ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ಇಲ್ಲದಿದ್ದರೆ ನಾವೂ ಬರುತ್ತೇವೆ: ಸಿದ್ದರಾಮಯ್ಯ

ಜಿಎಸ್‌ಟಿ ಪಾಲು: ಸಿ.ಎಂಗೆ ಟ್ವೀಟ್‌
Last Updated 26 ಸೆಪ್ಟೆಂಬರ್ 2020, 21:16 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿಯವರೇ ಅಧಿಕಾರಕ್ಕಿಂತ ರಾಜ್ಯದ ಹಿತರಕ್ಷಣೆ ಮುಖ್ಯ. ರಾಜ್ಯದ ಜನರ ತೆರಿಗೆ ಹಣದ ಪಾಲನ್ನು ಮೋದಿ ಬಳಿ ಕೇಳಲು ನಿಮಗೆ ಧೈರ್ಯವಿಲ್ಲದಿದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು ನರೇಂದ್ರ ಮೋದಿ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿಯು ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿಎಸ್‌ಟಿ ದ್ರೋಹಕ್ಕೆ ಪುರಾವೆಯಾಗಿದೆ’ ಎಂದಿದ್ದಾರೆ.

‘ಜಿಎಸ್‌ಟಿ ಪರಿಹಾರ ನೀಡಲು ಸಂಗ್ರಹಿಸಲಾಗುವ ಸೆಸ್ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ. ನಿರ್ದಿಷ್ಟ ವರ್ಷ ವ್ಯಯವಾಗದೆ ಉಳಿದಿರುವ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸುವ ಅವಕಾಶವೂ ಇದೆ. ನಿರ್ದಿಷ್ಟ ಉದ್ದೇಶಕ್ಕೆ ಸಂಗ್ರಹಿಸಲಾಗುವ ಸೆಸ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆಯಾಗಿದೆ’ ಎಂದಿದ್ದಾರೆ.

‘ಕರ್ನಾಟಕಕ್ಕೆ 2021ರ ಅಂತ್ಯಕ್ಕೆ ನೀಡಬೇಕಾಗಿರುವ ಜಿಎಸ್‌ಟಿ ಪರಿಹಾರ ₹ 30,000 ಕೋಟಿ. ಇದನ್ನು ನಿರಾಕರಿಸಿ, ಆರ್‌ಬಿಐನಿಂದ ಸಾಲ ಎತ್ತಲು ಹೇಳಿರುವ ಕೇಂದ್ರ ಸರ್ಕಾರ, ಜಿಎಸ್‌ಟಿ ಪರಿಹಾರಕ್ಕಾಗಿಯೇ ಸಂಗ್ರಹಿಸಿರುವ ಸೆಸ್ ದುಡ್ಡನ್ನು ತನ್ನ ಖಾಲಿ ಖಜಾನೆಯನ್ನು ತುಂಬಲು ದುರುಪಯೋಗ ಮಾಡಿಕೊಂಡಿದೆ. ಜಿಎಸ್‌ಟಿ ಪರಿಹಾರಕ್ಕಾಗಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ ₹ 56,146 ಕೋಟಿ ಮತ್ತು ₹ 54,275 ಕೋಟಿ ಸೆಸ್ ಹಣ ವರ್ಗಾವಣೆಯಾಗಿದೆ. ಉಳಿಕೆ ಸೆಸ್ ಮೊತ್ತವನ್ನು ದುರುಪಯೋಗ ಮಾಡಿಕೊಂಡಿರುವ ಮೋದಿ ಸರ್ಕಾರದ ಅಕ್ರಮದ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದೂ
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT