ಬುಧವಾರ, ಸೆಪ್ಟೆಂಬರ್ 28, 2022
26 °C

ಬಿಜೆಪಿ, ಕಾಂಗ್ರೆಸ್‌ ಕಚೇರಿಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಿ ಸಂಭ್ರಮದಿಂದ ಆಚರಿಸಿದವು.

‘ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ’: ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಧ್ವಜಾರೋಹಣ ಮಾಡಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮೆಲ್ಲರ ಹಿರಿಯರು ಮತ್ತು ಅಸಂಖ್ಯಾತ ಜನರ ತ್ಯಾಗ– ಬಲಿದಾನಗಳಿಂದ ದೇಶ ಸ್ವಾತಂತ್ರ್ಯ ಪಡೆಯಿತು. 75 ವರ್ಷಗಳ ಕಾಲ ಸೈನಿಕರು ಗಡಿಯನ್ನು ಕಾದಿರುವ ಪರಿಣಾಮ ಸ್ವಾತಂತ್ರ್ಯ ಉಳಿದಿದೆ’ ಎಂದರು. ‘ಭಾರತವು ಇಂದು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಿದೆ. ಜಗತ್ತು ಭಾರತದತ್ತ ಗೌರವದಿಂದ ನೋಡುತ್ತಿದೆ. ತಿರಂಗಾಕ್ಕೆ ವಿಶ್ವದಲ್ಲೇ ಮಾನ್ಯತೆ ಬಂದಿದೆ. ರಷ್ಯ–ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಭಾರತೀಯರನ್ನು ತೆರವುಗೊಳಿಸುವಾಗ ತ್ರಿವರ್ಣಧ್ವಜಕ್ಕೆ ಇವೆರಡೂ ದೇಶಗಳ ಸೈನಿಕರು ಗೌರವ ಕೊಟ್ಟಿದ್ದರು’ ಎಂದು ಹೇಳಿದರು.

ಸ್ವಾತಂತ್ರ್ಯದ ರಕ್ಷಣೆ ಮಾಡಬೇಕು– ಡಿ.ಕೆ.ಶಿ: ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ಮಾಡಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ನಮ್ಮ ನಾಯಕರು ಕಂಡಿದ್ದ ಸಾಮಾಜಿಕ ಸಾಮರಸ್ಯವನ್ನು ತೊಡೆದು ಹಾಕಲು ಆಡಳಿತಾರೂಢ ಪಕ್ಷ ಮತ್ತು ಅವರ ಪ್ರಾಯೋಜಿತ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬ ಕಾಂಗ್ರೆಸಿಗ ಸ್ವಾತಂತ್ರ್ಯದ ರಕ್ಷಣೆಯ ಸಂಕಲ್ಪ ಮಾಡಬೇಕು. ನಮ್ಮ ನಾಯಕರು ಹೋರಾಟ ಮಾಡಿ ತಂದಿರುವ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕು’ ಎಂದರು.

ಧರ್ಮ–ಧರ್ಮಗಳ ನಡುವೆ, ಜಾತಿ– ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕಿ ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯವನ್ನು ಕಾಪಾಡಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು