ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

Published 19 ಮಾರ್ಚ್ 2024, 23:47 IST
Last Updated 19 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆ ದಾಹ ತಣಿಸುವ ಹಣ್ಣುಗಳ ಬೆಲೆ ತುಸು ಏರಿಕೆಯಾಗಿದೆ. ತರಕಾರಿ ದರ ಸ್ಥಿರವಾಗಿದ್ದರೆ, ಸೊಪ್ಪು, ನಿಂಬೆಹಣ್ಣಿನ ಬೆಲೆ ತುಸು ಏರಿಕೆ ಕಂಡಿದೆ.

ಮಾರ್ಚ್‌ನಿಂದ ಜೂನ್‌ವರೆಗಿನ ಬೇಸಿಗೆ ಅವಧಿಯಲ್ಲಿ ಹಣ್ಣುಗಳಿಗೆ ಭಾರಿ ಬೇಡಿಕೆ ಇರುತ್ತದೆ. ಮಾರುಕಟ್ಟೆಗಳಿಗೆ ತರಕಾರಿಗಳ ಆವಕ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತರಕಾರಿಗಳ ದರ ಹೆಚ್ಚಾಗಿಲ್ಲ. ಹದಿನೈದು ದಿನಗಳ ಹಿಂದೆ ಬೀನ್ಸ್‌ ದರ ಕೆ.ಜಿ.ಗೆ ₹80ಕ್ಕಿಂತ ಹೆಚ್ಚಿತ್ತು. ಈಗ ₹50ರಂತೆ ಮಾರಾಟವಾಗುತ್ತಿದೆ. ಆಲೂಗಡ್ಡೆ ಕೆ.ಜಿಗೆ ₹30, ಬೆಂಡೆಕಾಯಿ ಮತ್ತು ಬದನೆಕಾಯಿ ₹40, ಹೂಕೋಸು ₹50ರಂತೆ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ವ್ಯಾಪಾರಿಗಳಾದ ಸುಭಾಷ್‌, ಅಕ್ರಮ್‌ ತಿಳಿಸಿದರು.

ಟೊಮೆಟೊ ಕೆ.ಜಿಗೆ ₹20ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ತಮಿಳುನಾಡು ಏಲಕ್ಕಿ ಬಾಳೆಹಣ್ಣು ಬರು ತ್ತಿಲ್ಲ. ಸ್ಥಳೀಯ ಹಣ್ಣು ಮಾತ್ರ ಮಾರಾಟ ವಾಗುತ್ತಿದೆ. ಹೀಗಾಗಿ ಪ್ರತಿ ಕೆ.ಜಿಗೆ ₹70ರಂತೆ ಮಾರಾಟವಾಗುತ್ತಿದೆ.

ಹಣ್ಣು ದುಬಾರಿ: ‘ಬೇಸಿಗೆಯಲ್ಲಿ ದೇಹದ ದಾಹ ತಣಿಸಲು ಹಣ್ಣಿನ ಪಾನೀಯಗಳಿಗೆ ಜನರು ಮೊರೆಹೋಗುತ್ತಿದ್ದು, ಬಳಕೆ ಜೊತೆಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಲೆ ಕೂಡ ಜಾಸ್ತಿ ಆಗಿದೆ. ಕೆ.ಜಿ. ಸೇಬು ಹಣ್ಣು ₹120– ₹180ರವರೆಗೆ ಮಾರಾಟವಾಗುತ್ತಿದೆ. ದಾಳಿಂಬೆ, ದ್ರಾಕ್ಷಿ ಕೆ.ಜಿಗೆ ₹120ರ ದರದಲ್ಲಿ ಮಾರಾಟವಾಗುತ್ತಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ಲಕ್ಷ್ಮಣ ತಿಳಿಸಿದರು.

‘ಬೇಸಿಗೆಯಲ್ಲಿ ಸೊಪ್ಪಿನ ದರವೂ ಸ್ವಲ್ಪ ಏರಿಕೆಯಾಗಿದೆ. ಮೆಂತ್ಯ, ಕೊತ್ತಂಬರಿ ಮತ್ತು ಸಬ್ಸಿಗೆ ಪ್ರತಿ ಕಟ್ಟಿಗೆ ₹20, ಪುದೀನಾ, ಪಾಲಕ್ ಸೊಪ್ಪು ₹10ಕ್ಕೆ ಮಾರಾಟವಾಗುತ್ತಿದೆ’ ಎಂದು ಸೊಪ್ಪಿನ ವ್ಯಾಪಾರಿ ಶಿವರಾಜ್‌ ಹೇಳಿದರು.

ನಿಂಬೆಹಣ್ಣಿಗೆ ಬೇಡಿಕೆ: ವಾತಾವರಣದ ತಾಪಮಾನ‌ದಲ್ಲಿ ಏರಿಕೆ ಕಂಡು ಬರುತ್ತಿದ್ದಂತೆಯೇ, ಮಾರುಕಟ್ಟೆಯಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಧಾರಣೆಯೂ ಜಾಸ್ತಿಯಾಗಿದೆ.

ಕೆ.ಆರ್. ಮಾರುಕಟ್ಟೆಯಲ್ಲಿ  ಗಾತ್ರಕ್ಕೆ ಅನುಗುಣವಾಗಿ ಒಂದು ನಿಂಬೆಹಣ್ಣಿಗೆ ₹8ರಿಂದ ₹15ರವರೆಗೂ ದರವಿದೆ. ಚಿಕ್ಕ ಗಾತ್ರದ ನಿಂಬೆಗಳ ಬೆಲೆ ₹6 ಇದ್ದು, ಅದರಲ್ಲಿ ರಸ ಕಡಿಮೆಯಿರುವ ಕಾರಣ ಬೇಡಿಕೆಯೂ ಕಡಿಮೆ ಇದೆ ಎಂದು ವ್ಯಾಪಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT