ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸಿದವರಿಗೇ ದೇಶದ್ರೋಹಿ ಪಟ್ಟ: ಜಿ. ರಾಮಕೃಷ್ಣ

Published 11 ಫೆಬ್ರುವರಿ 2024, 14:24 IST
Last Updated 11 ಫೆಬ್ರುವರಿ 2024, 14:24 IST
ಅಕ್ಷರ ಗಾತ್ರ

ಬೆಂಗಳೂರು: ದೇಶಕ್ಕಾಗಿ ತ್ಯಾಗ ಮಾಡಿ ಎಂದು ಭಾಷಣ ಮಾಡುವವರಲ್ಲಿ ನೀವೇನು ತ್ಯಾಗ ಮಾಡಿದ್ದೀರಿ ಎಂದು ಪ್ರಶ್ನಿಸಿದರೆ, ಪ್ರಶ್ನಿಸಿದವರಿಗೇ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ವಿಚಾರವಾದಿ ಜಿ. ರಾಮಕೃಷ್ಣ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ಇಂಡಸ್ಟ್ರಿಯಲ್‌ ಆ್ಯಂಡ್‌ ಅದರ್‌ ಎಸ್ಟಾಬ್ಲಿಷ್‌ಮೆಂಟ್ಸ್‌ ಎಂಪ್ಲಾಯಿಸ್‌ ಫೆಡರೇಷನ್‌ ಭಾನುವಾರ ಹಮ್ಮಿಕೊಂಡಿದ್ದ ‘ಟಿ.ಎಸ್‌. ಅನಂತರಾಮ್– ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘಟನಾತ್ಮಕ ಹೋರಾಟ ಮತ್ತು ಕಾನೂನು ಹೋರಾಟ ಎರಡು ಒಟ್ಟೊಟ್ಟಿಗೆ ನಡೆದರೆ ಮಾತ್ರ ಇವೆಲ್ಲವನ್ನು ಎದುರಿಸಲು ಸಾಧ್ಯ. ವಕೀಲ ಮತ್ತು ಕಾರ್ಮಿಕ ನಾಯಕರಾಗಿದ್ದ ಟಿ.ಎಸ್‌. ಅನಂತರಾಮ್‌ ಈ ರೀತಿಯ ಹೋರಾಟ ನಡೆಸಿದವರು’ ಎಂದು ನೆನಪು ಮಾಡಿಕೊಂಡರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮಾತನಾಡಿ, ‘ಕಾರ್ಮಿಕರಷ್ಟೇ ಅಲ್ಲ, ದೇಶದ ಎಲ್ಲ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗ, ಬಡತನ, ಹಸಿವು, ಅನಾರೋಗ್ಯ, ರೈತರ ಆತ್ಮಹತ್ಯೆ ಅಧಿಕಗೊಳ್ಳುತ್ತಿವೆ. ಕಾರ್ಖಾನೆಗಳು ಮುಚ್ಚಿ ಹೋಗುತ್ತಿವೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಸಂಕಷ್ಟಗಳನ್ನು ಪರಿಹರಿಸಿ ಎಂದು ಕೇಳಿದರೆ ಪರಿಹರಿಸಲು ಕ್ರಮ ವಹಿಸುವ ಬದಲು ಮತಾಂಧತೆಯ ಅಪೀಮು ಏರಿಸುತ್ತಿದ್ದಾರೆ. ಭ್ರಮೆಗಳನ್ನು ಮಾರುತ್ತಿದ್ದಾರೆ’ ಎಂದು ಟೀಕಿಸಿದರು.

ಕಾರ್ಮಿಕ ಸಂಘಟನೆಗಳು ಕೇವಲ ಆರ್ಥಿಕ ಬೇಡಿಕೆಗಳ ಈಡೇರಿಕೆಯ ಹೋರಾಟಕ್ಕೆ ಸೀಮಿತಗೊಳ್ಳಬಾರದು. ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಬೇಕು’ ಎಂದು ಸಲಹೆ ನೀಡಿದರು. 

‘ಅನಂತರಾಮ್‌ ಅವರು ಪ್ರತಿಭಾವಂತ, ಪ್ರಾಮಾಣಿಕ ನಾಯಕ, ಶಿಸ್ತಿನ ಸಿಪಾಯಿ. ಕಾನೂನುಗಳಿಗೆ ಹೊಸ ವ್ಯಾಖ್ಯಾನ ನೀಡಿದವರು, ಎಲ್ಲ ಕಾನೂನುಗಳು ಕಾರ್ಮಿಕ ಹಿತವನ್ನು ಕಾಯಬೇಕು ಎಂದು ಪ್ರತಿಪಾದಿಸುತ್ತಿದ್ದವರು. ಅವರು ತಮಗಾಗಿ ಕೆಲಸ ಮಾಡದೇ ಇತರರಿಗಾಗಿ ಕೆಲಸ ಮಾಡಿದ್ದರಿಂದ ನಿಧನರಾದ ಬಳಿಕವೂ ನಮ್ಮೆಲ್ಲರ ಮನದಲ್ಲಿ ಬದುಕಿದ್ದಾರೆ’ ಎಂದು ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT