ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಮಹಡಿ ಕಟ್ಟಡ ಅಕ್ರಮ ನಿರ್ಮಾಣ: ಅಧಿಕಾರಿಗಳ ಮೌನ

ಯಡಿಯೂರು ವಾರ್ಡ್‌ನಲ್ಲಿ ಅನಧಿಕೃತ ನಿರ್ಮಾಣ
Last Updated 11 ಮೇ 2022, 23:30 IST
ಅಕ್ಷರ ಗಾತ್ರ

ಬೆಂಗಳೂರು: ಯಡಿಯೂರು ವಾರ್ಡ್‌ ನಲ್ಲಿ ಬಿಬಿಎಂಪಿಯಿಂದ ಮಂಜೂರಾತಿ ಪಡೆಯದೆಯೇ ಐದು ಮಹಡಿಗಳ ಕಟ್ಟಡವನ್ನು ನಿರ್ಮಿಸಲಾಗಿದೆ. ಪಾಲಿಕೆ ವಾರ್ಡ್‌ ಕಚೇರಿ ಸಮೀಪವೇ ಭಾರಿ ಕಟ್ಟಡ ಅಕ್ರಮವಾಗಿ ನಿರ್ಮಾಣವಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಸ್ಥಳಿಯರೊಬ್ಬರು ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ ಬಳಿಕವಷ್ಟೇ ಅಧಿಕಾರಿಗಳು ಕಟ್ಟಡದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಕರಿಯಪ್ಪ ರಸ್ತೆಯ ಪಾಪು ಕಾಟೇಜ್‌ ಬಳಿ ಎಸ್‌.ಕರಿಯಪ್ಪ ರಸ್ತೆ ಬಳಿ ಸ್ವತ್ತಿನ ಸಂಖ್ಯೆಯಲ್ಲಿ 36/11ರಲ್ಲಿ ಐದು ಮಹಡಿಗಳ ಕಟ್ಟಡ ನಿರ್ಮಿಸಲಾಗಿದೆ. ಇದರ ಕಟ್ಟಡ ಯೋಜನೆಗೆ ಮಂಜೂರಾತಿ ನೀಡಿರುವ ಬಗ್ಗೆ ವಿ.ಶಶಿಕುಮಾರ್‌ ಎಂಬುವವರು ಮಾಹಿತಿ ಹಕ್ಕಿನಡಿ ಬಿಬಿಎಂಪಿಯಿಂದ ವಿವರ ಕೇಳಿದ್ದರು. ಬಿಬಿಎಂಪಿಯಿಂದ ಮಂಜೂರಾತಿಯನ್ನೇ ಪಡೆಯದೇ ಈ ಕಟ್ಟಡ ನಿರ್ಮಿಸಿರುವುದು ಗೊತ್ತಾಗಿದೆ. ಆ ಬಳಿಕ ಬನಶಂಕರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಅವರು ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248ರ ಅಡಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.

ಒಟ್ಟು 17.50 ಮೀ ಎತ್ತರವಿರುವ, ಐದು ಎಫ್‌ಎಆರ್‌ ಹೊಂದಿರುವ ಈ ಕಟ್ಟಡದ ಪ್ರತಿ ಮಹಡಿಯೂ 47.84 ಚದರ ಮೀಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ತಳಮಹಡಿ ಹಾಗೂ ಐದು ಮಹಡಿಗಳೂ ಅನಧಿಕೃತ ಎಂಬುದು ಬಿಬಿಎಂಪಿ ಅಧಿಕಾರಿಗಳು ಮಾರ್ಚ್‌ 31ರಂದು ನಡೆಸಿರುವ ತಪಾಸಣೆಯಿಂದ ತಿಳಿದುಬಂದಿದೆ. ಈ ಕಟ್ಟಡವನ್ನು ತೆರವುಗೊಳಿಸುವಂತೆ ಸೂಚಿಸಿ ಮಾಲೀಕರಿಗೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248 (1) ಹಾಗೂ (2)ರ ಅಡಿ ಎಇಇ ಅವರು ಏಪ್ರಿಲ್‌ 8ರಂದು ತಾತ್ಕಾಲಿಕ ಆದೇಶ ಜಾರಿಗೊಳಿಸಿದ್ದರು. ಅದಕ್ಕೆ ಕಟ್ಟಡದ ಮಾಲೀಕರು ಪ್ರತಿಕ್ರಿಯಿಸಿರಲಿಲ್ಲ. ಬಳಿಕ ಎಇಇ ಅವರು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248 (3)ರನ್ವಯ ಸ್ಥಿರೀಕರಣ ಆದೇಶವನ್ನು ಏಪ್ರಿಲ್‌ 19ರಂದು ಜಾರಿಗೊಳಿಸಿದ್ದಾರೆ.

‘2015ರ ಬಿಬಿಎಂಪಿ ವಲಯ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ದೃಢಪಟ್ಟಿದೆ. ಕಟ್ಟಡ ಕೆಡವಲು ಆದೇಶಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಇದನ್ನು ಕೆಡವಲು ತಗಲುವ ವೆಚ್ಚವನ್ನೂ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ’ ಎಂದು ಸ್ಥಿರೀಕರಣ ಆದೇಶದಲ್ಲಿ ಎಇಇ ಸ್ಪಷ್ಟಪಡಿಸಿದ್ದಾರೆ.

ಜಯನಗರ 6ನೇ ಬ್ಲಾಕ್‌ 27ನೇ ಅಡ್ಡ ರಸ್ತೆಯಲ್ಲಿರುವ (ಸ್ವತ್ತಿನ ಸಂಖ್ಯೆ 5) ಇನ್ನೊಂದು ಕಟ್ಟಡಕ್ಕೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248 (2)ರಡಿ ಏಪ್ರಿಲ್‌ 29ರಂದು ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಕಟ್ಟಡವನ್ನು ಅಧಿಕಾರಿಗಳು ಏಪ್ರಿಲ್‌ 26ರಂದು ಪರಿಶೀಲಿಸಿದಾಗ, ಮಂಜೂರಾತಿ ಪಡೆದ ಕಟ್ಟಡ ಯೋಜನೆ ಉಲ್ಲಂಘಿಸಿ ಶೇ 33ರಷ್ಟು ಭಾಗವನ್ನು ಹೆಚ್ಚುವರಿ ನಿರ್ಮಾಣ ಮಾಡಿರುವುದು ಪತ್ತೆಯಾಗಿತ್ತು.

‘ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಾರದೆಯೇ ಐದು ‌ಮಹಡಿಗಳ ಕಟ್ಟಡ ನಿರ್ಮಾಣವಾಗಲು ಸಾಧ್ಯವಿದೆಯೇ. ವಾರ್ಡ್‌ನ ರಾಜಕೀಯ ಮುಖಂಡರ ಬೆಂಬಲವೂ ಇದಕ್ಕಿರುವುದರಿಂದ ಕಟ್ಟಡ ಮಾಲೀಕರ ವಿರುದ್ಧ ಅವರು ಕ್ರಮಕೈಗೊಂಡಿಲ್ಲ. ಅನಧಿಕೃತ ನಿರ್ಮಾಣ ತಡೆಯಲು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ. ಆದರೆ, ವಾರ್ಡ್‌ಮಟ್ಟದಲ್ಲಿ ಅನಧಿಕೃತ ನಿರ್ಮಾಣಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ’ ಎಂದು ಶಶಿಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಎರಡು ಕಟ್ಟಡಗಳ ಅನಧಿಕೃತ ಭಾಗವನ್ನು ತೆರವುಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳು ತಿಂಗಳ ಹಿಂದಷ್ಟೇ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 248ರ ಅಡಿ ನೋಟಿಸ್‌ ಜಾರಿಗೊಳಿಸಿದ್ದರು. ಈಗ ನಿಯಮ ಉಲ್ಲಂಘಿಸಿದ ಮತ್ತೆರಡು ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಅನಧಿಕೃತ ಭಾಗದ ತೆರವಿಗೆ ಆದೇಶ ಹೊರಡಿಸಲಾಗಿದೆ.

ಎಂಜಿನಿಯರ್‌ ವಿರುದ್ಧ ಕ್ರಮ: ಮುಖ್ಯ ಆಯುಕ್ತ

‘ಅಕ್ರಮವಾಗಿ ಐದು ಮಹಡಿ ಕಟ್ಟಡ ನಿರ್ಮಿಸುವವರೆಗೂ ಸ್ಥಳೀಯ ಎಂಜಿನಿಯರ್‌ಗಳು ಸುಮ್ಮನಿರುವುದು ಸರಿಯಲ್ಲ. ಇಂತಹ ಅಸಡ್ಡೆಯನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ಅಕ್ರಮ ನಿರ್ಮಾಣಕ್ಕೆ ಸಹಕರಿಸಿರುವ ಸ್ಥಳೀಯ ಎಂಜಿನಿಯರ್‌ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಇದು ಎಲ್ಲರಿಗೂ ಪಾಠವಾಗಬೇಕು’ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕರಿಯಪ್ಪ ರಸ್ತೆಯ ಪಾಪು ಕಾಟೇಜ್‌ ಬಳಿ ತಲೆ ಎತ್ತಿರುವ ಕಟ್ಟಡ

ಪ್ರತಿ ಮಹಡಿಯೂ 47.84 ಚದರ ಮೀಗಳಷ್ಟು ವಿಸ್ತೀರ್ಣ

ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ ತಾತ್ಕಾಲಿಕ ಆದೇಶಕ್ಕೆ ಕಿಮ್ಮತ್ತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT