ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪ್ರದೇಶದಲ್ಲೇ ಬಾರ್‌, ಪಬ್‌: ಜನರ ನೆಮ್ಮದಿ ಕಸಿದ ವಾಣಿಜ್ಯ ಚಟುವಟಿಕೆ

ವಸತಿ ಬಡಾವಣೆಗಳಲ್ಲಿ ಪಬ್‌, ಬಾರ್‌ಗಳದ್ದೇ ಕಾರುಬಾರು l ಇಲಾಖೆಗಳ ನಡುವೆ ಸಮನ್ವಯ ಕನಸಿನ ಗಂಟು
Last Updated 2 ಮಾರ್ಚ್ 2020, 2:18 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿ ವಸತಿ ಬಡಾವಣೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟೇ ವಾಣಿಜ್ಯ ಚಟುವಟಿಕೆ ನಡೆಯುತ್ತಿದ್ದವು. ಅಲ್ಲಿ ವಾಸಯೋಗ್ಯ ಪ್ರಶಾಂತ ವಾತಾವರಣವಿತ್ತು. ನಗರದಲ್ಲಿ ಜನಸಂಖ್ಯೆ ಬೆಳೆದಂತೆ ವಾಣಿಜ್ಯೀಕರಣವೂ ವಿಪರೀತ ಹೆಚ್ಚಿದ್ದರಿಂದ ವಸತಿ ಬಡಾವಣೆಗಳ ವಾತಾವರಣಗಳೂ ಬದಲಾಗಿವೆ. ಒಂದು ಕಾಲದಲ್ಲಿ ನೆಮ್ಮದಿಯ ನೆಲೆಗಳಾಗಿದ್ದ ಈ ಬಡಾವಣೆಗಳಲ್ಲಿ ನಿವಾಸಿಗಳು ಮನೆಯಿಂದ ಹೊರಗೆ ಕಾಲಿಡಲು ಆಗದ ಸ್ಥಿತಿಗಳು ನಿರ್ಮಾಣವಾಗಿವೆ.

ಮಲ್ಲೇಶ್ವರ, ಬಸವನಗುಡಿ, ಜಯನಗರ, ಇಂದಿರಾನಗರ, ಕೋರಮಂಗಲ, ಎಚ್‌ಎಸ್ಆರ್ ಲೇಔಟ್, ಚಂದ್ರಾ ಲೇಔಟ್, ನಾಗರಬಾವಿ ಮುಂತಾದ ವಸತಿ ಬಡಾವಣೆಗಳು ಈಗ ತಮ್ಮ ಮೂಲ ಸ್ವರೂಪವನ್ನು ಉಳಿಸಿಕೊಂಡಿಲ್ಲ. ಎಲ್ಲೆಂದರಲ್ಲಿ ಪಬ್‌, ಬಾರ್‌, ರೆಸ್ಟೋರೆಂಟ್‌ಗಳು ಆರಂಭವಾಗಿವೆ. ಮನೆಗಳಿರಬೇಕಾದಲ್ಲಿ ಕಾರ್ಪೋರೇಟ್‌ ಕಂಪನಿಗಳ ಕಚೇರಿಗಳು ತಲೆ ಎತ್ತಿವೆ.

ಪರಿಷ್ಕೃತ ನಗರ ಮಹಾಯೋಜನೆ 2015ರ ಪ್ರಕಾರ ವಸತಿ ಪ್ರದೇಶ ಎಂದು ಗುರುತಿಸಿರುವ ಬಹುತೇಕ ಎಲ್ಲ ಪ್ರದೇಶಗಳಲ್ಲೂ ಅಂಕೆಗೆ ಸಿಗದಷ್ಟು ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ವಸತಿ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೈಕೋರ್ಟ್‌ ಕೂಡ ಇದನ್ನು ಸ್ಪಷ್ಟಪಡಿಸಿದೆ. ಮಿತಿ ಮೀರಿದ ಈ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಬೇಕು ಎಂಬ ಕೂಗಿಗೆ ಬಿಬಿಎಂಪಿ ಸ್ಪಂದಿಸುತ್ತಲೇ ಇಲ್ಲ. ಈ ಕುರಿತ ದೂರುಗಳನ್ನು ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.

ವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ವಾಣಿಜ್ಯ ಚಟುವಟಿಕೆಗಳಿಗೆ ಹಲವು ಆಯಾಮಗಳಿವೆ. ಕೆಲವೆಡೆ ಕಟ್ಟಡಗಳನ್ನು ಕಟ್ಟುವಾಗಲೇ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇನ್ನು ಕೆಲವೆಡೆ ಕಟ್ಟಡ ಕಟ್ಟುವಾಗ ಅನುಮತಿ ಪಡೆದ ಉದ್ದೇಶವೇ ಬೇರೆ, ಕಟ್ಟಡದಲ್ಲಿ ಪ್ರಸ್ತುತ ನಡೆಯುತ್ತಿರುವ ಚಟುವಟಿಕೆಯೇ ಬೇರೆ.

ಕಟ್ಟಡಗಳ ಮಾಲೀಕರು ಬಿಬಿಎಂಪಿಗೆ ನೀಡಿರುವ ಮಾಹಿತಿ ಒಂದಾದರೆ, ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂಗೆ ನೀಡಿರುವ ಮಾಹಿತಿಯೇ ಬೇರೆ. ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಮತ್ತೊಂದು ಮಾಹಿತಿ ನೀಡಿ ವಾಣಿಜ್ಯ ಚಟುವಟಿಕೆ
ಗಳನ್ನು ನಡೆಸುತ್ತಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್, ಕೋರಮಂಗಲ, ಇಂದಿರಾನಗರ ರೀತಿಯ ಬಡಾವಣೆಗಳಲ್ಲಿ ಹೆಜ್ಜೆಹೆಜ್ಜೆಗೂ ಮಸಾಜ್ ಪಾರ್ಲರ್‌ಗಳು ತಲೆ ಎತ್ತಿವೆ.ಬಿಬಿಎಂಪಿ ಕಣ್ಗಾವಲಿನಲ್ಲೇ ನಗರದಲ್ಲಿ ಹಲವು ದಶಕಗಳಿಂದ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ನೆಮ್ಮದಿಯ ಜೀವ ನಡೆಸಲು ಮನೆ ಕಟ್ಟಿಕೊಂಡಿರುವ ನಿವಾಸಿಗಳಿಗೆ ಇವು ಮುಜುಗರ ತಂದೊಡ್ಡಿವೆ. ಯಾರಿಗೆ ದೂರು ನೀಡಬೇಕು ಎಂಬುದೂ ಗೊತ್ತಾಗದೆ ಕಿರಿಕಿರಿ ಸಹಿಸಿಕೊಂಡಿದ್ದಾರೆ.

ಅನುಮತಿ ನೀಡುವ ಪ್ರಾಧಿಕಾರಗಳ ನಡುವೆ ಪರಸ್ಪರ ಸಮನ್ವಯ ಇಲ್ಲದಿರುವುದರಿಂದಾಗಿ ಕಾನೂನು ಉಲ್ಲಂಘನೆ ಮಾಡುವವರಿಗೆ ಯಾವುದೇ ಭಯ ಇಲ್ಲವಾಗಿದೆ. ವಸತಿ ಬಡಾವಣೆಗಳಲ್ಲಿ ಪಬ್‌, ಬಾರ್, ಮಸಾಜ್ ಪಾರ್ಲರ್‌ಗಳು, ಡಾನ್ಸ್ ಬಾರ್‌ಗಳು, ರೆಸ್ಟೋರೆಂಟ್‌ಗಳು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದರೂ ಹೇಳುವವರು, ಕೇಳುವವರು ಇಲ್ಲ.

‘ವಾರ್ಡ್‌ ಕಮಿಟಿಗೆ ಅಧಿಕಾರ ಕೊಡಿ’
‘ವಸತಿ ಪ್ರದೇಶದಲ್ಲಿ ವಾಣಿಜ್ಯ ಪರವಾನಗಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ವಾರ್ಡ್ ಸಮಿತಿಗೆ ಇರಬೇಕು’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ (ಎನ್‌ಬಿಎಫ್‌) ಪ್ರಧಾನ ವ್ಯವಸ್ಥಾಪಕ ಹರೀಶ್‌ಕುಮಾರ್‌ ಅಭಿಪ್ರಾಯಪಟ್ಟರು.

‘ಒಂದು ಬಡಾವಣೆಯಲ್ಲಿ ಎಷ್ಟು ಜನಸಂಖ್ಯೆ ಇದೆ, ಎಷ್ಟು ಅಂಗಡಿ ಮುಂಗಟ್ಟುಗಳು ಬೇಕು, ಎಷ್ಟು ಬಾರ್ ಮತ್ತು ರೆಸ್ಟೋರೆಂಟ್‌ಗಳು ಬೇಕು ಎಂಬುದನ್ನು ವಾರ್ಡ್ ಸಮಿತಿವೈಜ್ಞಾನಿಕವಾಗಿ ಪರಿಶೀಲಿಸಬೇಕು. ಹೆಚ್ಚುವರಿಯಾಗಿ ಬಂದ ಅರ್ಜಿಗಳನ್ನು ಮುಲಾಜಿಲ್ಲದೆ ತಿರಸ್ಕರಿಸಬೇಕು. ಸಂವಿಧಾನಬದ್ಧ ಸಮಿತಿ ಶಿಫಾರಸು ಮಾಡಿದವರಿಗೆ ಬಿಬಿಎಂಪಿಯಿಂದ ಪರವಾನಗಿ ನೀಡುವಂತಾಗಬೇಕು. ಈ ರೀತಿಯ ನಿಯಮವನ್ನು ಬಿಬಿಎಂಪಿ ರೂಪಿಸಬೇಕು’ ಎಂದರು.

‘ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಮತ್ತು ಅಬಕಾರಿ ಇಲಾಖೆ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಎಲ್ಲೆಡೆ ವಾಣಿಜ್ಯ ಚಟುವಟಿಕೆಗಳು ಅಕ್ರಮವಾಗಿ ನಡೆಯುತ್ತಿವೆ. ಈ ಸಂಬಂಧ ಪಾಲಿಕೆಗೆ 200ಕ್ಕೂ ಹೆಚ್ಚು ದೂರುಗಳನ್ನು ನೀಡಿದ್ದೇವೆ’ ಎಂದು ಹೇಳಿದರು.

‘ನೆರೆಯವರಿಗೆ ಕಿರಿಕಿರಿ’
ವಸತಿ ಬಡಾವಣೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ವಾಣಿಜ್ಯ ವಟುವಟಿಕೆಗಳು, ನೆರೆಹೊರೆಯರಿಗೆ ಕಿರಿಕಿರಿ ತಂದೊಡ್ಡುವ ಜತೆಗೆ ಅವರ ಮಕ್ಕಳನ್ನು ಹಾಳುಗೆಡಹುತ್ತಿವೆ. ಇದರ ವಿರುದ್ಧ ನಿವಾಸಿಗಳು ಆಗಾಗ ಪ್ರತಿಭಟನೆಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ, ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿಲ್ಲ.

ನಿವಾಸಿಗಳಿಂದ 354 ದೂರು
ವಸತಿ ಬಡಾವಣೆಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವಂತೆ ನಿವಾಸಿಗಳು ನಮ್ಮ ಬೆಂಗಳೂರು ಪ್ರತಿಷ್ಠಾನದ ಮೂಲಕ 354 ದೂರುಗಳನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ವಲಯವಾರು ದೂರುಗಳನ್ನು ಒಟ್ಟುಗೂಡಿಸಿ ಪ್ರತಿಷ್ಠಾನದ ಮುಖ್ಯಸ್ಥರೂ ಆಗಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಈ ಪತ್ರಕ್ಕೆ ಸ್ಪಂದನೆ ದೊರಕದ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಪತ್ರ ಬರೆದು ಗಮನ ಸೆಳೆದಿದ್ದರು.

ಆಯುಕ್ತರ ಆದೇಶಕ್ಕೆ ಕಿಮ್ಮತ್ತಿಲ್ಲ
ರಾಜೀವ್ ಚಂದ್ರಶೇಖರ್ ಅವರ ಪತ್ರ ಮತ್ತು ನಿವಾಸಿಗಳ ದೂರು ಆಧರಿಸಿ ಅಕ್ರಮ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಎಲ್ಲಾ ವಲಯಗಳ ಆಯುಕ್ತರಿಗೆ ಸೂಚನೆ ನೀಡಿದ್ದರು.

‘10 ದಿನಗಳ ಒಳಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು’ ಎಂದು ಕಟ್ಟುನಿಟ್ಟಿನ ಆಜ್ಞೆಯನ್ನೂ ಮಾಡಿದ್ದರು. ಈ ಆದೇಶವನ್ನು 2019ರ ನವೆಂಬರ್ 8ರಂದು ಹೊರಡಿಸಲಾಗಿದ್ದು, ಮೂರು ತಿಂಗಳು ಸಮೀಪಿಸಿದರೂ ವಲಯ ಮಟ್ಟದಲ್ಲಿ ಪರಿಣಾಮಕಾರಿ ಕ್ರಮಗಳು ಜಾರಿಯಾಗಿಲ್ಲ’ ಎಂದು ದೂರು ನೀಡಿದ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ನಿಯಮ ಏನು?
ಪರಿಷ್ಕೃತ ನಗರ ಮಹಾಯೋಜನೆ 2015ರ ಪ್ರಕಾರ ವಸತಿ ಪ್ರದೇಶಗಳಲ್ಲಿ 40 ಅಡಿ, ಅದಕ್ಕಿಂತ ಕಡಿಮೆ ವಿಸ್ತೀರ್ಣದ ರಸ್ತೆಗಳ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಮೊದಲು ಹಾಗೂ ಎರಡನೇ ವರ್ತುಲ ರಸ್ತೆ ಸಮೀಪ ವಾಸ ಪ್ರದೇಶಗಳಲ್ಲಿ 40 ಅಡಿ ವಿಸ್ತೀರ್ಣಕ್ಕಿಂತ ದೊಡ್ಡ ರಸ್ತೆ ಇದ್ದರೆ ಶೇ 20ರಷ್ಟು ಅಥವಾ 50 ಚದರ ಮೀಟರ್‌ನಷ್ಟು ವಾಣಿಜ್ಯ ಉದ್ದೇಶಕ್ಕೆ ಜಾಗ ಬಳಕೆ ಮಾಡಲು ಅವಕಾಶ ಇದೆ.

ಮೂರನೇ ಹಂತದ ವರ್ತುಲ ರಸ್ತೆ ಪ್ರದೇಶಗಳಲ್ಲಿ 60 ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ರಸ್ತೆಗಳಿದ್ದರೆ ಅಲ್ಲಿ ಒಂದು ಸಾವಿರ ಚದರ ಮೀಟರ್‌ನಷ್ಟು ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಇದೆ. ವಸತಿ ಪ್ರದೇಶದಲ್ಲಿ ವಾಸಕ್ಕೆ ಮಾತ್ರ ಜಾಗ ಬಳಕೆ ಮಾಡಬೇಕು. ಅದರ ಹೊರತಾಗಿ ಬೇರೆ ಉದ್ದೇಶಕ್ಕೆ ಜಾಗ ಬಳಸುವಂತಿಲ್ಲ ಎಂದು ಹೈಕೋರ್ಟ್‌ ಕೂಡ ಹೇಳಿದೆ.

8,493 ನೋಟಿಸ್
2019ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಜಿ. ಪರಮೇಶ್ವರ್ ಸೂಚನೆ ಮೇರೆಗೆ 8,493 ವಾಣಿಜ್ಯ ಕಟ್ಟಡಗಳನ್ನು ಮುಚ್ಚುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು. ಆದರೆ, 200 ವಾಣಿಜ್ಯ ಕೇಂದ್ರಗಳು ಮಾತ್ರ ಮುಚ್ಚಿದವು. ಬಿಬಿಎಂಪಿ ಮೂಲಗಳ ಪ್ರಕಾರ 2014-15ರಲ್ಲಿ ಒಟ್ಟು 58,000 ಅಕ್ರಮ ವಾಣಿಜ್ಯ ಕಟ್ಟಡಗಳು ನಗರದಲ್ಲಿದ್ದು, (2019ರ ಜನವರಿ ವೇಳೆಗೆ) ಅಕ್ರಮ ವಾಣಿಜ್ಯ ಕಟ್ಟಡಗಳ ಸಂಖ್ಯೆ 41,000ಕ್ಕೆ ಇಳಿದಿದೆ.

**

ವಲವಾರು ಸಲ್ಲಿಕೆಯಾದ ದೂರು
ಪೂರ್ವ; 230
ದಕ್ಷಿಣ; 69
ಬೊಮ್ಮನಹಳ್ಳಿ; 34
ಮಹದೇವಪುರ; 21

**

ಅಕ್ರಮ ವಾಣಿಜ್ಯ ಚಟುವಟಿಕೆಗಳಿಂದ ಅಪರಾಧ ಪ್ರಕರಣ, ಮಾಲಿನ್ಯ, ಕಸದ ಸಮಸ್ಯೆ ಹೆಚ್ಚಳವಾಗಿದೆ. ಜನರ ನೆಮ್ಮದಿ ಹಾಳು ಮಾಡಿರುವ ವಾಣಿಜ್ಯ ಕೇಂದ್ರಗಳನ್ನು ಮುಚ್ಚಿಸಬೇಕು.
-ರಾಜೀವ್ ಚಂದ್ರಶೇಖರ್,ರಾಜ್ಯಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT