ಬುಧವಾರ, ಫೆಬ್ರವರಿ 19, 2020
25 °C
ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ಪ್ರಜೆಗಳಿಬ್ಬರ ಬಂಧನ

ಅಕ್ರಮ ವಾಸಿಗಳಿಗೆ ಮಠದಲ್ಲಿ ದೀಕ್ಷೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಗ್ಪುರದ ಮಠವೊಂದರಲ್ಲಿ ದೀಕ್ಷೆ ಪಡೆದುಕೊಂಡು ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ಪ್ರಜೆಗಳಿಬ್ಬರು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ತಿಯೋಲ್ ಬರೌ ಅಲಿಯಾಸ್ ದಾಸ್ ಅರ್ನಬ್ (21) ಹಾಗೂ ಅಖಿಲ್ ಬರೌ ಅಲಿಯಾಸ್ ತನ್ಮೊಯ್ ರಾಯ್ (28) ಬಂಧಿತರು. ದೇಶದಲ್ಲಿ ಅಕ್ರಮವಾಗಿ ವಾಸವಿದ್ದ ಇವರಿಬ್ಬರೂ ನಾಗ್ಪುರದ ಮಠವೊಂದರಲ್ಲಿ ದೀಕ್ಷೆ ಪಡೆದಿದ್ದರು. ಬಳಿಕ ದೇಶದಾದ್ಯಂತ ಸುತ್ತಾಡುತ್ತಿದ್ದರು. ಈ ಬಗ್ಗೆ ಅವರಿಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಲೇಷ್ಯಾಗೆ ಹೋಗಲೆಂದು ಆರೋಪಿಗಳು ಇದೇ 6ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅದೇ ವೇಳೆ ಅವರ ಪಾಸ್‌ಪೋರ್ಟ್‌ ಹಾಗೂ ಇತರೆ ದಾಖಲೆಗಳನ್ನು ಸಿಬ್ಬಂದಿ ಪರಿಶೀಲನೆಗೆ ಒಳಪಡಿಸಿದ್ದರು. ಅವರಿಬ್ಬರ ರಾಷ್ಟ್ರೀಯತೆ ಬಗ್ಗೆ ಅನುಮಾನ ಬಂದು ಹೆಚ್ಚಿನ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಬಾಂಗ್ಲಾದೇಶದ ಅದುನಗರ್‌ ನಿವಾಸಿ ಆಗಿದ್ದ ತಿಯೋಲ್, ಪ್ರವಾಸ ವೀಸಾದಡಿ ದೇಶಕ್ಕೆ ಬಂದಿದ್ದ. ಮಾಸ್ದಿಯಾದ ಅಖಿಲ್, ದೇಶದೊಳಗೆ ಅಕ್ರಮವಾಗಿ ನುಸುಳಿದ್ದ. ಇಬ್ಬರೂ ಏಜೆಂಟರೊಬ್ಬರ ಮೂಲಕ ಹಣ ನೀಡಿ ಸ್ಥಳೀಯ ಪಾಸ್‌ಪೋರ್ಟ್‌ ಪಡೆದುಕೊಂಡಿದ್ದರು’

‘ದೇಶದೆಲ್ಲೆಡೆ ಸುತ್ತಾಡುತ್ತಿದ್ದ ಅವರಿಬ್ಬರು ನಾಗ್ಪುರದ ಮಠವೊಂದಕ್ಕೆ ಹೋಗಿದ್ದರು. ಅಲ್ಲಿಯೇ ದೀಕ್ಷೆ ಪಡೆದುಕೊಂಡಿದ್ದರು. ಬಳಿಕ, ಮಠದ ಹೆಸರು ಹೇಳಿಕೊಂಡು ದೇಶದೆಲ್ಲೆಡೆ ಓಡಾಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ಮಠದ ಸಂಪರ್ಕಕ್ಕೆ ಪ್ರಯತ್ನ: ‘ಪ್ರಕರಣ ಸಂಬಂಧ ಆರೋಪಿಗಳ ಹೇಳಿಕೆ ಪಡೆಯಲಾಗಿದ್ದು, ನಾಗ್ಪುರದ ಮಠದಲ್ಲಿ ದೀಕ್ಷೆ ಪಡೆದಿರುವುದಾಗಿ ಅವರೇ ಹೇಳಿಕೊಳ್ಳುತ್ತಿದ್ದಾರೆ. ಅದರನ್ವಯ ಮಠದವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳು ಏತಕ್ಕಾಗಿ ದೇಶಕ್ಕೆ ಬಂದಿದ್ದಾರೆ, ಅವರ ಉದ್ದೇಶವೇನು ಎಂಬುದು ನಿಖರವಾಗಿ ಗೊತ್ತಾಗಿಲ್ಲ. ತನಿಖೆಯಿಂದಲೇ ಎಲ್ಲವೂ ಗೊತ್ತಾಗಬೇಕಿದೆ’ ಎಂದೂ ಮೂಲಗಳು ಹೇಳಿವೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು