ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಕಾರುಗಳ ಅಕ್ರಮ ನೋಂದಣಿ l ವಂಚನೆ: ‘ರೋಸ್‌ಮೆರ್ಟಾ’ ವ್ಯವಸ್ಥಾಪಕ ಬಂಧನ

ಜಾಲ ಭೇದಿಸಿದ ಬೆಂಗಳೂರು ಸಿಸಿಬಿ ಪೊಲೀಸರು
Last Updated 19 ಅಕ್ಟೋಬರ್ 2021, 20:23 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಕಟ್ಟಿಸಿಕೊಳ್ಳದೇ ವಾಹನಗಳ ನೋಂದಣಿ ಮಾಡಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಈ ಸಂಬಂಧ ಆರೋಪಿ ಗಿರೀಶ್ ಎಂಬಾತನನ್ನು ಮಂಗಳವಾರ ಬಂಧಿಸಿದ್ದಾರೆ.

‘ಬಂಧಿತ ಗಿರೀಶ್, ಸಾರಿಗೆ ಇಲಾಖೆಗೆ ಸ್ಮಾರ್ಟ್‌ ಕಾರ್ಡ್‌ ಹಾಗೂ ಇತರೆ ಕಾರ್ಡ್‌ಗಳನ್ನು ಪೂರೈಸುವ ‘ರೋಸ್‌ಮೆರ್ಟಾ ಟೆಕ್ನಾಲಜಿಸ್’ ಕಂಪನಿಯ ತಾಂತ್ರಿಕ ವಿಭಾಗದ ವ್ಯವಸ್ಥಾಪಕ. ತನಗೆ ನೀಡಿದ್ದ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ವಾಹನಗಳ ವಿವರವನ್ನು ಅಕ್ರಮವಾಗಿ ‘ವಾಹನ್’ ತಂತ್ರಾಂಶದಲ್ಲಿ ದಾಖಲಿಸಿ ಕೃತ್ಯ ಎಸಗುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

'ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಾಗುವುದು. ಗಿರೀಶ್ ಜೊತೆ ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಚುರುಕುಗೊಳಿಸಲಾಗಿದೆ’ ಎಂದೂ ಹೇಳಿದರು.

ಐಷಾರಾಮಿ ಕಾರುಗಳೇ ಹೆಚ್ಚು: ‘ಔಡಿ, ಬೆನ್ಜ್, ಬಿಎಂಡಬ್ಲ್ಯು, ಜಾಗ್ವಾರ್, ಲ್ಯಾಂಬೋರ್ಗಿನಿ ಹಾಗೂ ಇತರೆ ಐಷಾರಾಮಿ ಕಾರುಗಳ ನೋಂದಣಿ ಸಂದರ್ಭದಲ್ಲಿ ಅಕ್ರಮ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಐಷಾರಾಮಿ ಕಾರುಗಳ ನೋಂದಣಿ ಶುಲ್ಕ ಹೆಚ್ಚಿದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಗಿರೀಶ್ ಹಾಗೂ ಇತರರು, ತೆರಿಗೆಗಿಂತ ಕಡಿಮೆ ಹಣ ಪಡೆದು ಅಕ್ರಮವಾಗಿ ಕಾರುಗಳಿಗೆ ವಾಹನ (ಕೆಎ) ನೋಂದಣಿ ಮಾಡಿಕೊಡುತ್ತಿದ್ದರು. ಇದರಿಂದ ಆರೋಪಿಗಳು ಲಕ್ಷಾಂತರ ರೂಪಾಯಿ ಸಂಪಾದಿಸಿರುವ ಮಾಹಿತಿ ಇದೆ’ ಎಂದೂ ಹೇಳಿದರು.

ನಕಲಿ ನೋಂದಣಿ ಫಲಕ: ‘ಹೊರ ರಾಜ್ಯಗಳಲ್ಲಿ ನೋಂದಣಿ ಆಗಿರುವಂತೆ ಬಿಂಬಿಸಿ ನಕಲಿ ನೋಂದಣಿ ಫಲಕವನ್ನು ಐಷಾರಾಮಿ ಕಾರುಗಳಿಗೆ ಹಾಕುತ್ತಿದ್ದರು. ಆ ನೋಂದಣಿ ಸಂಖ್ಯೆ ಆಧರಿಸಿ ಆರೋಪಿ ಗಿರೀಶ್, ನೋಂದಣಿ ಪ್ರಕ್ರಿಯೆ ಆರಂಭಿಸುತ್ತಿದ್ದ’ ಎಂದೂ ಅಧಿಕಾರಿ ತಿಳಿಸಿದರು.

‘ಸಾರಿಗೆ ಇಲಾಖೆ ನಿಗದಿಪಡಿಸಿರುವ ತೆರಿಗೆ ಪಾವತಿಸದಿದ್ದರೂ ಆರೋಪಿ ಗಿರೀಶ್, ತೆರಿಗೆ ತುಂಬಿರುವುದಾಗಿ ಹೇಳಿ ‘ವಾಹನ್‌’ ತಂತ್ರಾಂಶದಲ್ಲಿ ಮಾಹಿತಿ ನಮೂದು ಮಾಡುತ್ತಿದ್ದ. ಇದಕ್ಕಾಗಿ ಕಾರುಗಳ ಮಾಲೀಕರು, ಪ್ರತ್ಯೇಕವಾಗಿ ಹಣ ಸಂದಾಯ ಮಾಡುತ್ತಿದ್ದರು. ಆ ಹಣವನ್ನು ಆರೋಪಿಗಳು ತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರು’ ಎಂದೂ ಹೇಳಿದರು.

ಕಾರ್ಯಾಚರಣೆಯಿಂದ ಅಕ್ರಮ ಪತ್ತೆ: ಪಶ್ಚಿಮ ಬಂಗಾಳ (ಡಬ್ಲ್ಯುಬಿ), ಪುದುಚೇರಿ (ಪಿವೈ) ಹಾಗೂ ರಾಜಸ್ಥಾನ (ಆರ್‌ಜೆ) ನೋಂದಣಿ ಸಂಖ್ಯೆ ಕಾರುಗಳು ನಗರದಲ್ಲಿ ಹೆಚ್ಚಿವೆ. ಅವುಗಳ ಮಾಹಿತಿ ಕಲೆಹಾಕಲು ಸಾರಿಗೆ ಅಧಿಕಾರಿಗಳು ನಗರದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ್ದರು.

’ಕಾರುಗಳ ದಾಖಲೆ ಪರಿಶೀಲನೆ ನಡೆಸಿದಾಗ, ನೋಂದಣಿ ಅಕ್ರಮ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಕಲೆಹಾಕಿ ಸಾರಿಗೆ ಅಧಿಕಾರಿಗಳು ಇಂದಿರಾನಗರ ಠಾಣೆಗೆ ದೂರು ನೀಡಿದ್ದರು. ಅದರ ತನಿಖೆ ಹೊಣೆಯನ್ನು ಇದೀಗ ಸಿಸಿಬಿಗೆ ವಹಿಸಲಾಗಿದೆ’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT