ಯವಹರಿಸುವ ಹಕ್ಕಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ‘ಬಿಬಿಎಂಪಿ ದಾಖಲೆಗಳಲ್ಲಿ ಆಸ್ತಿಯನ್ನು ‘ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ’ ಎಂದು ನಮೂದಿಸುವಂತೆ ಅರೆನ್ಯಾಯಿಕ ಪ್ರಾಧಿಕಾರದ ಪೀಠಾಸೀನ ಅಧಿಕಾರಿ ಎಸ್‌.ಎಂ. ಶ್ರೀನಿವಾಸ ಸೂಚಿಸಿದ್ದಾರೆ.

ವಕ್ಫ್‌ ಮಂಡಳಿ ಅರ್ಜಿ ಸಲ್ಲಿಸಿದ ನಂತರ ಜೂನ್‌ 29ರಂದು ದಾಖಲೆಗಳನ್ನು ಸಲ್ಲಿಸುವಂತೆ ಹಿಂಬರಹ ನೀಡಲಾಗಿತ್ತು. ಸುಪ್ರೀಂ ಕೋರ್ಟ್‌ ಆದೇಶದ ಪ್ರತಿ, ಸಿವಿಲ್‌ ನ್ಯಾಯಾಲಯದ ಆರ್‌.ಎ ಪ್ರತಿ, ಸ್ವತ್ತಿನ ಮೂಲ ಪತ್ರ ಅಥವಾ ಕ್ರಯಪತ್ರ, 1968ರಿಂದ ಈವರೆಗೆ ತಹಶೀಲ್ದಾರ್‌ರಿಂದ ದೃಢೀಕೃತವಾದ ಪಹಣಿ, ಬೆಂಗಳೂರು ಡೆವಲಪ್‌ಮೆಂಟ್‌ ಬೋರ್ಡ್‌ ಲೇಔಟ್‌ ನಕ್ಷೆ, ತಹಶೀಲ್ದಾರ್‌ ದೃಢೀಕರಿಸಿದ ಖೇತವಾರು ಪತ್ರಿಕೆ, ಸರ್ಕಾರದಿಂದ ಬಂದಿರುವ ಆಸ್ತಿ ಪ್ರಕರಣ ಪತ್ರ, ಈವರೆಗೂ ಇ.ಸಿ. ನಮೂನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ದಾಖಲೆ ಸಲ್ಲಿಸದ ಕಾರಣ ಜುಲೈ 7ರಂದು ಮತ್ತೆ 2ನೇ ಹಿಂಬರಹ ನೀಡಿ ಮತ್ತೆ 5 ದಿನಗಳ ಕಾಲ ಅವಕಾಶ ನೀಡಲಾಯಿತು.

ದಾಖಲೆಯನ್ನು ನೀಡದ ಕಾರಣ ಜುಲೈ 21ರಂದು ನೋಟಿಸ್‌ ನೀಡಿ ಜುಲೈ 27ರಂದು ದಾಖಲೆಗಳೊಂದಿಗೆ ಹಾಜರಾಗಿ, ಖಾತಾ ಇಂಡೀಕರಣಕ್ಕೆ ಹಕ್ಕು ಮಂಡಿಸಲು ಪಶ್ಚಿಮ ವಲಯದ ಜಂಟಿ ಆಯುಕ್ತರು ಸೂಚಿಸಿದರು. ವಕೀಲರೊಂದಿಗೆ ಹಾಜರಾದ ವಕ್ಫ್‌ ಮಂಡಳಿಯವರು ಕಾಲಾವಕಾಶ ಕೇಳಿದರು. ಆಗಸ್ಟ್‌ 3ಕ್ಕೆ ಪ್ರಕರಣ ಮುಂದೂಡಲಾಯಿತು. ಆ.3ರಂದು ಹಾಜರಾದ ಅರ್ಜಿದಾರರು ನ್ಯಾಯಾ ಲಯದ ಆದೇಶಗಳನ್ನು ಮಾತ್ರ ಸಲ್ಲಿಸಿದರು. ಮತ್ತಷ್ಟು ಕಾಲಾವಕಾಶ ಕೇಳಿದರು. ಸಾಕಷ್ಟು ಕಾಲಾವಕಾಶ ನೀಡಿದ್ದರೂ ಪೂರಕ ದಾಖಲೆಗಳನ್ನು ಸಲ್ಲಿಸದಿರುವ ಕಾರಣ ಮನವಿಯನ್ನು ಪರಿಗಣಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂದಿನ ವ್ಯಾಜ್ಯಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಲ್ಲಿ ಅಡ್ಡಿಪಡಿಸಬಾರದೆಂದು ದಾವೆ ಸಲ್ಲಿಸಲಾಗಿದೆ. ಆಸ್ತಿಯ ಮಾಲೀಕತ್ವ ಅಥವಾ ಸ್ವಾಧೀನ ಹೊಂದಿದ್ದೇವೆ ಎಂದು ಪ್ರತಿಪಾದಿಸಿಲ್ಲ. ಸುಪ್ರೀಂ ಕೋರ್ಟ್‌ನ ತೀರ್ಪಿನ ಅಂಶಗಳಂತೆ ಮತ್ತು ಮೈಸೂರು ಲ್ಯಾಂಡ್‌ ರೆವೆನ್ಯೂ ಕೋಡ್‌, ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ ಈ ಆಸ್ತಿ ರಾಜ್ಯ ಕಂದಾಯ ಇಲಾಖೆಯಲ್ಲಿಯೇ ಅಂದಿನಿಂದ ಇಂದಿನವರೆಗೂ ಉಳಿದು ಕೊಂಡು ಬಂದಿದೆ ಎಂದು ಆದೇಶದಲ್ಲಿಉಲ್ಲೇಖಿಸಲಾಗಿದೆ.

ಚರ್ಚಿಸಿ, ಮುಂದಿನ ತೀರ್ಮಾನ

‘ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಿದ್ದರಿಂದ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದೆವು. 1897ರಿಂದಲೇ ಈ ಆಸ್ತಿ ವಕ್ಫ್ ಮಂಡಳಿಗೆ ಸೇರಿದೆ. ಈಗ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕೋ ಅಥವಾ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕೊ ಎಂಬುದನ್ನು ಕಾನೂನು ಕೋಶದೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಷಾಫಿ ಸಾ–ಆದಿ
ತಿಳಿಸಿದರು.

ಧ್ವಜಾರೋಹಣಕ್ಕೆ ಮನವಿ

‘ಖಾತೆ ಸಂಬಂಧ ಬಿಬಿಎಂಪಿ ನೀಡಿರುವ ಆದೇಶ ಸ್ವಾಗತಾರ್ಹ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಚಾಮರಾಜಪೇಟೆ ಆಟದ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್‌ ಆಯುಕ್ತರು ಸೇರಿ ಎಲ್ಲ ಇಲಾಖೆಗೂ ನಾವು ಈಗಾಗಲೇ ಮನವಿ ಸಲ್ಲಿಸಿದ್ದೇವೆ. ನಮಗೆ ಅನುಮತಿ ದೊರೆಯುತ್ತದೆ ಎಂಬ ಭರವಸೆ ಇದೆ’ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟಗಳ ವೇದಿಕೆ ಅಧ್ಯಕ್ಷ ರಾಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT